Advertisement

Basangouda Patil Yatnal, ಸೋಮಣ್ಣ ಸೇರಿ ಹಿರಿಯರ ಭೇಟಿ: ಬಿ.ವೈ.ವಿಜಯೇಂದ್ರ

09:58 PM Nov 13, 2023 | Team Udayavani |

ಬೆಂಗಳೂರು: ಹಿರಿಯ ನಾಯಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ವಿ. ಸೋಮಣ್ಣ ಸೇರಿ ಬಿಜೆಪಿಯ ಎಲ್ಲ ಹಿರಿಯ ನಾಯಕರನ್ನು ಖುದ್ದಾಗಿ ಭೇಟಿಯಾಗಿ ಸಮಾಲೋಚನೆ ನಡೆಸುವುದಾಗಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

Advertisement

ಮಾಜಿ ಸಚಿವ ಆರ್‌.ಅಶೋಕ್‌ ಅವರನ್ನು ಪದ್ಮನಾಭನಗರದ ಅವರ ಕಚೇರಿಯಲ್ಲಿ ಭೇಟಿಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿ ಪಕ್ಷದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದಾಗಿ ತಿಳಿಸಿದರು. ಈ ಸರ್ಕಾರವನ್ನು ಕಾಂಗ್ರೆಸ್‌ ಶಾಸಕರೇ ಬಹಿರಂಗವಾಗಿ ಟೀಕಿಸುತ್ತಿದ್ದಾರೆ. ಬರ ನಿರ್ವಹಣೆಯಲ್ಲಿ ನಮ್ಮ ಸರಕಾರ ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದು ಆ ಪಕ್ಷದ ಉತ್ತರ ಕರ್ನಾಟಕದ ಶಾಸಕರೊಬ್ಬರು ಹೇಳಿದ್ದಾರೆ.

ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಬರಕ್ಕೆ ಸಂಬಂಧಿಸಿ ಜಿಲ್ಲಾ ಪ್ರವಾಸ ಮಾಡುತ್ತಿಲ್ಲ ಎನ್ನುತ್ತಾರೆ. ಒಂದು ರೂಪಾಯಿ ಅನುದಾನ ಬಂದಿಲ್ಲವೆಂದು ಮತ್ತೊಬ್ಬ ಶಾಸಕರು ಹೇಳುತ್ತಾರೆ. ಇನ್ನೊಂದು ಕಡೆ ರಾಜ್ಯದ ಹಣಕಾಸು ಪರಿಸ್ಥಿತಿ ಹದಗೆಟ್ಟಿದೆ. ದಿವಾಳಿ ಅಂಚಿಗೆ ತಲುಪಿದ್ದಾಗಿ ಆಡಳಿತ ಪಕ್ಷದ ಶಾಸಕರು ಮಾತನಾಡುತ್ತಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು.

136 ಶಾಸಕರು ಸಾಕಾಗಲಿಲ್ಲವೇ?: ಇತರ ಪಕ್ಷಗಳ ಹಲವು ಶಾಸಕರು ಕಾಂಗ್ರೆಸ್‌ ಸೇರುವ ಕುರಿತ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, 136 ಶಾಸಕರಿದ್ದಾರೆ ಅವರಿಗೆ ಸಾಕಾಗಲಿಲ್ಲವೇ? ಎಂದು ಪ್ರಶ್ನಿಸಿದರು. ಈ ರೀತಿಯ ಉಡಾಫೆ ಮಾತನಾಡುವ ಬದಲು ರಾಜ್ಯದ ಜನ, ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದರೆ ಒಳಿತಾಗಲಿದೆ ಎಂದು ತಿಳಿಸಿದರು.

ಮಾಜಿ ಸಚಿವ ಅಶೋಕ್‌ ಮಾತನಾಡಿ, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನಿವಾಸದ ಬದಲಾಗಿ ನನ್ನ ಕೋರಿಕೆ ಮೇರೆಗೆ ನನ್ನ ಕಚೇರಿಗೆ ಬಂದಿದ್ದಾರೆ. ಹಿರಿಯರಾದ ದೊರೆಸ್ವಾಮಿ ನಾಯ್ಡು ಅವರನ್ನು ಭೇಟಿ ಮಾಡಿದ್ದೇವೆ. ಕರ್ನಾಟಕದಲ್ಲಿ ದುರಾಡಳಿತ ಮಾಡುತ್ತಿರುವ ಕಾಂಗ್ರೆಸ್‌ ವಿರುದ್ಧ ದೊಡ್ಡ ಹೋರಾಟ ಮಾಡುವುದೇ ನಮ್ಮೆಲ್ಲರ ಗುರಿ ಎಂದರು.

Advertisement

ವಿಜಯೇಂದ್ರರ ಎದುರು ದೊಡ್ಡ ಸವಾಲಿದೆ. ಭ್ರಷ್ಟ ಸರಕಾರ ಕಿತ್ತೂಗೆಯಲು ನೇತೃತ್ವ ವಹಿಸಲು ನರೇಂದ್ರ ಮೋದಿಜಿ, ಅಮಿತ್‌ ಶಾ, ನಡ್ಡಾ ಅವರು ಅವಕಾಶ ಕೊಟ್ಟಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆಲ್ಲುವುದು, ರಾಜ್ಯದಲ್ಲಿ ವರ್ಗಾವಣೆ ದಂಧೆ, ದುರಾಡಳಿತನಿರತ, ಅಭಿವೃದ್ಧಿ ಕಾರ್ಯ ಸ್ಥಗಿತಕ್ಕೆ ಕಾರಣವಾದ ಸರಕಾರದ ವಿರುದ್ಧವಾಗಿ ಅದರ ಚಳಿ, ಜ್ವರ ಎರಡನ್ನೂ ಬಿಡಿಸಲು ದೊಡ್ಡ ಹೋರಾಟ ನಡೆಸಬೇಕಿದೆ. ಅಂಥ ದೊಡ್ಡ ಜವಾಬ್ದಾರಿ ಹೊರುತ್ತಿರುವ ವಿಜಯೇಂದ್ರರಿಗೆ ಶುಭಾಶಯಗಳು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next