Advertisement

ಬಾರ್ಜ್‌ ಅವಘಡ: ಗಡುವು ಮುಗಿದರೂ ತೆರವಾಗದ ಇಂಧನ

10:59 AM Jun 08, 2017 | Harsha Rao |

ಮಂಗಳೂರು: ಉಳ್ಳಾಲ ಮೊಗವೀರಪಟ್ಣದ ಬಳಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿರುವ ಬಾರ್ಜ್‌ನಿಂದ ಇಂಧನ ತೆರವುಗೊಳಿಸುವಂತೆ ಜಿಲ್ಲಾಡಳಿತ ನೀಡಿರುವ 24 ಗಂಟೆಗಳ ಗಡುವು ಮುಗಿದಿದೆ. ಮುಳುಗುತ್ತಿರುವ ಬಾರ್ಜ್‌ನಿಂದ ಇಂಧನ ಸೋರಿಕೆಯಾಗಿ ಪರಿಸರಕ್ಕೆ ಹಾನಿಯಾಗದಂತೆ ಎಚ್ಚರ ವಹಿಸುವುದೇ ಸದ್ಯ ಜಿಲ್ಲಾ ಡಳಿತ ಹಾಗೂ ಬಾರ್ಜ್‌ ಕಂಪೆನಿ ಮುಂದಿ ರುವ ಬಹುದೊಡ್ಡ ಸವಾಲಾಗಿದೆ.

Advertisement

ಸಮುದ್ರ ಕೊರೆತ ತಡೆಗೋಡೆ ನಿರ್ಮಾಣಕ್ಕೆಂದು ಬಂದ ಆಂಧ್ರ ಪ್ರದೇಶ ಮೂಲದ “ಧರ್ತಿ’ ಕಂಪೆನಿಗೆ ಸೇರಿದ ಬಾರ್ಜ್‌ ಜೂ. 3ರಂದು ಸಮುದ್ರ ದಡದಿಂದ ಸುಮಾರು 700 ಮೀ. ದೂರದಲ್ಲಿ ತಡೆಗೋಡೆಗೆ ಸಿಲುಕಿಕೊಂಡಿತ್ತು. ಅಲ್ಪ ಸಮಯದಲ್ಲೇ ಬಾರ್ಜ್‌ನ ಒಂದು ಕಂಪಾರ್ಟ್‌ಮೆಂಟ್‌ ಹೋಳಾಗಿ ನೀರು ಒಳಬಂದು ಮುಳುಗಲು ಪ್ರಾರಂಭವಾಗಿತ್ತು. ಈಗಾಗಲೇ ಶೇ. 70ರಷ್ಟು ಭಾಗ ನೀರಿನ ಆಳಕ್ಕೆ ಇಳಿದಿದೆ.

ಪರಿಸರ ಹಾಗೂ ಸಮುದ್ರದ ಜೀವಿಗಳ ರಕ್ಷಣೆಯ ಉದ್ದೇಶದಿಂದ ಜಿಲ್ಲಾಡಳಿತವು ಬಾರ್ಜ್‌ ಮಾಲಕತ್ವದ ಕಂಪೆನಿಗೆ ಕೂಡಲೇ ಇಂಧನ ತೆರವು ಗೊಳಿಸುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಗುತ್ತಿಗೆ ಪಡೆದವರ (ಸಿಂಗಾಪುರದ ತಂಡ) ಹಾಗೂ ಜಿಲ್ಲಾಡಳಿತದ ತಾಂತ್ರಿಕ ತಜ್ಞರ ತಂಡ ಘಟನಾ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದೆಯಾದರೂ ಇಂಧನ ತೆರವು ಪ್ರಕ್ರಿಯೆ ಇನ್ನೂ ನಡೆದಿಲ್ಲ.

ಬಾರ್ಜ್‌ನಲ್ಲಿದೆ 3-4 ಟ್ಯಾಂಕ್‌
ಮುಳುಗಡೆಯಾಗುತ್ತಿರುವ ಬಾರ್ಜ್‌ ಸಿಲುಕಿಕೊಂಡಿರುವ ತಡೆ ಗೋಡೆಯ (ರೀಫ್‌) ಭಾಗದಲ್ಲೇ ಟ್ಯಾಂಕ್‌ ಹೊಂದಿದ್ದು, ಇದರಲ್ಲಿ ಎಂಜಿನ್‌ ಟ್ಯಾಂಕ್‌, ರಿಸರ್ವ್‌ ಟ್ಯಾಂಕ್‌, ಸರ್ವಿಸ್‌ ಟ್ಯಾಂಕ್‌ಗಳೆಂಬ ಮೂರು-ನಾಲ್ಕು ಬಗೆಯ ಟ್ಯಾಂಕ್‌ಗಳಿವೆ. ಯಾವ ಟ್ಯಾಂಕ್‌ನಲ್ಲಿ ಇಂಧನವಿದೆ ಎಂಬುದು ಅದರಲ್ಲಿದ್ದ ಎಂಜಿನಿಯರ್‌ಗೆ ಮಾತ್ರ ತಿಳಿದಿದೆ. ರೀಫ್‌ ಬದಿಯಲ್ಲಿದ್ದ ಟ್ಯಾಂಕ್‌ನಲ್ಲಿ ರಂಧ್ರವಾಗಿ ಇಂಧನ ಹೊರಬಂದಂತೆ ಕಾಣಿಸಿಕೊಂಡಿತ್ತು ಎಂದು ರಕ್ಷಣೆಗೊಳಗಾದ ಕಾರ್ಮಿಕ ರಲ್ಲೊಬ್ಬರು ತಿಳಿಸಿದ್ದಾರೆ.

ಬಾರ್ಜ್‌ನ ಎಂಜಿನ್‌ ರೂಂ ಮುಳುಗಿದ್ದು, ಒಳಗೆ ಹೋಗುವ ಸಾಹಸ ಮಾಡುವುದು ಕೂಡ ಅಪಾಯಕರ. ನೀರಿನ ಒಳಗಿರುವ ಟ್ಯಾಂಕ್‌ನಿಂದ ಇಂಧನ ತೆಗೆಯುವ ಕಾರ್ಯಕ್ಕೆ ಹೋದವರು ಹೊರ ಬರಲಾರದೆ ಅಪಾಯಕ್ಕೆ ಸಿಲುಕುವ ಸಾಧ್ಯತೆಗಳೂ ಇವೆ.

Advertisement

ಸರ್ವೆ ನಡೆಸಿದ ಬಳಿಕವೇ ನಿರ್ಧಾರ ಸಾಧ್ಯ
ಬಾರ್ಜ್‌ ನಿರ್ವಹಣೆ ನೋಡಿ ಕೊಳ್ಳುವ ತಜ್ಞರೊಬ್ಬರು ಹೇಳುವ ಪ್ರಕಾರ, ಉಳ್ಳಾಲದ ಕಡಲಿನ ಅಲೆಗಳ ರಭಸ ತೀವ್ರವಾಗಿದೆ. ಬಾರ್ಜ್‌ ನಿಂದ ಇಂಧನ ತೆರವು ಮಾಡಲು ತಂತ್ರಜ್ಞರು ಸಿಂಗಾಪುರದಿಂದ ಬರುತ್ತಿದ್ದ ರಾದರೂ ಸಿಂಗಾಪುರದ ಕಡಲಿನಲ್ಲಿ ಇರುವುದಕ್ಕಿಂತ ಜಾಸ್ತಿ ರಭಸದ ಅಲೆಗಳು ಇರುವ ಕಾರಣ ಅಲ್ಲಿನ ತಜ್ಞರನ್ನು ಕರೆಸಿ ಕೊಂಡರೂ ಕಾರ್ಯಾಚರಣೆ ಯಶಸ್ವಿಯಾಗುವುದು ಸಂಶಯ. ಬಾರ್ಜ್‌ನ ಆ್ಯಂಕರ್‌ ಕೂಡ ಈಗಾಗಲೇ ತುಂಡಾಗಿ ನೇತಾಡುತ್ತಿದ್ದು, ತಂತ್ರಜ್ಞರು ಸ್ಥಳಕ್ಕೆ ಭೇಟಿ ನೀಡಿ ಸರ್ವೆ ನಡೆಸಿದ ಬಳಿಕವೇ ಬಾರ್ಜ್‌ಗೆ ಆಗಿರುವ ಹಾನಿಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯ. ಅಲ್ಲದೆ   ನವಮಂಗಳೂರು ಬಂದರು ಅಧಿಕೃತರೊಂದಿಗೂ ಈ ಬಗ್ಗೆ ಚರ್ಚೆ ನಡೆಸಿ ಮುಂದುವರಿಯಬೇಕಾಗುತ್ತದೆ.

ಅಪಾಯಕಾರಿ ಅಂಶಗಳು
ಬಾರ್ಜ್‌ನೊಳಗೆ ಅಡುಗೆಕೋಣೆ ಮಾತ್ರವಲ್ಲದೇ, ಎಲೆಕ್ಟ್ರಿಕಲ್‌ ವಸ್ತುಗಳು ಕೂಡ ಇದ್ದು, ದುರಂತ ಸಂಭವಿಸಿದ ವೇಳೆ ಅವೆಲ್ಲವೂ ಆಫ್‌ ಆಗಿದ್ದವು. ತುರ್ತು ಜನರೇಟರ್‌ ಕೂಡ ತಾಂತ್ರಿಕ ತೊಂದರೆಗೊಳಗಾಗಿತ್ತು. ಬಾರ್ಜ್‌ನೊಳಗೆ ಇಂಧನ ಹೊರತು ಪಡಿಸಿಯಾವುದೇ ಅಪಾಯಕಾರಿ ದ್ರಾವಣಗಳಾವುದೂ ಇರಲಿಲ್ಲ. ಆದರೆ ಇದರೊಳಗೆ ಎರಡು ದೊಡ್ಡ-ದೊಡ್ಡ ಗ್ರಾಬ್‌, ದೊಡ್ಡ ಕ್ರೇನ್‌ ಕೂಡ ಇದೆ. ಇದು ಪಲ್ಟಿಯಾಗಿ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಯೂ ಇದೆ. ಇನ್ನು ಬಾರ್ಜ್‌ ಮೇಲೆ ಯಾವುದೇ ಇತರ ವಸ್ತುಗಳನ್ನು ಇಳಿಸಿದಲ್ಲಿ ಬಾರ್ಜ್‌ ಪೂರ್ಣ ಪಲ್ಟಿ ಯಾಗುವ ಅಪಾಯವೂ ಇದೆ. ಆದ್ದರಿಂದ ಇಂಧನ ತೆರವುಗೊಳಿಸಲು ಹೋಗುವವರು ಕೂಡ ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತದೆ ಎಂದು ಮುಳುಗಡೆಯಾಗಿರುವ ಧರ್ತಿ ಕಂಪೆನಿ ಬಾರ್ಜ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next