Advertisement
ವರದಾನವಾಗಿದ್ದ ಬಾರ್ಜ್ ಕೋಡಿಕನ್ಯಾಣ ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಕೋಡಿಬೆಂಗ್ರೆ ಸುತ್ತಲು ನೀರಿನಿಂದ ಆವೃತ್ತವಾದ ದ್ವೀಪ ಪ್ರದೇಶ. ಇಲ್ಲಿನ ನಿವಾಸಿಗಳು ಈ ಹಿಂದೆ ಪಂಚಾಯತ್ ಕೇಂದ್ರವನ್ನು ತಲುಪಲು ಫೆರ್ರಿ ಬೋಟ್ ಅಥವಾ ಘನವಾಹನದಲ್ಲಿ ನೇಜಾರು, ಸಂತೆಕಟ್ಟೆ ಬ್ರಹ್ಮಾವರ ಮೂಲಕ ಸುಮಾರು 25-30 ಕಿ.ಮೀ. ಸುತ್ತುವರಿದು ಸಾಗುತ್ತಿದ್ದರು. ಹೀಗಾಗಿ ಇಲ್ಲಿಗೆ ಬಾರ್ಜ್ ಸೇವೆಯನ್ನು ಆರಂಭಿಸುವಂತೆ ಹಲವು ವರ್ಷದಿಂದ ಬೇಡಿಕೆ ಇತ್ತು. ಸರಕಾರ 1.45ಕೋಟಿ ವೆಚ್ಚದಲ್ಲಿ ಬಾರ್ಜ್ ನಿರ್ಮಿಸಿ ಕಳೆದ ವರ್ಷ ಜ.24ರಂದು ಲೋಕಾರ್ಪಣೆಗೊಳಿಸಿತ್ತು. ಅನಂತರ ಎಪ್ರಿಲ್ ತನಕ ಇದು ಯಶಸ್ವಿಯಾಗಿ ಸೇವೆ ನೀಡಿತ್ತು. ಈ ಭಾಗದ ಅದ್ಭುತ ಪ್ರಕೃತಿ ಸೌಂದರ್ಯವನ್ನು ಸವಿಯಲು ವಾರಾಂತ್ಯ ಇನ್ನಿತರ ದಿನಗಳಲ್ಲಿ ನೂರಾರು ಮಂದಿ ಪ್ರವಾಸಿಗರು ಆಗಮಿಸುತ್ತಿದ್ದರು. ಇದೊಂದು ಪ್ರವಾಸಿ ತಾಣವಾಗುವ ಹಂತದಲ್ಲಿತ್ತು. ಆದರೆ ಎಪ್ರಿಲ್‌ನಲ್ಲಿ ಮಳೆಗಾಲ ಆರಂಭವಾದಗ ನೀರಿನ ಸೆಳೆತ ಹೆಚ್ಚುವ ಕಾರಣದಿಂದ ಬಾರ್ಜ್ ಸಂಚರಿಸಲು ಸಾಧ್ಯವಿಲ್ಲ ಮಳೆಗಾಲ ಮುಗಿದ ಮೇಲೆ ಮತ್ತೆ ಆರಂಭಿಸುವುದಾಗಿ ಬಾರ್ಜ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೆ ಮಳೆಗಾಲ ಕಳೆದೇ ಹಲವು ತಿಂಗಳು ಕಳೆದರೂ ಬಾರ್ಜ್ ಸೇವೆ ಮತ್ತೆ ಆರಂಭವಾಗಲಿಲ್ಲ. ಕಳೆದ ತಿಂಗಳು ಕೋಡಿಬೆಂಗ್ರೆ ಹಬ್ಬದಂದು ಮೂರು ದಿನ ಬಾರ್ಜ್ ಓಡಾಟ ನಡೆಸಿದ್ದು ಹೊರತುಪಡಿಸಿ ಕಳೆದ ಹತ್ತು-ಹನ್ನೊಂದು ತಿಂಗಳಿಂದ ಇದರ ಸೇವೆ ನಿಂತಿದೆ.
ದೊಡ್ಡ ಬಾರ್ಜ್‌ನ ಸಂಚಾರ ಸ್ಥಗಿತಗೊಳಿಸುವ ಸಂದರ್ಭ ಚಿಕ್ಕ ಬಾರ್ಜ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದರಲ್ಲಿ ಬೈಕ್ ಹೊರತುಪಡಿಸಿ ಬೇರೆ ಯಾವುದೇ ವಾಹನಗಳನ್ನು ಸಾಗಿಸಲು ಸಾಧ್ಯವಿಲ್ಲ. ಕಾರು ಮುಂತಾದ ದೊಡ್ಡ ವಾಹನಗಳು ಪ್ರತಿ ದಿನ 25-30ಕಿ.ಮೀ ಸುತ್ತುವರಿದು ಸಾಗಬೇಕಾಗಿದೆ.
ನಷ್ಟವಾಗುತ್ತಿದೆ ಎನ್ನುವ ಕಾರಣ
ಬಾರ್ಜ್ ಸಂಚಾರ ಸ್ಥಗಿತಗೊಳಿಸಲು ನಿಗದಿತ ಪ್ರಮಾಣದಲ್ಲಿ ಹಣ ಸಂಗ್ರಹವಾಗುತ್ತಿಲ್ಲ ಎಂದು ಅಧಿಕಾರಿಗಳು ಕಾರಣ ನೀಡುತ್ತಿದ್ದಾರೆ. ಆದರೆ ಬಾರ್ಜ್ ನಲ್ಲಿ ಸರಿಯಾಗಿ ಟಿಕೆಟ್ ಸಂಗ್ರಹ ಮಾಡುವುದಿಲ್ಲ ಹಾಗೂ ಇಲಾಖೆಗೆ ಸರಿಯಾದ ಲೆಕ್ಕ ನೀಡುವುದಿಲ್ಲ. ಹೀಗಾಗಿ ನಷ್ಟವಾಗುತ್ತಿದೆ. ಹಾಗೂ ಜನಸೇವೆಯ ದೃಷ್ಟಿಯಿಂದ ಲಾಭ – ನಷ್ಟವನ್ನು ಪರಿಗಣಿಸುವುದು ಸರಿಯಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಕೋಟ್ಯಂತರ ವೆಚ್ಚದಲ್ಲಿ ನಿರ್ಮಿಸಿದ ಬಾರ್ಜ್ ಇದೀಗ ಜಟ್ಟಿಯಲ್ಲಿ ತುಕ್ಕು ಹಿಡಿಯುವ ಸ್ಥಿತಿಯಲ್ಲಿದೆ. ಆದ್ದರಿಂದ ಬಾರ್ಜ್ ಓಡಾಟಕ್ಕೆ ಕ್ರಮಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
Related Articles
ಪ್ರವಾಸಿ ತಾಣವಾಗಿ ಅಭಿವೃದ್ಧಿ ಹಾಗೂ ಜನರ ಅನುಕೂಲಕ್ಕಾಗಿ ಸರಕಾರ ಬಾರ್ಜ್ ಸೇವೆ ಆರಂಭಿಸಿದೆ. ಹೀಗಾಗಿ ಲಾಭ-ನಷ್ಟದ ಲೆಕ್ಕ ಹಾಕಿ ಬಾರ್ಜ್ ಸಂಚಾರ ಸ್ಥಗಿತಗೊಳಿಸುವುದು ಸರಿಯಲ್ಲ. ಈ ಕುರಿತು ಸಂಬಂಧಪಟ್ಟ ಇಲಾಖೆಯವರ ಗಮನಕ್ಕೂ ತರಲಾಗಿದೆ. ಆದಷ್ಟು ಶೀಘ್ರ ಬಾರ್ಜ್ ಮತ್ತೆ ಓಡಾಟ ನಡೆಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕಿದೆ.
– ಶಂಕರ್ ಕುಂದರ್, ಸ್ಥಳೀಯರು
Advertisement
ಹೋರಾಟ ಅನಿವಾರ್ಯಬಾರ್ಜ್ ನಿಷ್ಪ್ರಯೋಜಕವಾಗಿರುವುದು ಬೇಸರ ತಂದಿದೆ. ಈ ಭಾಗದ ಜನರು ಘನವಾಹನದಲ್ಲಿ ಸಂಚರಿಸಲು 25-30 ಕಿ.ಮೀ. ಕ್ರಮಿಸಬೇಕಿದೆ. ಒಂದು ವೇಳೆ ದೊಡ್ಡ ಬಾರ್ಜ್ ನಿರ್ವಹಣೆ ಕಷ್ಟವಾದರೆ ಘನವಾಹನಗಳನ್ನು ಸಾಗಿಸುವಂತಹ ಮಧ್ಯಮ ಗಾತ್ರದ ಬಾರ್ಜ್ ವ್ಯವಸ್ಥೆ ಮಾಡಿ ಇದನ್ನು ಬೇರೆ ಕಡೆಗೆ ನಿಯೋಜಿಸಿ. ಈ ಕುರಿತು ಕ್ರಮಕೈಗೊಳ್ಳದಿದ್ದರೆ ಹೋರಾಟ ಅನಿವಾರ್ಯವಾಗಲಿದೆ.
– ನವೀನ್ ಕೋಡಿಬೆಂಗ್ರೆ, ಕೋಡಿಕನ್ಯಾಣ ಗ್ರಾ.ಪಂ. ಸದಸ್ಯ – ರಾಜೇಶ್ ಗಾಣಿಗ ಅಚ್ಲಾಡಿ