Advertisement
ಸೋಮವಾರ ಮಧ್ಯಾಹ್ನ ಕಾರು ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ಅಪಘಾತದ ವೀಡಿಯೋ ದೃಶ್ಯಾವಳಿ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು.
ಇಲ್ಲಿನ ಭೌಗೋಳಿಕ ಪರಿಸ್ಥಿತಿಯು ಈ ಜಂಕ್ಷನನ್ನು ಅಪಘಾತ ವಲಯವನ್ನಾಗಿಸಿದೆ. ಪದವಿನಂಗಡಿ ಪ್ರದೇಶ ಎತ್ತರದಲ್ಲಿದ್ದು, ಬೋಂದೆಲ್ ಚರ್ಚ್ ಜಂಕ್ಷನ್ ತಗ್ಗಿನಲ್ಲಿದೆ. ಅಲ್ಲಿಯೇ ಪಚ್ಚನಾಡಿ ಕಡೆಗೆ ಹೋಗುವ ಅಡ್ಡ ರಸ್ತೆ ಇದೆ. ಪದವಿನಂಗಡಿಯಿಂದ ಮಿತಿ ಮೀರಿದ ವೇಗದಲ್ಲಿ ವಾಹನಗಳು ಸಂಚರಿಸುತ್ತವೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಆಗಿರುವುದರಿಂದ ರಾತ್ರಿ ಹಗಲೆನ್ನದೆ ದಿನವಿಡೀ ವಾಹನಗಳ ಓಡಾಟ ಇರುತ್ತವೆ. ಕೇರಳ ಕಡೆಯಿಂದ ಬರುವ ಮತ್ತು ಹೋಗುವ ವಾಹನಗಳ ವೇಗ ಮಿತಿಗೆ ಕಡಿವಾಣವೇ ಇರುವುದಿಲ್ಲ. ಈ ತಾಣದಲ್ಲಿ 2017 ಜನವರಿ ತಿಂಗಳಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಈ ಸಂದರ್ಭ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಬಳಿಕ ಕಳೆದ ಅಕ್ಟೋಬರ್‌ನಲ್ಲಿ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡಿದ್ದರು.
Related Articles
Advertisement
ವಿವಿಐಪಿಗಳು ಓಡಾಡುವ ರಸ್ತೆಇಲ್ಲಿ ಅಪಘಾತಗಳು ಸಂಭವಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಆಗಿರುವುದರಿಂದ ವಿಐಪಿಗಳ ಓಡಾಟವೂ ಈ ರಸ್ತೆಯಲ್ಲಿ ಜಾಸ್ತಿ. ಹಾಗಾಗಿ ಕೆಲವೊಂದು ತಾಂತ್ರಿಕ ಕಾರಣಗಳಿಂದ ಇಲ್ಲಿ ರಸ್ತೆ ಹಂಪ್ ಹಾಕಲು ಸಾಧ್ಯವಾಗದು. ಒಂದೊಮ್ಮೆ ಹಂಪ್ ಹಾಕಿದರೂ ವಿಐಪಿಗಳ ಆಗಮನದ ಸಂದರ್ಭ ಅದನ್ನು ತೆರವು ಮಾಡ ಬೇಕಾಗುತ್ತದೆ. ಒಂದು ಹಂಪ್ ಹಾಕಲು ಸುಮಾರು 35,000 ರೂ. ಖರ್ಚು ತಗಲುತ್ತದೆ. ಹಾಗಾಗಿ ಪದೇ ಪದೇ ಹಂಪ್‌ಗ್ಳನ್ನು ಹಾಕುವುದು ಮತ್ತು ಅದನ್ನು ತೆರವುಗೊಳಿಸುವುದರಿಂದ ಸರಕಾರಕ್ಕೇ ನಷ್ಟ. ಹಾಗಾಗಿ ಹಂಪ್ ಹಾಕದಿರಲು ನಿರ್ಣಯಿಸಲಾಗಿದೆ ಎಂದು ಸಂಚಾರ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ ತಿಳಿಸಿದ್ದಾರೆ. ಅಪಘಾತ ತಡೆಯಲು ಯತ್ನ
ಹಂಪ್ ಗಳನ್ನು ಹಾಕುವ ಬದಲು ಇಲ್ಲಿ ಹಗಲು ಹೊತ್ತಿನಲ್ಲಿ ಅಂದರೆ ಬೆಳಗ್ಗಿನಿಂದ ಸಂಜೆ 5 ಗಂಟೆ ತನಕ ಬ್ಯಾರಿಕೇಡ್ ಹಾಕಿ ವಾಹನಗಳ ವೇಗ ನಿಯಂತ್ರಿಸಲು ಹಾಗೂ ಅಪಘಾತಗಳನ್ನು ತಡೆಯಲು ತೀರ್ಮಾನಿಸಲಾಗಿದೆ. ರಾತ್ರಿ ವೇಳೆಯೂ ಬ್ಯಾರಿಕೇಡ್ ಹಾಕಿದರೆ ವಾಹನ ಚಾಲಕರು ಅದಕ್ಕೆ ಢಿಕ್ಕಿ ಹೊಡೆದು ಅಪಘಾತಗಳು ಸಂಭವಿಸುವ ಮತ್ತು ಬ್ಯಾರಿಕೇಡ್‌ಗಳಿಗೂ ಹಾನಿ ಸಂಭವಿಸುವ ಸಾಧ್ಯತೆ ಇರುವುದರಿಂದ ಈ ತೀರ್ಮಾನಕ್ಕೆ ಬರಲಾಗಿದೆ. ಬ್ಯಾರಿಕೇಡ್‌ಗಳನ್ನು ಬೆಳಗ್ಗಿನ ಹೊತ್ತು ಇರಿಸಲು ಮತ್ತು ಸಂಜೆ ಹೊತ್ತು ತೆಗೆದು ಬದಿಗಿರಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸ್ಥಳೀಯ ಶಾಲೆಯ ಆಡಳಿತವನ್ನು ಕೋರಲಾಗಿದ್ದು, ಇದಕ್ಕೆ ಶಾಲಾಡಳಿತ ಒಪ್ಪಿದೆ. ಹಾಗಾಗಿ ಬುಧವಾರದಿಂದಲೇ ಇಲ್ಲಿ ಬ್ಯಾರಿಕೆಯಡ್ ಹಾಕಲಾಗಿದೆ. ಇದಲ್ಲದೆ ಈ ಪ್ರದೇಶದ ರಸ್ತೆಯ ಬದಿ ಅಲ್ಲಲ್ಲಿ ಅಪಘಾತವಲಯ ಎಂಬುದಾಗಿ ನಾಮಫಲಕ ಹಾಕಲು ಕೂಡಾ ಕ್ರಮ ವಹಿಸಲಾಗುವುದು.
– ಮಂಜುನಾಥ ಶೆಟ್ಟಿ, ಎಸಿಪಿ (ಟ್ರಾಫಿಕ್)