ಮೈಸೂರು: ಲವ್ ಜಿಹಾದ್ ತಡೆಯಲು ಮಠಾಧೀಶರು ಮುಂದಾಗಬೇಕು. ಕೆಟ್ಟವರಿಗೆ ಬುದ್ದಿ ಹೇಳುವ ಕೆಲಸ ಮಾಡಬೇಕು. ಅದನ್ನ ಬಿಟ್ಟು ಮುಖ್ಯಮಂತ್ರಿ ಬದಲಾವಣೆ ಮಾಡಿದರೆ ಬೀದಿಗೆ ಬರುತ್ತೇವೆ ಎನ್ನುವುದು ಸರಿಯಲ್ಲ. ದಕ್ಷಿಣೆ ಕಾಸಿಗೆ ಆಸೆ ಬಿದ್ದು ಕೆಲ ಮಠಾಧೀಶರು ಸಿಎಂ ಪರ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕೆ ಮಾಡಿದರು.
ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಕುಟುಂಬದಿಂದ ಲಿಂಗಾಯತ ಸಮಾಜಕ್ಕೆ ಕೆಟ್ಟ ಹೆಸರು ಬಂದಿದೆ. ಇದರ ಬಗ್ಗೆ ಮಾತನಾಡುವ ಬದಲು ಭ್ರಷ್ಟರ ಪರವಾಗಿ ಮಠಾಧೀಶರು ಮಾತನಾಡಬಾರದು ಎಂದರು.
‘ನಿಮಗೆ ಅಷ್ಟೋಂದು ರಾಜಕೀಯ ಹುಚ್ಚು ಇದ್ದರೆ ಖಾವಿ ತೆಗೆದು ಖಾದಿ ಧರಿಸಿ ಬನ್ನಿ’ ಎಂದು ಸಿಎಂ ಪರ ಬ್ಯಾಟ್ ಬೀಸುತ್ತಿರುವ ಮಠಾಧೀಶರ ವಿರುದ್ದ ಯತ್ನಾಳ್ ವಾಗ್ದಾಳಿ ನಡೆಸಿದರು.
ಇದನ್ನೂಓದಿ:ಕಾಂಗ್ರೆಸ್, ಬಿಜೆಪಿ: ಮೂಲ-ವಲಸಿಗ ರಾಜಕಾರಣ
ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮತ್ತೆ ಗುಡುಗಿದ ಯತ್ನಾಳ್, ರಾಜ್ಯದಲ್ಲಿ ಅನ್‌ಲಾಕ್ ಶುರುವಾದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದರ್ಶನಕ್ಕೆ ಬಂದಿದ್ದೇನೆ. ರಾಜ್ಯವನ್ನು ಲೂಟಿ ಮಾಡುತ್ತಿರುವ ದುಷ್ಟರ ಸಂಹಾರ ಆಗಬೇಕೆಂದು ತಾಯಿ ಬಳಿ ಬೇಡಿಕೊಂಡಿದ್ದೇನೆ. ಯಾರು ಅಪಾರ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೋ, ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೋ, ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೋ ಅವರೆಲ್ಲರೂ ದುಷ್ಟರು. ಅತಿ ಶೀಘ್ರದಲ್ಲೇ ದುಷ್ಟ ಸಂಹಾರವಾಗುವ ವಿಶ್ವಾಸವೂ ಇದೆ. ಈ ಕಾರ್ಯದಲ್ಲಿ ವಿಪಕ್ಷದವರು ಕೂಡ ಶಾಮೀಲಾಗಿದ್ದಾರೆ. ವಿಪಕ್ಷಗಳಿಗೂ ಮಾಮೂಲಿ ಹೋಗುತ್ತಿದೆ ಎಂದು ಗುಡುಗಿದರು.