ಬೆಂಗಳೂರು: ವೀರಶೈವ ಲಿಂಗಾಯತರಿಗೆ ಪ್ರವರ್ಗ 2ಡಿ ಅಡಿ ಶೇ. 7 ಮೀಸಲಾತಿ ಕಲ್ಪಿಸಲು ಒಪ್ಪಿರುವ ರಾಜ್ಯ ಸರ್ಕಾರದ ತೀರ್ಮಾನವನ್ನು ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿ ಒಪ್ಪಿಕೊಂಡಿದೆ. ಆದರೆ ಕೇಂದ್ರದ ಒಬಿಸಿ ಮೀಸಲಾತಿಗಾಗಿ ಪ್ರಯತ್ನ ಮುಂದುವರಿಸುವುದಾಗಿ ಸಮಿತಿ ಹೇಳಿದೆ.
ಪಂಚಮಸಾಲಿಗಳಿಗೆ 2ಎ ಅಡಿ ಶೇ. 15ರಷ್ಟು ಮೀಸಲಾತಿ ನೀಡಬೇಕೆಂದು ಕೂಡಲ ಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಸಂಘಟಿಸಲಾಗಿತ್ತು. ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಶೇ. 7ರಷ್ಟು ಮೀಸಲಾತಿ ಕಲ್ಪಿಸಿ ಸರ್ಕಾರ ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಶನಿವಾರ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟದ ಮುಂಚೂಣಿಯಲ್ಲಿದ್ದ ಶಾಸಕ, ಹೋರಾಟ ಸಮಿತಿಯ ಅಧ್ಯಕ್ಷ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮಾಜಿ ಶಾಸಕ, ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಅವರ ಜೊತೆ ಚರ್ಚಿಸಿ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ತೀರ್ಮಾನವನ್ನು ಸ್ವಾಮೀಜಿ ಪ್ರಕಟಿಸಿದರು.
ಮೀಸಲಾತಿಗಾಗಿ ಕಳೆದ 70 ದಿನಗಳಿಂದ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸುತ್ತಿದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಯಾತ್ನಾಳ್ ಅವರು ನಮ್ಮ ಬೇಡಿಕೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟರು.
ತಡವಾಗಿಯಾದರೂ ಎಲ್ಲ ಲಿಂಗಾಯತ ಸಮುದಾಯದೊಂದಿಗೆ ನಮಗೂ ಮೀಸಲಾತಿ ಕಲ್ಪಿಸಿರುವುದು ಸಮಾಧಾನ ತಂದಿದೆ. ನಮ್ಮ ಹೋರಾಟಕ್ಕೆ ಅಖೀಲ ಭಾರತ ವೀರಶೈವ ಮಹಾಸಭಾ ಬೆಂಬಲ ನೀಡಲಿಲ್ಲ. ಸಿದ್ಧಗಂಗಾ ಮಠ ಮತ್ತು ಉತ್ತರ ಕರ್ನಾಟಕದ ಕೆಲ ಮಠಗಳನ್ನು ಬಿಟ್ಟರೆ ಬೇರೆ ಯಾವುದೇ ಮಠಗಳು ನಮ್ಮ ಬೆಂಬಲಕ್ಕೆ ನಿಲ್ಲಲ್ಲಿಲ್ಲ. ಶೇ. 100 ರಷ್ಟು ನಮ್ಮ ಗುರಿ ಈಡೇರದಿದ್ದರೂ ಮೊದಲ ಹೆಜ್ಜೆಯನ್ನು ಯಶಸ್ವಿಯಾಗಿಟ್ಟಿದ್ದೇವೆ ಎಂದು ಭಾವುಕವಾಗಿ ಹೇಳಿದರು.
Related Articles
2ಎಯಲ್ಲಿ ಏನೆಲ್ಲಾ ಸವಲತ್ತುಗಳು ಇವೆಯೋ ಅವೆಲ್ಲವೂ 2ಡಿ ಯಲ್ಲೂ ಸಿಗಲಿದೆ ಎಂದು ದೃಢೀಕರಿಸಿಕೊಂಡಿದ್ದೇನೆ. ಈ ಹಿನ್ನೆಲೆಯಲ್ಲಿ ಹೋರಾಟವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದ್ದೇವೆ ಎಂದು ಸ್ವಾಮೀಜಿ ಹೇಳಿದರು.
ಸ್ವಾಮೀಜಿ ಶಪಥ: ರಾಜ್ಯಪತ್ರ ಬಾರದೇ ಕೂಡಲ ಸಂಗಮಕ್ಕೆ ಹೋಗಲ್ಲ, ರಾಜ್ಯ ಸರಕಾರ ಸಚಿವ ಸಂಪುಟದ ತೀರ್ಮಾನದ ರಾಜ್ಯಪತ್ರ ಅಧಿಸೂಚನೆಯನ್ನು ನೀತಿ ಸಂಹಿತೆ ಜಾರಿಗೆ ಮುನ್ನವೇ ಹೊರಡಿಸಬೇಕು. ರಾಜ್ಯಪತ್ರ ಸಿಗುವ ತನಕ ತಾನು ಕೂಡಲ ಸಂಗಮಕ್ಕೆ ಹೋಗುವುದಿಲ್ಲ ಎಂದು ಸ್ವಾಮೀಜಿ ಶಪಥ ಮಾಡಿದ್ದಾರೆ. ಹಾಗೆಯೇ ಕೇಂದ್ರದ ಒಬಿಸಿ ಮೀಸಲಾತಿಗಾಗಿ ಚುನಾವಣೆ ಬಳಿಕ ಹೋರಾಟ ಮುಂದುವರಿಸೋಣ ಎಂದು ಸ್ವಾಮೀಜಿ ಕರೆ ನೀಡಿದ್ದಾರೆ.
ಮೀಸಲಾತಿಯಲ್ಲಿಯೇ ಬಹಳ ದೊಡ್ಡ ಕ್ರಾಂತಿ: ಯತ್ನಾಳ್
ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರ ನಿರಂತರ ಹೋರಾಟದಿಂದ ಕ್ಯಾಬಿನೆಟ್‌ನಲ್ಲಿ ಮಹತ್ವದ ನಿರ್ಧಾರವಾಗಿದೆ. 2ಎ ಪ್ರವರ್ಗದಡಿಯಲ್ಲಿನ ಎಲ್ಲ ಸೌಲಭ್ಯಗಳನ್ನು ಬಿ, ಸಿ, ಡಿಗೆ ಸಿಗುವಂತೆ ನಿರ್ಧಾರ ಮಾಡಲಾಗಿದೆ. ಪಂಚಮಸಾಲಿಗಳನ್ನು 2ಡಿಗೆ ವರ್ಗಾವಣೆ ಮಾಡಿ ಶೇ. 2 ಮೀಸಲಾತಿ ಹೆಚ್ಚಳ ಮಾಡಲಾಗಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತಮ್ಮನ್ನು ಮೂರು ಬಾರಿ ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದರು. ಹೀಗಾಗಿ ಸಚಿವ ಸಂಪುಟದಲ್ಲಿ ತೀರ್ಮಾನ ಆಯಿತು. ನ್ಯಾಯಾಲಯವು ಸಹ ಪ್ರವರ್ಗ ಮಾಡಲು ಅನುಮತಿ ಕೊಟ್ಟಿತು. ಮೀಸಲಾತಿಯಲ್ಲಿಯೇ ಬಹುದೊಡ್ಡ ಕ್ರಾಂತಿ ಆಗಲಿದೆ. ನಮ್ಮದು ರಾಜಕೀಯ ಲಾಭಕ್ಕಾಗಿನ ಹೋರಾಟವಲ್ಲ, ಸಮುದಾಯದ ಒಳಿತಿಗಾಗಿನ ಹೋರಾಟ. ಈಗ ಈ ಸತ್ಯಾಗ್ರಹ ಸ್ಥಗಿತಗೊಳಿಸುತ್ತೇವೆ ಎಂದು ಹೇಳಿದರು.
ವಿಜಯಾನಂದ ಕಾಶಪ್ಪನವರ್ ಅಪಸ್ವರ: ಹೋರಾಟವನ್ನು ಸ್ಥಗಿತಗೊಳಿಸುವುದಾಗಿ ಸ್ವಾಮೀಜಿ ಪ್ರಕಟಿಸಿದರು. ಯತ್ನಾಳ್ ಇದನ್ನು ಅನುಮೋದಿಸಿದರು. ಆದರೆ ಮಾಜಿ ಶಾಸಕ, ಕಾಂಗ್ರೆಸ್‌ನ ವಿಜಯಾನಂದ ಕಾಶಪ್ಪನವರ್ ಇದಕ್ಕೆ ವಿರೋಧ ವ್ಯಕ್ತಪಡಿಸಿ ಸಮಿತಿಗೆ ರಾಜೀನಾಮೆ ನೀಡಿದರು. ಈ ಸಂದರ್ಭದಲ್ಲಿ ಸ್ವಾಮೀಜಿ ಭಾವುಕರಾದರು.