ವಾಡಿ: ಪಟ್ಟಣದಲ್ಲಿ ಸೋಮವಾರ ಈದ್ ಮಿಲಾದ್ ಹಬ್ಬದ ಸಾಂಪ್ರದಾಯಿಕ ಮೆರವಣಿಗೆಗೆ ಪೊಲೀಸರು ಅವಕಾಶ ನೀಡದಿರುವುದು ಮುಸ್ಲಿಂ ಯುವಕರ ಆಕ್ರೋಶಕ್ಕೆ ಕಾರಣವಾಯಿತು.
ಸ್ಥಳೀಯ ಜಾಮಿಯಾ ಮಸೀದಿಯಿಂದ ಹೊರಡಬೇಕಿದ್ದ ಇಸ್ಲಾಂ ಧಾರ್ಮಿಕ ಸ್ತಬ್ಧಚಿತ್ರಗಳ ಮೆರವಣಿಗೆಗೆ ಅಡ್ಡಲಾಗಿ ಬ್ಯಾರಿಕೇಡ್ ಅಳವಡಿಸಿ ರ್ಯಾಲಿ ಸಾಗದಂತೆ ನೋಡಿಕೊಂಡ ಪೊಲೀಸರ ನಡೆ ಪ್ರಶ್ನಿಸಿದ ಕೆಲವರು ವಾಗ್ವಾದ ನಡೆಸಿದರು.
ಪ್ರತಿವರ್ಷದಂತೆ ವಿವಿಧ ಬಡಾವಣೆಗಳಿಂದ ಜಾಮಿಯಾ ಮಸೀದಿ ವರೆಗೆ ತಳ್ಳುಗಾಡಿಯಲ್ಲಿ ಹಲವು ಸ್ತಬ್ಧಚಿತ್ರಗಳನ್ನು ತಂದಿದ್ದ ಮುಸ್ಲಿಂ ಯುವಕರ ಗುಂಪುಗಳು, ಅವುಗಳನ್ನು ಒಂದೆಡೆ ಸಾಲಾಗಿ ನಿಲ್ಲಿಸಿ ಮೆರವಣಿಗೆ ಹೊರಡಲು ಅಣಿಯಾಗಿದ್ದರು. ಮಧ್ಯೆ ಪ್ರವೇಶಿಸಿದ ಪಿಎಸ್‌ಐ ವಿಜಯಕುಮಾರ ಭಾವಗಿ, ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ವಯ ಈದ್ ಮೆರವಣಿಗೆಗೆ ಅವಕಾಶ ನೀಡಲಾಗಿಲ್ಲ. ದಯವಿಟ್ಟು ಯಾರೂ ಮೆರವಣಿಗೆ ಹೊರಡುವ ಪ್ರಯತ್ನ ಮಾಡಬಾರದು. ವಾಪಸ್ ಹೋಗಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: ‘ಹೇಳುವುದು ಆಚಾರ, ಮಾಡುವುದು ಅನಾಚಾರ’: ಬಿಜೆಪಿ ವಿರುದ್ಧ ಕಿಡಿಕಾರಿದ ಜೆಡಿಎಸ್
ಯಾವುದೇ ಗದ್ದಲ, ಗಲಾಟೆ ಮಾಡದೆ ಶಾಂತಿಯುತ ಮೆರವಣಿಗೆ ಹೊರಡುತ್ತೇವೆ ಅವಕಾಶ ನೀಡಬೇಕು ಎಂದು ಮುಸ್ಲಿಂ ಮುಖಂಡರು ಮನವಿ ಮಾಡಿದರು. ಇದನ್ನು ನಿರಾಕರಿಸಿದ ಪಿಎಸ್‌ಐ ಭಾವಗಿ, ಸರ್ಕಾರ ಹೊರಡಿಸಿರುವ ಕಾನೂನು ಪಾಲಿಸುವುದು ನಮ್ಮ ಕರ್ತವ್ಯ. ಆದೇಶ ಉಲ್ಲಂಘಿ ಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಇತರ ಧಾರ್ಮಿಕ, ರಾಜಕೀಯ ಸಭೆ ಮೆರವಣಿಗೆಗೆ ಅವಕಾಶ ನೀಡುತ್ತೀರಿ. ನಮ್ಮ ಹಬ್ಬದ ಮೆರವಣಿಗೆಯನ್ನೇಕೆ ತಡೆಯುತ್ತೀರಿ? ಅವರಿಗೊಂದು ಕಾನೂನು ನಮಗೊಂದು ಕಾನೂನಾ ಎಂದು ಕೆಲ ಯುವಕರು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯರು ಕಿರಿಯರನ್ನು ಸಮಾಧಾನಪಡಿಸಿ ಮೆರವಣಿಗೆ ರದ್ದುಗೊಳಿಸಿದರು. ಮೆಕ್ಕಾ, ಮದೀನಾ ಸೇರಿದಂತೆ ಖುರಾನ್, ಚಾಂದ್, ಮಿನಾರ್ ಪ್ರತಿಕೃತಿಗಳನ್ನು ಮೆರವಣಿಗೆಗೆಂದು ಸಿದ್ಧಪಡಿಸಿ ತಂದವರು ವಾಪಸ್ ಬಡಾವಣೆಗೆ ಸಾಗಿಸಿದರು. ಜಾಮಿಯಾ ಮಸೀದಿ ಮುಂದೆ ಜಮಾಯಿಸಿದ್ದ ಯುವಕರು ಧರ್ಮದ ನೂರಾರು ಧ್ವಜಗಳನ್ನು ಪ್ರದರ್ಶಿಸಿದರು. ಇದೇ ವೇಳೆ ಅತಿಥಿಗಳಾಗಿ ಆಗಮಿಸಿದ್ದ ಅನ್ಯಕೋಮಿನ ಮುಖಂಡರನ್ನು ಮಸೀದಿಯಲ್ಲಿ ಸನ್ಮಾನಿಸಲಾಯಿತು.