Advertisement

ಸರಕಾರಕ್ಕೆ 48 ಗಂಟೆಗಳ ಗಡುವು ನೀಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ

09:05 PM Sep 29, 2021 | Team Udayavani |

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಉದ್ಯೋಗದ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಹಾಗೂ 2 ಎ ವರ್ಗಕ್ಕೆ ಸೇರಿಸುವ ಕುರಿತಾಗಿ ಎರಡು ದಿನದೊಳಗೆ ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸದಿದ್ದರೆ, ಅಕ್ಟೋಬರ್ 1 ರಿಂದ ‘ ‌ಧರಣಿ ಸತ್ಯಾಗ್ರಹ ‘ ಕೈಗೊಳ್ಳುವುದಾಗಿ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

Advertisement

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ 48 ಗಂಟೆಯೊಳಗೆ ತನ್ನ ನಿಲುವು ಪ್ರಕಟಿಸದಿದ್ದರೆ, ಅಕ್ಟೋಬರ್ 1 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ವನದಲ್ಲಿ ಅನಿವಾರ್ಯವಾಗಿ ಧರಣಿ ಸತ್ಯಾಗ್ರಹ  ಕೈಗೊಳ್ಳಲಾಗುವುದೆಂದು ಹೇಳಿದರು.

ಅಕ್ಟೋಬರ್ 1 ರಂದು ಮಾಜಿ ಮುಖ್ಯಮಂತ್ರಿ ದಿ.ಜೆ.ಹೆಚ್.ಪಟೇಲ್ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾರ್ಥಿ ಭವನದಲ್ಲಿ ಚಳವಳಿಗಾರರ ಸಮಾವೇಶ ನಡೆಯಲಿದೆ. ಅಂದು ಸರಕಾರದ ಪರವಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಸೇರಿದಂತೆ ಸಚಿವರು ಬಂದು ಭರವಸೆ ಕೊಟ್ಡರೆ, ತಮ್ಮ ನಿರ್ಧಾರವನ್ನು ಮರುಪರಿಶೀಲನೆ ಮಾಡುವುದಾಗಿ ಸ್ವಾಮೀಜಿ ಸ್ಪಷ್ಟಪಡಿಸಿದರು.

ಸೆಪ್ಟೆಂಬರ್ 15 ರೊಳಗೆ ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಸರ್ಕಾರ ಆಶ್ವಾಸನೆ ನೀಡಿತ್ತು. ಈಗಾಗಲೇ ಗಡುವು ಮುಗಿದಿರುವ ಕಾರಣ, ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕಿದೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಕೊಂಡರು.

ನಮಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ, ಸಚಿವ ಸಿ.ಸಿ.ಪಾಟೀಲ್ ಸೇರಿದಂತೆ ಎಲ್ಲರ ಮೇಲೆ ವಿಶ್ವಾಸವಿದೆ. ಸರಕಾರ ಕೂಡಲೇ ಸ್ಪಷ್ಟವಾದ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಗುಡುಗಿದರು.

Advertisement

ಹಿಂದುಳಿದ ವರ್ಗಗಳ ಆಯೋಗವು ಕೇಳಿರುವ ದಾಖಲೆಗಳನ್ನು ಸಲ್ಲಿಕೆ ಮಾಡಲಾಗಿದೆ. ಆಯೋಗವು ಸರಕಾರಕ್ಕೆ ‘ ಸಕಾರಾತ್ಮಕ ವರದಿ’ ನೀಡುವ ಸಾಧ್ಯತೆ ಇದೆ ಎಂಬ ವಿಶ್ವಾಸವನ್ನು ಸ್ವಾಮೀಜಿ ವ್ಯಕ್ತಪಡಿಸಿದರು.

ನಮ್ಮ‌ಸಮುದಾಯಕ್ಕೆ ಮೀಸಲಾತಿ ಅಗತ್ಯವಿದ್ದು,ಶೈಕ್ಷಣಿಕ,ಔದ್ಯೋಗಿಕವಾಗಿ ಮೀಸಲಾತಿ ಬೇಕಿದೆ.ಸಿಎಂ ಮೀಸಲಾತಿ‌ ವರದಿ ಪಡೆದುಕೊಂಡಿದ್ದಾರೆ. ಆದರೆ,ಮಾತು ಕೊಟ್ಟಂತೆ ಸರ್ಕಾರ  ನಡೆದುಕೊಳ್ಳಲಿಲ್ಲ. ಸೆಪ್ಟಂಬರ್ 15 ರ ಗಡುವು ಸರ್ಕಾರ ಮರೆತಿದೆ ಎಂದು ಬೇಸರ ಹೊರಹಾಕಿದರು.

ನಾವು ತಾತ್ಕಾಲಿಕವಾಗಿ‌ ಪ್ರತಿಭಟನೆ ವಾಪಸ್ ಪಡೆದಿದ್ದೇವು. ಮೊನ್ನೆ ನಡೆದ‌‌ ಅಧಿವೇಶನದಲ್ಲಿ ನಮ್ಮ ಹೋರಾಟ ಸಮಿತಿಯ ಮುಖಂಡರಾದ ಬಸನಗೌಡ ಪಾಟೀಲ್ ಯತ್ನಾಳ್ ಪ್ರಸ್ತಾಪ ಇಟ್ಟಿದ್ದರು.ಇದಕ್ಕೆ ‌ಸಿಎಂ ಕೂಡ ಉತ್ತರವನ್ನ ಕೊಡುವಾಗ ಗದ್ದಲ ಕೂಡ ಆಯ್ತು ಎಂದರು.

ಗದಗದಲ್ಲಿ ನಡೆದ ಸಭೆಗೆ ಸಚಿವ‌ ಸಿ.ಸಿ.ಪಾಟೀಲರು ಮೀಸಲಾತಿ ಕೊಡುತ್ತೇವೆ  ಎಂಬ ಭರವಸೆ ಕೊಟ್ಟಿದ್ದಾರೆ. ಮೀಸಲಾತಿ ಬಗ್ಗೆ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ನಮಗೆ ಸಿಎಂ ಮೇಲೆ ವಿಶ್ವಾಸವಿದೆ. ನಮ್ಮ‌ಹೋರಾಟಕ್ಕೆ ಸ್ಪಂದಿಸಿದ್ದು, ಅವರಿಂದ ಸ್ಪಷ್ಟ ನಿರ್ದೇಶನ ಹೊರಬರಬೇಕು ಎಂದು ಹೇಳಿದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರು ಶಿಫಾರಸು ಮಾಡುವುದಾಗಿ ಹೇಳಿದ್ದಾರೆ.ಅವರು ‌ನೀಡುವ ವರದಿಯನ್ನ ಸಂಪುಟದಲ್ಲಿ ಅಂಗೀಕರಿಸಬೇಕು ಎಂದು ತಿಳಿಸಿದರು.

ಅಕ್ಟೋಬರ್ 1 ರಂದು ಬೆಂಗಳೂರಿನಲ್ಲಿ ಅಭಿಯಾನ ಮುಗಿಯಲಿದೆ.ಅಂದು ಮತ್ತೊಂದು ಸಭೆಯನ್ನ‌ ನಾವು ಮಾಡುತ್ತೇವೆ‌. ಅಂದು ಸಿಎಂ ಸಂಪೂರ್ಣ ಭರವಸೆ ಕೊಡಬೇಕು. ಕೊಡದಿದ್ದರೆ ನಾವು ಅಂತಿಮ ನಿರ್ಧಾರ ತೆಗೆದುಕೊಳ್ತೇವೆ, ಮತ್ತೆ ಸತ್ಯಾಗ್ರಹ ಹಾದಿ ಅನಿವಾರ್ಯವಾಗಲಿದೆ ಎಂದು ಸರಕಾರಕ್ಕೆ ಎಚ್ಚರಿಕೆ ಸಂದೇಶವನ್ನು ಸ್ವಾಮೀಜಿ ರವಾನಿಸಿದರು.

ಪಂಚಮಸಾಲಿಗಳಿಗೆ ಮೀಸಲಾತಿ ಕೊಡಿಸುವುದಷ್ಟೇ ಗುರಿಯಾಗಿದೆ. ನನಗೆ ಅವಕಾಶ ಕೊಟ್ಟ ಸಮುದಾಯಕ್ಕೆ ಒತ್ತುಕೊಡಬೇಕು. ಮನೆ ಗೆದ್ದು ಮಾರ್ಗ ಗೆಲ್ಲಬೇಕು.ಮೊದಲು ಸಮುದಾಯದ ಪರ ಧ್ವನಿ ಎತ್ತಿದ್ದೇನೆ ಎಂದು ತಮ್ಮ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು.

ಬೇರೆ ಸಮುದಾಯಗಳ ಪರವೂ ಧ್ವನಿ ಎತ್ತುತ್ತೇನೆ. ಉಳಿದ ಸಮುದಾಯಕ್ಕೂ‌ ಮೀಸಲಾತಿ ಕೊಡಬೇಕು. ಇದು ನಮ್ಮ ಹೋರಾಟದ ಗುಣವೂ ಹೌದು. ಎಲ್ಲರನ್ನ‌ ಒಟ್ಟಾಗಿ ಕರೆದೊಯ್ಯುವುದೇ ನಮ್ಮ ಉದ್ದೇಶ.ನಾವುಇನ್ನೊಬ್ಬರ ಮೀಸಲಾತಿ ನಾವು ಕಿತ್ತುಕೊಳ್ಳುತ್ತಿಲ್ಲ ಎಂದು ತಮ್ಮ ‌ಹೋರಾಟವನ್ನು ವಿರೋಧಿಸುವವರಿಗೆ ತಿರುಗೇಟು ನೀಡಿದರು.

ವಾಲ್ಮೀಕಿ, ಹಾಲುಮತ ಸಮುದಾಯಗಳಿಗೂ ಮೀಸಲಾತಿ ಕೊಡಿ ಎಂದು ಕೇಳಿದ್ದೇವೆ.ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ.ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ತಿಳಿಸಿದರು.

ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ವೇದಿಕೆ ‌ಅಧ್ಯಕ್ಷ ಹಾಗೂ ಮಾಜಿ ಶಾಸಕ  ವಿಜಯಾನಂದ ಕಾಶಪ್ಪನವರ್ ಮಾತನಾಡಿ.ಇದು ನಮಗೆ ಮಾಡು ಅಥವಾ ಮಡಿಯುವ ಹೋರಾಟ.ಸ್ವಾತಂತ್ರ್ಯಕ್ಕಾಗಿ ಅನೇಕ‌ ಹೋರಾಟ ನಡೆಸಲಾಗಿತ್ತು.ಹೋರಾಟದ ಮೂಲಕವೇ ಬೇಡಿಕೆ ಈಡೇರಿಸಿಕೊಳ್ಳಬೇಕು ಎಂದು ಹೇಳಿದರು.

ನಾವು 39 ದಿನಗಳ ಕಾಲ ನಾವು ಪಾದಯಾತ್ರೆ ಮಾಡಿದ್ದೆವು. ಸರ್ಕಾರವೇ ಮುಂದೆ ಬಂದು ಸ್ಪಂದಿಸಿದೆ. ಮಾಜಿ ಸಿ.ಎಂ.ಯಡಿಯೂರಪ್ಪನವರೇ ಆರು ತಿಂಗಳು ಕೇಳಿದ್ದರು.ಈಗ ಆರು ತಿಂಗಳ ಸಮಯ ಮುಗಿದಿದೆ.ಹಾಗಾಗಿ ಸರ್ಕಾರ ಸ್ಪಷ್ಟವಾದ ಭರವಸೆ ಕೊಡಬೇಕು ಎಂದು ‌ಒತ್ತಾಯ ಮಾಡಿದರು.

ಶ್ರೀಗಳಿಗೆ ಸಿಎಂ, ಸಚಿವರು ಭರವಸೆ ಕೊಟ್ಟಿದ್ದಾರೆ‌‌ಅವರು ಹೇಳಿದಂತೆ ನಡೆದುಕೊಳ್ಳಬೇಕು.ನಾವು ಹೋರಾಟ ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ.ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು.ಇಲ್ಲವಾದರೆ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next