Advertisement

2400 ಕೋಟಿ ರೂ. ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸಿ: ಯತ್ನಾಳ್‌ ಸವಾಲು

08:58 PM Jul 06, 2023 | Team Udayavani |

ವಿಧಾನಸಭೆ: “ಮುಖ್ಯಮಂತ್ರಿಯಾಗಲು 2400 ಕೋಟಿ ರೂ. ಹೈಕಮಾಂಡ್‌ಗೆ ಕೊಡಬೇಕು ಎಂದು ನಾನು ಹೇಳಿಲ್ಲ. ಬೇಕಿದ್ದರೆ ಮಾಧ್ಯಮದಲ್ಲಿ ಪ್ರಸಾರವಾದ ಆ ವಿಡಿಯೋವನ್ನು ಮತ್ತೂಮ್ಮೆ ನೋಡಿ. ಈ ಬಗ್ಗೆ ಬೇಕಿದ್ದರೆ ಸಿಬಿಐ ತನಿಖೆ ಎದುರಿಸುವುದಕ್ಕೆ ನಾನು ಸಿದ್ದ. 40 ಪರ್ಸೆಂಟ್‌ ಕಮಿಷನ್‌ ಆರೋಪದ ಬಗ್ಗೆಯೂ ಸಿಬಿಐ ತನಿಖೆ ಮಾಡಿಸಿ’ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸವಾಲು ಹಾಕಿದ್ದಾರೆ.

Advertisement

“ಯತ್ನಾಳ್‌ ಅವರೇ ಮುಖ್ಯಮಂತ್ರಿಯಾಗುವುದಕ್ಕೆ 2400 ಕೋಟಿ ರೂ. ಕಪ್ಪ ಕೊಡಬೇಕು ಎಂದು ಮಾಡಿದ್ದ ಆರೋಪದ ಬಗ್ಗೆಯೂ ಸ್ವಲ್ಪ ಮಾತನಾಡಿ’ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಅವರ ಕಿಡಿನುಡಿಯಿಂದ ಕೆರಳಿದ ಯತ್ನಾಳ್‌ ಈ ಸವಾಲು ಹಾಕಿದ್ದಾರೆ. “ನಾನು ಆ ರೀತಿ ಮಾತನಾಡಿರುವ ಬಗ್ಗೆ ನಿಮ್ಮಲ್ಲಿ ದಾಖಲೆ ಇದ್ದರೆ ಕೊಡಿ. ಬೇಕಿದ್ದರೆ ವಿಡಿಯೋ ತರಿಸಿ. ಅದು ಸಾಲದೇ ಇದ್ದರೆ ಸಿಬಿಐ ತನಿಖೆ ನಡೆಸಿ’ ಎಂದರು. ಆದರೆ ಸ್ಪೀಕರ್‌ ಖಾದರ್‌ ಈ ಬಗ್ಗೆ ಚರ್ಚೆ ಬೇಡ ಎಂದಾಗ ಕೆರಳಿದ ಯತ್ನಾಳ್‌ “ಸ್ಪೀಕರ್‌ ಅವರೇ ನೀವು ಸದಾ ವಿಪಕ್ಷದವರ ಪರವಾಗಿರಬೇಕು. ಅದನ್ನು ಬಿಟ್ಟು ನಮ್ಮ ಹಕ್ಕನ್ನು ಮೊಟಕುಗೊಳಿಸಲು ಹೋಗಬೇಡಿ’ ಎಂದಾಗ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.

“ಈ ಯತ್ನಾಳ್‌ ಎರಡು ನಾಲಿಗೆಯವನಲ್ಲ. ಏನು ಹೇಳಿದ್ದೇನೋ ಅದಕ್ಕೆ ಬದ್ದವಾಗಿರುತ್ತೇನೆ. ಉಲ್ಟಾ ಹೊಡೆಯುವ ಅಭ್ಯಾಸವಿಲ್ಲ. ನೀವೆಲ್ಲ ಸೋನಿಯಾ ಗಾಂಧಿಯವರ ಡೀಲಿಂಗ್‌ ಮಾಸ್ಟರ್‌ಗಳು’ ಎಂದು ಆಕ್ರೋಶ ವ್ಯಕ್ತಪಡಿಸಿದರು. ನನ್ನ ಹೇಳಿಕೆಯ ಜತೆಗೆ 40 ಪರ್ಸೆಂಟ್‌ ಕಮಿಷನ್‌ ಬಗ್ಗೆ ಕಾಂಗ್ರೆಸ್‌ ಮಾಡಿದ ಆರೋಪವನ್ನೂ ಸೇರಿಸಿ ಸಿಬಿಐ ತನಿಖೆ ನಡೆಸಿ ಎಂದು ಪಟ್ಟು ಹಿಡಿದರು. ಇದರಿಂದ ವಿಷಯಾಂತರವಾಗುವ ಸಾಧ್ಯತೆ ಇದೆ ಎಂಬುದನ್ನು ಅರಿತ ಸಿ.ಸಿ.ಪಾಟೀಲ್‌, ಯತ್ನಾಳ್‌ರನ್ನು ಸಮಾಧಾನ ಪಡಿಸಿದರು. ಆದರೆ ತಕ್ಷಣ ಎದ್ದುನಿಂತು ವಾದಕ್ಕೆ ತೊಡಗಿದರು. ಇದಾದ ಬಳಿಕ ಅಶ್ವತ್ಥನಾರಾಯಣ ಹೋಗಿ ಸಮಾಧಾನ ಪಡಿಸಿದ ಬಳಿಕ ಯತ್ನಾಳ್‌ ಮೌನಕ್ಕೆ ಶರಣಾದರು.

Advertisement

Udayavani is now on Telegram. Click here to join our channel and stay updated with the latest news.

Next