ನವಲಗುಂದ: ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತದೆ. ಪ್ರಹ್ಲಾದ್ ಜೋಶಿ ಹಾಗೂ ಬಿ.ಎಲ್. ಸಂತೋಷ್ ಮುಖ್ಯಮಂತ್ರಿ ಆಗುವುದಿಲ್ಲ. ಎರಡನೇ ಜನರೇಶನ್ ಲಿಂಗಾಯತ ವ್ಯಕ್ತಿಯೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತರಿಗೆ ಬಿಜೆಪಿಯಲ್ಲಿ ಯಾವುದೇ ಅನ್ಯಾಯ ಆಗಿಲ್ಲ. ಶೆಟ್ಟರ್ ಶಾಸಕ, ಮಂತ್ರಿ, ಸಿಎಂ, ಸ್ಪೀಕರ್, ಡಿಸಿಎಂ ಆಗಿ ಸುಖ ಉಂಡಿದ್ದಾರೆ. ದುಡಿಯಲಾರದೇ ದುಃಖಪಡಲಾರದೇ ಸುಖ ಉಂಡಿದ್ದಾರೆ. ಪಕ್ಷ ಬಿಟ್ಟು ಹೋಗುವವರು ಹೋಗಿದ್ದಾರೆ.
ಈಗ ಎಲ್ಲವೂ ನಮ್ಮ ಕೈಯಲ್ಲಿ ಬರುವುದಿದೆ. ಶೆಟ್ಟರ್, ಶಾಮನೂರ್, ಎಂ.ಬಿ. ಪಾಟೀಲ ಇವರೆಲ್ಲ ಬೀಗರು. ಬೇರೆ ಬೇರೆ ಪಕ್ಷದಲ್ಲಿದ್ದಾಗ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದರು. ಈಗ ಬೀಗರೆಲ್ಲರೂ ಒಂದೇ ಪಕ್ಷದಲ್ಲಿ ಸೇರ್ಪಡೆಗೊಂಡಿದ್ದಾರೆ ಎಂದರು.