ಅಂಕೋಲಾ: ದಕ್ಷಿಣದ ಕಾಶಿ ಗೋಕರ್ಣ ಮತ್ತು ಕರ್ನಾಟಕ ಬಾರ್ಡೋಲಿ ಅಂಕೋಲಾವನ್ನು ಕೂಡಿಸುವ ಜನರ ಶತಮಾನಗಳ ಕನಸಾದ ಮಂಜುಗುಣಿ ಗಂಗಾವಳಿ ಸೇತುವೆ ಕಾಮಗಾರಿ ಆರಂಭವಾದ ಬೆನ್ನಲ್ಲೇ ಇಲ್ಲಿಯ ಬಾರ್ಜ್ ಒಡಾಟ ಅಡ್ಡಿಯುಂಟಾಗುತ್ತಿದೆ.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಗಂಗಾವಳಿ ಸೇತುವೆ ಅಂದಾಜು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಸೇತುವೆ ನಿರ್ಮಾಣದಲ್ಲಿ ನೈಪುಣ್ಯ ಹೊಂದಿರುವ ಡಿ.ಆರ್. ಇನ್ಫಾಸ್ಟ್ರಕ್ಚರ್ ಕಂಪನಿ ಗುತ್ತಿಗೆ ಪಡೆದುಕೊಂಡಿದೆ. ಕಾಮಗಾರಿ ಪೂರ್ಣಗೊಳಿಸಲು ಎರಡು ವರ್ಷ ಕಾಲಾವಕಾಶ ನೀಡಲಾಗಿದೆ. ಆದರೆ ತ್ವರಿತ ಗತಿಯಲ್ಲಿ ನಡೆಯದ ಕಾಮಗಾರಿ ಹಲವಾರು ಅನುಮಾನಗಳಿಗೂ ಕಾರಣವಾಗಿತ್ತು.
ಈ ಸೇತುವೆ 315 ಮೀ. ಉದ್ದ, 10.5 ಮೀ. ಅಗಲ ಹೊಂದಿದೆ. ಭಾರೀ ಸಾಮರ್ಥ್ಯ ಹೊರಬಲ್ಲ, ಹತ್ತು ಆಧಾರ ಸ್ತಂಭಗಳ ಅಡಿಪಾಯದ ಮೇಲೆ ಸೇತುವೆ ನಿರ್ಮಾಣಗೊಳ್ಳಲಿದ್ದು, ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಮೀನುಗಾರಿಕೆಗೆ ತೊಡಕಾಗದಂತೆ ನಿರ್ಮಾಣಗೊಳ್ಳಲಿರುವ ಸೇತುವೆಯ ಅಡಿಭಾಗದಿಂದ ದೋಣಿ ಸಾಗುವಂತೆ ನೋಡಿಕೊಳ್ಳಲಾಗುವುದು. ಅತ್ಯಾಧುನಿಕ ವಿನ್ಯಾಸದೊಂದಿಗೆ ನಿರ್ಮಾಣಗೊಳ್ಳಲಿರುವ ಸೇತುವೆಯಿಂದ ವಾಹನ ಸಂಚರಿಸಲು 7.5 ಮೀ. ಅಗಲದ ರಸ್ತೆ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲದೆ ಹೊಂದಿಕೊಂಡು ಇಕ್ಕೆಲಗಳಲ್ಲಿ ಪಾದಚಾರಿಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು. ಗೋಕರ್ಣ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಬೆಳೆಯುವ ತರಕಾರಿ ಸೇರಿದಂತೆ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವುದರೊಂದಿಗೆ ಕೃಷಿಕರಿಗೂ ಶಕ್ತಿ ತುಂಬಲಿದೆ.
ಪ್ರವಾಸೋದ್ಯಮಕ್ಕೆ ಶಕ್ತಿ ತುಂಬುವ ಸೇತುವೆ: ದಕ್ಷಿಣ ಕಾಶಿ ಗೋಕರ್ಣ ಧಾರ್ಮಿಕ ಸ್ಥಳವಾಗಿ ಬೆಳೆದಿರುವುದಲ್ಲದೆ ಸುಂದರ ಕಡಲ ಕಿನಾರೆ ಪ್ರವಾಸಿಗರನ್ನು ಸೆಳೆದುಕೊಂಡಿದೆ. ದೇಶ-ವಿದೇಶಗಳಿಂದಲೂ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದು ಜಗತ್ತಿನ ಭೂಪಟದಲ್ಲಿ ಗುರುತಿಸಿಕೊಂಡಿದೆ. ನಿರ್ಮಾಣಗೊಳ್ಳಲಿರುವ ಸೇತುವೆ ಗೋವಾ ಮಾರ್ಗವಾಗಿ ಬರುವ ಪ್ರವಾಸಿಗರ ಪ್ರಯಾಸ ಕಡಿಮೆಗೊಳಿಸಲಿದೆ. ಪ್ರವಾಸೋದ್ಯಮ ಕ್ಷೇತ್ರದ ವ್ಯಾಪ್ತಿ ವಿಸ್ತರಿಸಲಿದ್ದು, ಹೊಟೇಲ್, ಅಂಗಡಿ, ಮುಂಗಟ್ಟುಗಳ ವ್ಯಾಪಾರ, ವ್ಯವಹಾರ ವೃದ್ಧಿಸಲಿದೆ. ಸ್ಥಳೀಯ ಉತ್ಪನ್ನಗಳಿಗೂ ಬೆಲೆ ಬರಲಿದ್ದು, ಹಲವಾರು ಉದ್ಯೋಗಾವಕಾಶ ಹೆಚ್ಚಲಿದೆ.
Advertisement
ಈ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆಯಾಗಿ ಹಲವು ತಿಂಗಳು ಕಾಮಗಾರಿ ನಡೆಯದೆ ಜನರಲ್ಲಿ ಮತ್ತೂಮ್ಮೆ ಆತಂಕ ಸೃಷ್ಟಿಸಿತ್ತು. ಸರಕಾರದ ತಾಂತ್ರಿಕ ಕಾರಣಗಳಿಂದ ಮಂಜೂರಾದ ಕಾಮಗಾರಿ ವಿಳಂಬವಾಗಿ ಆರಂಭವಾದರು ಈಗ ಅದಕ್ಕೆ ಮತ್ತೂಂದು ವಿಘ್ನ ಎದುರಾಗಿದೆ. ಮಂಜುಗುಣಿಯಿಂದ ಪ್ರತಿನಿತ್ಯ ಗಂಗಾವಳಿಗೆ ಪ್ರಯಾಣಿಕರನ್ನು ಹೊತ್ತುಯ್ಯುವ ಬಾರ್ಜ್ ಈ ಸೇತುವೆ ನಿರ್ಮಾಣದ ಸ್ಥಳದಿಂದಲೇ ಸಂಚರಿಸುತ್ತಿದೆ. ಇದರಿಂದಾಗಿ ಮತ್ತೆ ಕಾಮಗಾರಿಗೆ ಬ್ರೇಕ್ ಬಿಳುವ ಸಾಧ್ಯತೆಗಳಿವೆ. ಸಂಬಂಧಿಸಿದ ಇಲಾಖೆ ಬಾರ್ಜ್ ಸಂಚಾರಕ್ಕೆ ಶೀಘ್ರ ಬದಲಿ ವ್ಯವಸ್ಥೆ ಮಾಡಿದರೆ ಸೇತುವೆ ಕಾಮಗಾರಿ ಸುರಳಿತವಾಗಿ ಆಗಲು ಸಾಧ್ಯ.
Related Articles
Advertisement
ಇತ್ತೀಚಿನ ವರ್ಷಗಳಲ್ಲಿ ಮೀನುಗಾರಿಕೆ ಜೆಟ್ಟಿಗಳು ಅಭಿವೃದ್ಧಿಗೊಳಿಸಲಾಗಿದ್ದು, ನಿರ್ಮಾಣಗೊಳ್ಳಲಿರುವ ಸೇತುವೆಯಿಂದಾಗಿ ತದಡಿ, ಕೇಣಿ, ಬೇಲೆಕೇರಿ, ಹಾರವಾಡ ಸೇರಿದಂತೆ ಸುತ್ತಮುತ್ತಲಿನ ಮೀನುಗಾರರಿಗೆ ಅನುಕೂಲವಾಗಲಿದೆ. ಸೇತುವೆ ನಿರ್ಮಾಣ ಕಾರ್ಯದಲ್ಲಿ ಅಂದಿನ ಶಾಸಕ ಸತೀಶ ಸೈಲ್ ಹೆಚ್ಚಿನ ಮುತುವರ್ಜಿ ವಹಿಸಿ ಶಂಕುಸ್ಥಾಪನೆ ನೆರವೇರಿಸಿದ್ದರು.