ವಿಜಯಪುರ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರ ವಿರುದ್ಧ ಹಾಗೂ ಅವರ ಭ್ರಷ್ಟಾಚಾರ ಬಗ್ಗೆ ಡಿ.ವಿ.ಸದಾನಂದ ಗೌಡರು ಕೆಟ್ಟವಾಗಿ ಮಾತನಾಡಿದ್ದಾರೆ. ಅವರು ನಮ್ಮ ಮುಂದೆ ಬಹಳ ಮಾತನಾಡಿದ್ದು, ಅದನ್ನು ಬಿಚ್ಚಿಟ್ಟರೆ ಎಲ್ಲರ ಬಣ್ಣ ಬಯಲಾಗುತ್ತದೆ. ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳವುದು ಒಳ್ಳೆಯದು. ತಾವು ಮಾತನಾಡಿಲ್ಲ ಎಂದು ಧರ್ಮಸ್ಥಳದ ಮಂಜುನಾಥನ ಬಳಿಗೆ ಸದಾನಂದ ಗೌಡರು ಬರಲು ಸಿದ್ಧರಿದ್ದಾರೆಯೇ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಯತ್ನಾಳ್, ನಾವು ವಿಜಯೇಂದ್ರ ವಿರುದ್ಧ ಮಾತನಾಡಿಲ್ಲ. ಪಕ್ಷದ ವಿರುದ್ಧವೂ ಮಾತನಾಡಿಲ್ಲ. ನಾವು ಕೇವಲ ವಕ್ಫ್ ವಿಷಯವಾಗಿ ಮಾತನಾಡುತ್ತಿದ್ದೇವೆ. ಸದಾನಂದ ಗೌಡರು ಇಷ್ಟೊಂದು ಯಾಕೆ ಗಾಬರಿಗೊಂಡಿದ್ದಾರೆ. ನಾನು ಎಂದು ಯಡಿಯೂರಪ್ಪ ಕುಟುಂಬದ ವಿರುದ್ಧ ಎಂದೂ ಕೆಟ್ಟ ಮಾತನಾಡಿಲ್ಲ. ಅವರು (ಸದಾನಂದ ಗೌಡ) ಅಷ್ಟೊಂದು ಕೆಟ್ಟ ಮಾತುಗಳನ್ನಾಡಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತಿದೆ. ರೈತರು, ಮಠ, ಮಂದಿರ, ಜನರಿಗಾಗಿ ನಾವು ನಮ್ಮ ಹೋರಾಟ ಮಾಡುತ್ತಿದ್ದು, ಈ ಹೋರಾಟ ಬಿಡುವುದಿಲ್ಲ. ನಾವು ರಾಜ್ಯಾಧ್ಯಕ್ಷರಾಗಬೇಕು, ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಹೋರಾಟ ಮಾಡುತ್ತಿಲ್ಲ. ಇದು ಯಾವುದೇ ಕುಟುಂಬದ ವಿರುದ್ಧದ ಹೋರಾಟವೂ ಅಲ್ಲ. ಯಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ಬಗ್ಗೆಯೂ ಹೋರಾಟವಲ್ಲ.ನೀವ್ಯಾಕೆ ಗಾಬರಿ ಆಗುತ್ತೀರಿ. ಸದಾನಂದ ಗೌಡರ ಕೆಲಸ ಏನಿದೆ ಎಂದೂ ಪ್ರಶ್ನಿಸಿದ ಯತ್ನಾಳ್, ನಾಗರಹಾವು-ಎರೆಹುಳು ಎತ್ತಣಿಂದೆತ್ತ ಸಂಬಂಧವಯ್ಯ ಸದಾನಂದಾ?, ನಿನಗೂ, ನೀನು ಮಾತನಾಡಿದ ಕೃತಿ, ನಾಲಿಗೆಗೂ ಎತ್ತಣಿಂದೆತ್ತ ಸಂಬಂಧವಯ್ಯ ಸದಾನಂದಾ?. ಇದು ನನ್ನ ಹೊಸ ಕೂಡಲಸಂಗಮ ವಾಣಿ ಎಂದು ಕುಟುಕಿದರು.
ನಿನ್ನೆ ಒಬ್ಬವ ದೀಪ ಹಾರುವ ಮುಂಚೆ ಜಾಸ್ತಿ ಉರಿಯುತ್ತದೆ ಎಂದು ಹೇಳಿದ್ದಾನೆ. ಅವರ ದೀಪವೇ ಹಾರಿಹೋಗಿದೆ. ಅವುಗಳ ಬಗ್ಗೆ ನಾವು ಮಾತನಾಡಿದರೆ, ನಮಗೆ ಹಾಫ್ ಮ್ಯಾಡ್ ಎನ್ನುತ್ತಾರೆ. ನಾನು ಸದಾನಂದ ಗೌಡ, ಬಿ.ಸಿ.ಪಾಟೀಲ್ ಬಗ್ಗೆ ಮಾತನಾಡಿಲ್ಲ. ಸುಮ್ಮಸುಮ್ಮನೆ ಅವರೇ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ವಂಶವಾದ ಒಪ್ಪುವುದಿಲ್ಲ. ಪ್ರಧಾನಿ ಮೋದಿ ಅವರೇ ವಂಶವಾದ ಅಳಿಸುವುದಾಗಿ ಹೇಳಿದ್ದಾರೆ. ಮಾತೆತ್ತಿದ್ದರೆ ಪಕ್ಷಕ್ಕಾಗಿ ದುಡಿದಿದ್ದೇವೆ, ಸೈಕಲ್ ಮೇಲೆ ಅಡ್ಡಾಡಿದ್ದೇವೆ ಎನ್ನುತ್ತಾ ನಾಲ್ಕು ಸಲ ಸಿಎಂ ಆಗಿದ್ದೀರಿ. ಪಕ್ಷ ಕೂಡ ನಿಮಗೆ ಕೊಟ್ಟಿದೆ. ನಿಮ್ಮ ಒಬ್ಬ ಮಗನ ಸಂಸದ, ಮತ್ತೊಬ್ಬ ಮಗನ ರಾಜ್ಯಾಧ್ಯಕ್ಷ, ಶಾಸಕರನ್ನಾಗಿ ಮಾಡಲಾಗಿದೆ. ನಾವೂ ಸಹ ಸೈಕಲ್ ಮೇಲೆ ಅಡ್ಡಾಡಿ ಪಕ್ಷ ಕಟ್ಟಿದ್ದೇವೆ. ನೀವು ನನ್ನ ಹೆಸರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲೂ ಹಾಕಿಲ್ಲ. ನಮ್ಮದು, ಬೊಮ್ಮಾಯಿ ಅವರದ್ದು ಒಳ್ಳೆಯ ಸಂಬಂಧವಿತ್ತು. ಶಿಗ್ಗಾವಿಯಲ್ಲಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಜನ ಬೊಮ್ಮಾಯಿ ಅವರನ್ನು ಸೋಲಿಸಬಾರದಿತ್ತು. ಒಮ್ಮೆ ಮತದಾರರೂ ತಪ್ಪು ನಿರ್ಣಯ ತೆಗೆದುಕೊಳ್ಳುತ್ತಾರೆ, ದುರ್ದೈವ ಎಂದರು.
ನನಗೂ ದೆಹಲಿಯಿಂದ ಫೋನ್: ನನಗೂ ದೆಹಲಿಯಿಂದ ಫೋನ್ ಬಂದಿದೆ. ನಾನು ಬರುವುದಿಲ್ಲ ಎಂದಿದ್ದೇವೆ. ಭ್ರಷ್ಟಾಚಾರ, ವಂಶವಾದ, ವಕ್ಫ್ ವಿರುದ್ಧ ನಾವು ತಂಡ ಕಟ್ಟಿಕೊಂಡು ಹೋರಾಟ ಮಾಡುತ್ತಿದ್ದೇವೆ. ಇಡೀ ತಂಡವನ್ನು ದೆಹಲಿಗೆ ಕರೆಸಲಿ. ಕರ್ನಾಟಕದಲ್ಲಿ ಏನು ನಡೆದಿದೆ ಎಂದು ನಾವು ಹೇಳುತ್ತೇವೆ. ಯತ್ನಾಳ್ ಒಬ್ಬನ ಕರೆದು ಸಮಾಧಾನ ಮಾಡಿ, ನನಗೆ ಬೆದರಿಸುವುದು, ಅಂಜಿಸುವುದಾಗಿ ತಿಳಿದುಕೊಂಡಿದ್ದರೆ, ನಾನು ಯಾವುದಕ್ಕೂ ಹೆದರುವುದಿಲ್ಲ. ಕ್ಷಮೆ ಕೇಳುವುದಿಲ್ಲ. ಈವರೆಗೆ ಮಾತನಾಡಿದ ಮಾತುಗಳಲ್ಲಿನ ಒಂದೇ ಒಂದು ಪದ ವಾಪಸ್ ತೆಗೆದುಕೊಳ್ಳಲ್ಲ ಎಂದು ಯತ್ನಾಳ್ ತಿಳಿಸಿದರು.
ನಾನು ಸಿದ್ದರಾಮಯ್ಯನ ಮುಖ ನೀಡಿಲ್ಲ: ನಾನು ಇದುವರೆಗೂ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನ ಮುಖ ನೋಡಿಲ್ಲ. ವಿಧಾನಸೌಧದಲ್ಲಿ ಅಷ್ಟೇ ನಾನು ಅವರನ್ನು ನೋಡುತ್ತೇನೆ. ಅವರ ಮನೆಗೂ ಎಂದೂ ಕಾಲಿಟ್ಟಿಲ್ಲ. ಡಿ.ಕೆ.ಶಿವಕುಮಾರ್ ಮನೆಗೂ ಎಂದೂ ಕಾಲಿಟ್ಟಿಲ್ಲ. ನನ್ನ ಪರವಾಗಿ ಏನಾದರೂ ಮಾಡಿ ಅಂತನೂ ಅಂಗಲಾಚಿಲ್ಲ. ನನ್ನ ಬಗ್ಗೆ ಮಾತನಾಡುವವರ ಬಳಿ ಏನಾದರೂ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಎಲ್ಲರೂ ಹೋಗಿ ರಾತ್ರಿ ಭೇಟಿ ಮಾಡುತ್ತಾರೆ. ಹಗರಣಗಳು, ಪ್ರಕರಣಗಳ ಬಗ್ಗೆ ಬ್ಲಾö್ಯಕ್ಮೇಲ್ ಮಾಡುತ್ತಿದ್ದಾರೆ. ನನಗೂ ಬ್ಲಾಕ್ ಮೇಲ್ ಮಾಡಲು ಬರುತ್ತಾರೆ. ನನ್ನ ಮೇಲೆ 39 ಕೇಸ್ ಹಾಕಿದ್ದಾರೆ. ನ್ಯಾಯಾಲಯದಲ್ಲಿ ನನಗೆ ನ್ಯಾಯ ಸಿಗುತ್ತಿದೆ ಎಂದರು.
ಮುಸ್ಲಿಮರಿಂದಲೂ ನಮಗೆ ಮನವಿ-ಯತ್ನಾಳ್: ವಕ್ಫ್ ಎನ್ನುವುದು ದೊಡ್ಡ ಹುನ್ನಾರ. ಬೆಂಗಳೂರಲ್ಲಿ ಒಬ್ಬ ಮತಾಂಧ ಮೌಲ್ವಿ ವಿಧಾನಸೌಧವನ್ನು ಅಕ್ರಮಿಸುತ್ತೇವೆ. ನೀವು ಸಂಸತ್ತಿನಲ್ಲಿ ಕುಳಿತರೆ, ನಾವು ರಸ್ತೆಯಲ್ಲಿ ಇರುತ್ತೇವೆ ಎನ್ನುತ್ತಾನೆ. ಅಂದರೆ, ಜನಪ್ರತಿನಿಧಿಗಳಿಗೆ ಧಮ್ಕಿ, ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಇಂತಹ ಗಂಭೀರ ವಿಷಯವನ್ನು ಎತ್ತಿಕೊಂಡಿದ್ದೇವೆ. ಇದಕ್ಕೆ ಎಲ್ಲರ ಬೆಂಬಲ ಇದೆ. ಬೀದರ್ನಲ್ಲಿ ನಮ್ಮ ವಿರುದ್ಧ ಧಿಕ್ಕಾರ ಕೂಗಲು 15-20 ಕಾರ್ಯಕರ್ತರನ್ನು ಕಳುಹಿಸಿದ್ದರು. ಆಗ ಗ್ರಾಮಸ್ಥರೇ ಅವರನ್ನು ಓಡಿಸಿದರು. ನಮಗೆ ಎಲ್ಲೂ ಅಪಮಾನ, ಅಸಹ್ಯವಾಗಿಲ್ಲ. ಯಾರೂ ಅಪಸ್ವರ ತೆಗೆದಿಲ್ಲ. ಕಲಬುರಗಿ, ಬೀದರ್, ರಾಯಚೂರು ಸೇರಿ ನಾಲ್ಕು ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ಸಿಕ್ಕಿದೆ. ವಕ್ಫ್ಗೆ ಹಿಂದೂಗಳಷ್ಟೇ ಅಲ್ಲ, ಮುಸ್ಲಿಮರ ಜಮೀನುಗಳು ಹೋಗಿವೆ. ನಮಗೆ ಮುಸ್ಲಿಮರು ಸಹ ಮನವಿ ಕೊಟ್ಟಿದ್ದಾರೆ ಎಂದು ಯತ್ನಾಳ್ ಹೇಳಿದರು.