ಪುರಭವನ: ಭಾಷೆ, ಸಂಸ್ಕೃತಿಯ ಪ್ರಗತಿಗೆ ದುಡಿಯುತ್ತಿರುವ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಸರಕಾರದಿಂದ ಸಿಗಬೇಕಾದ ಸೌಲಭ್ಯ ದೊರಕಿಸಿಕೊಡಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಹೇಳಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಬ್ಯಾರಿ ಕಲಾರಂಗದ ಸಹಯೋಗದಲ್ಲಿ ನಗರದ ಪುರಭವನದಲ್ಲಿ ನಡೆದ ಬ್ಯಾರಿ ಭಾಷೆ ಕಲಾವಿದರ ಸಮಾವೇಶ ಮತ್ತು ಬ್ಯಾರಿ ಒಪ್ಪನೆ- ಕೋಲ್ಕಲಿ ಸ್ಪರ್ಧೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.
ಅಕಾಡೆಮಿಗೆ ಘೋಷಣೆ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಸಹಕಾರ ನೀಡಿ, ಹೆಚ್ಚು ಅನುದಾನ ನೀಡಿದ್ದರು. ಈಗ ಸರಕಾರ ಮಟ್ಟದಲ್ಲಿ ನೆರವು ಕೊಡಿಸಲಾಗುವುದು. ಬ್ಯಾರಿ ಭಾಷೆಯ ಜಾನಪದ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ಕೊಡಬೇಕು. ಕಲಾವಿದರನ್ನು ಪ್ರೋತ್ಸಾಹಿಸಬೇಕು. ನಾನು ಕೂಡ ಬ್ಯಾರಿ ಭಾಷೆ ಕಲಿಯಲಿದ್ದೇನೆ ಎಂದರು. ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಿಕ್ಕಮಗಳೂರಿನಲ್ಲಿ ನಡೆದಿದ್ದ ಬ್ಯಾರಿ ಸಮ್ಮೇಳನ ಹಿನ್ನೆಲೆಯಲ್ಲಿ ಅಕಾಡೆಮಿ ಸ್ಥಾಪನೆಯಾಗಿದೆ. ಕರಂಬಾರ್ ಮಹಮ್ಮದ್ ಅವರ ನೇತೃತ್ವದಲ್ಲಿ ಅಕಾಡೆಮಿ ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದರು. ಬ್ಯಾರಿ – ಕೊಂಕಣಿ- ತುಳು ಭಾಷೆ ಬೇರೆಯಾದರೂ ಪರಸ್ಪರ ಸಂಬಂಧಗಳಿವೆ. ಮೂರೂ ಅಕಾಡೆಮಿಗಳು ಜತೆಯಾಗಿ ಕೆಲಸ ಮಾಡಬೇಕು ಎಂದು ಆಶಿಸಿದರು.
ಅಕಾಡೆಮಿ ಅಧ್ಯಕ್ಷ ಕರಂಬಾರು ಮಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಮುಡಾ ಮಾಜಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಹೈದರ್ ಪರ್ತಿಪ್ಪಾಡಿ, ಅಹ್ಮದ್ ಬಾವಾ ಬಜಾಲ್, ಸಿ.ಎಂ. ಮುಸ್ತಫಾ, ಇಸ್ಮಾಯಿಲ್ ಮೂಡುಶೆಡ್ಡೆ, ನಟ ಪ್ರಾಣೇಶ್ ಶೆಟ್ಟಿ, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್, ಮಹಮ್ಮದ್ ಇಮ್ತಿಯಾಝ್, ಅಕಾಡೆಮಿ ಸದಸ್ಯರಾದ ಹಸನಬ್ಬ ಮೂಡುಬಿದಿರೆ, ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಆಯಿಶಾ ಯು.ಕೆ., ಮರಿಯಂ ಇಸ್ಮಾಯಿಲ್, ಬಶೀರ್ ಕಿನ್ಯ, ಆರಿಫ್ ಪಡುಬಿದ್ರಿ ಮೊದಲಾದವರು ಉಪಸ್ಥಿತರಿದ್ದರು.
ಬ್ಯಾರಿ ಕಲಾರಂಗದ ಅಧ್ಯಕ್ಷ ಅಝೀಝ ಬೈಕಂಪಾಡಿ ಅವರು ಪ್ರಸ್ತಾವನೆ ಗೈದರು. ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಹುಸೈನ್ ಕಾಟಿಪಳ್ಳ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಬಶೀರ್ ಬೈಕಂಪಾಡಿ ವಂದಿಸಿದರು. ಪ್ರ. ಕಾರ್ಯದರ್ಶಿ ಯು.ಎಚ್. ಖಾಲಿದ್ ಉಜಿರೆ ಅವರು ಕಾರ್ಯಕ್ರಮ ನಿರೂಪಿಸಿದರು.
ವಿವಿಧ ಸ್ಪರ್ಧೆ
ಬ್ಯಾರಿ ಒಪ್ಪನೆ- ಕೋಲ್ಕಲಿ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ‘ಇಂಡತ್ತೂ ರಾಜಾವು ನಾಲೆತ್ತೂ ಫಕೀರ್’ ಎಂಬ ಬ್ಯಾರಿ ಕಥಾ ಪ್ರಸಂಗ, ‘ಅಲ್ಲಾಂಡೊ ಬಿದಿ’ ಎಂಬ ಬ್ಯಾರಿ ನಾಟಕ ಹಾಗೂ ‘ಬ್ಯಾರಿ ನಡತ ಪಂಡ್- ಇಂಡ್’ ಕಾರ್ಯಕ್ರಮಗಳು ನಡೆದವು.