ಘಟಪ್ರಭಾ: ನಾಗರ ಪಂಚಮಿಗೆ ಪರ್ಯಾಯವಾಗಿ ಬಸವ ಪಂಚಮಿ ಆಚರಿಸುವ ಮೂಲಕ ಮಾನವ ಬಂಧುತ್ವ ವೇದಿಕೆ ಪಟ್ಟಣದ ಕೆಎಚ್‌ಐ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು ವಿತರಿಸಿತು.
ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಹಾಲಿನ ಪಾಕೇಟ್ ಗಳನ್ನು ರೋಗಿಗಳಿಗೆ ವಿತರಿಸಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ ಜಾರಕಿಹೊಳಿ ಅವರು, ನಾಗರ ಪಂಚಮಿಗೆ ಪರ್ಯಾಯವಾಗಿ ಕಳೆದ 8 ವರ್ಷಗಳಿಂದ ಬಸವ ಪಂಚಮಿ ಆಚರಿಸುತ್ತ ಬರಲಾಗುತ್ತಿದೆ. ಆದರೆ ಮೌಡ್ಯ, ಮೂಢನಂಬಿಕೆ ಇರುವುದರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗಿಲ್ಲ. ಹಂತ ಹಂತವಾಗಿ ಸಮಾಜದಲ್ಲಿ ಬದಲಾವಣೆ
ತರಲು ಪ್ರಯತ್ನಿಸಲಾಗುವುದು ಎಂದರು.
12ನೇ ಶತಮಾನದಲ್ಲಿ ಬಸವಣ್ಣವರು ಜೀವಂತ ಹಾವು ಕಂಡು ಕೊಲ್ಲುವರು, ಕಲ್ಲ ನಾಗರ ಕಂಡರೆ ಹಾಲೆರೆಯುವರು ಎಂದು ಹೇಳಿದ್ದರು. ಆದರೆ ಮೂಢ ನಂಬಿಕೆ, ಮೌಡ್ಯ ಹೆಚ್ಚಳವಾಗಿದೆ ಎಂದು ವಿಷಾದಿಸಿದರು.
ಬಸವ ಪಂಚಮಿ ಕಾರ್ಯಕ್ರಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಠಾಧೀಶರು ಭಾಗವಹಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಹಾಲನ್ನು ವ್ಯರ್ಥ ಮಾಡುವ ಬದಲು ಮಕ್ಕಳಿಗೆ ಹಾಗೂ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ನೀಡಲಾಗುತ್ತಿದೆ. ಒಂದೇ ದಿನ ಮಕ್ಕಳಿಗೆ, ರೋಗಿಗಳಿಗೆ ಹಾಲು ವಿತರಿಸುವುದಕ್ಕೆ ಕಳೆದ ಬಾರಿ ಕೆಲವರು ಟೀಕೆ ಮಾಡಿದ್ದರು. ನಾವು ಒಂದು ದಿನ ಮಾತ್ರ ಹಾಲು ವಿತರಿಸುತ್ತೇವೆ. ಪ್ರತಿನಿತ್ಯವಲ್ಲ. ಜನರಲ್ಲಿ ಪರಿವರ್ತನೆ ಮಾಡುವುದೇ ನಮ್ಮ ಉದ್ದೇಶವಾಗಿದೆ
ಎಂದರು.
ಸ್ಥಳೀಯ ಕೆಂಪಯ್ಯಸ್ವಾಮಿ ಮಠದ ಮಲ್ಲಿಕಾರ್ಜುನ ಸ್ವಾಮಿಗಳು, ಡಾ| ರಾಹುಲ ವೈದ್ಯ, ಬಿ.ಎನ್.ಶಿಂಧೆ, ಪುಟ್ಟು ಖಾನಾಪೂರೆ, ರೆಹೆಮಾನ ಮೊಕಾಶಿ, ರವಿ ನಾವಿ ಇದ್ದರು.