Advertisement
ಮೌಲ್ಯಮಾಪನದಲ್ಲಿ ಯಾವುದೇ ನಿಟ್ಟಿನ ಹಸ್ತಕ್ಷೇಪ ತಡೆಯುವುದರ ಜತೆಗೆ ಅಂಕಗಳ ನೀಡಿಕೆ ಹಾಗೂ ಫಲಿತಾಂಶದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಉತ್ತರ ಪತ್ರಿಕೆಗೆ ಬಾರ್ ಕೋಡಿಂಗ್ ಕೊಟ್ಟು ತದನಂತರ ಮೌಲ್ಯಮಾಪನ ಮಾಡುವ ಸುಧಾರಣೆ ಕಾರ್ಯಕ್ಕೆ ಕೈ ಹಾಕಲಾಗಿದೆ. ಈಗಾಗಲೇ ವಿವಿ ವಿದ್ಯಾವಿಷಯಕ ಪರಿಷತ್ತು ಹಾಗೂ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದ್ದು, ಮುಂಬರುವ ನವೆಂಬರ್ ತಿಂಗಳಿನಿಂದ ನಡೆಯುವ ವಿವಿಯ ಎಲ್ಲ ಹಂತದ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಯಿಂದ ಜಾರಿಗೆ ತರಲು ದೃಢ ನಿರ್ಧಾರ ಕೈಗೊಳ್ಳಲಾಗಿದೆ.
ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಿನ ಅವಾಂತರ, ಹಸ್ತಕ್ಷೇಪ ತಡೆಯುವ ಜತೆಗೆ ದಕ್ಷತೆ ತರುವ ನಿಟ್ಟಿನಲ್ಲಿ ಈಗ ಗುಲ್ಬರ್ಗ ವಿವಿ ಕಾಯ್ಗತಗೊಳಿಸಲು ಸಜ್ಜಾಗಿದೆ. ಉತ್ತರ ಪತ್ರಿಕೆಗಳಿಗೆ ಬಾರ್ ಕೋಡಿಂಗ್ ನೀಡುವ ಹಾಗೂ ತದನಂತರ ಅಂಕಗಳ ಪಟ್ಟಿ ಸಲ್ಲಿಸುವ ಮಹತ್ವದ ಕಾರ್ಯವನ್ನು ಏಜೆನ್ಸಿಗೆ ವಹಿಸುವ ನಿಟ್ಟಿನಲ್ಲಿ ಈಗಾಗಲೇ ವಿವಿ ಮೂರ್‍ನಾಲ್ಕು ಏಜೆನ್ಸಿಗಳೊಂದಿಗೆ ಒಂದು ಹಂತದ ಮಾತುಕತೆ ನಡೆಸಿದೆ. ಮೂಲಗಳ ಪ್ರಕಾರ ಪ್ರತಿಷ್ಠಿತ ಏಜೆನ್ಸಿಯೊಂದನ್ನು ಕಾರ್ಯ ವಹಿಸುವ ಕುರಿತಾಗಿ ಅಂತಿಮಗೊಂಡಿದೆ ಎನ್ನಲಾಗಿದೆ.
ಎಷ್ಟು ವಿದ್ಯಾರ್ಥಿಗಳು?: ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಬಾರ್ ಕೋಡಿಂಗ್ ಪದ್ಧತಿ ಜಾರಿಗೆ ತಂದರೆ ಉತ್ತರ ಪತ್ರಿಕೆ ಯಾವ ವಿದ್ಯಾರ್ಥಿ ಎಂಬುದಾಗಿ ಮೌಲ್ಯಮಾಪಕರಿಗೆ ಗೊತ್ತಾಗುವುದಿಲ್ಲ. ಇಲ್ಲಿ ಸಂಪೂರ್ಣ ಪಾರದರ್ಶಕತೆ ತರಬಹುದಾಗಿದೆಯಲ್ಲದೇ ವಿನಾಕಾರಣ ಪರೀಕ್ಷಾಂಗ ವಿಭಾಗದ ಸಿಬ್ಬಂದಿ ಹಸ್ತಕ್ಷೇಪ ಮಾಡುವುದನ್ನು ತಡೆಗಟ್ಟಬಹುದಾಗಿದೆ. ಒಟ್ಟಾರೆ ಈ ಪದ್ಧತಿ ಕಾರ್ಯಾನುಷ್ಠಾನವಾದರೆ ವಿವಿ ವ್ಯಾಪ್ತಿಯ 1.20 ಲಕ್ಷ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳೆಲ್ಲ ಬಾರ್ ಕೋಡಿಂಗ್‌ಗೆ ಒಳಪಡುತ್ತವೆಯಲ್ಲದೇ ವಸ್ತುನಿಷ್ಠ ಫಲಿತಾಂಶಕ್ಕೆ ಕಾರಣವಾಗುತ್ತದೆ.
Related Articles
ಕೆಲವು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಯವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೇ ಕಾರ್ಯರೂಪಕ್ಕೆ
ಬಾರದಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಸಾಲದು ಎಂಬುದಕ್ಕೆ ಜನಪ್ರತಿನಿಧಿಗಳ ಮೂಲಕವೂ ಹೇಳಿಸುತ್ತಿದ್ದಾರೆ ಎಂಬುದು ವರದಿಯಾಗಿದೆ.
Advertisement
ಇನ್ಮುಂದೆ ಕಠಿಣ: ತಮ್ಮದೇ ಕಾಲೇಜ್‌ನ ಪರೀಕ್ಷಾ ಕೇಂದ್ರದಲ್ಲಿ ಅವರಿವರ ಸಹಾಯದಿಂದ ಪರೀಕ್ಷೆ ಬರೆಯುವುದಕ್ಕೆ ಕ್ಲಷ್ಟರ್ ಪದ್ಧತಿಯಿಂದ ಬ್ರೇಕ್ ಹಾಕಿದ್ದಕ್ಕೆ ವಿದ್ಯಾರ್ಥಿ ಸಮುದಾಯ ಹಾಗೂ ಕೆಲವು ಖಾಸಗಿ ಕಾಲೇಜ್‌ಗಳಿಂದ ವಿರೋಧ ವ್ಯಕ್ತವಾಗಿತ್ತಲ್ಲದೇ ಈ ಸುಧಾರಣಾ ಕಾರ್ಯ ಮೈಗೂಢಿಸಿಕೊಳ್ಳದೇ ರಂಗೋಲಿ ಕೆಳಗೆ ನುಸುಳಿದಂತೆ ಬೇರೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯದೇ ತಮ್ಮ ಕಾಲೇಜ್‌ನಲ್ಲಿಯೇ ಪರೀಕ್ಷೆ ಬರೆದು ತದನಂತರ ದಂಡ ತುಂಬಲಾಗಿತ್ತು. ಆದರೆ ಇದಕ್ಕೂ ಕಡಿವಾಣ ಈಗ ಹಾಕಲಾಗುತ್ತಿದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯಕ್ಕೆ ಬಾರ್ ಕೋಡಿಂಗ್ ಪದ್ಧತಿ ಜಾರಿಗೆ ತರುತ್ತಿರುವುದನ್ನು ಅವಲೋಕಿಸಿದರೆ ಗುಲ್ಬರ್ಗ ವಿವಿಯಿಂದ ಹೇಗಾದರೂ ಪದವಿ ಪಡೆಯಬಹುದು ಎಂಬ ಲೆಕ್ಕಾಚಾರ ಹೊಂದಿದ್ದವರಿಗೆ ಇನ್ಮುಂದೆ ಕೈ ಕೊಡುವ ಸಾಧ್ಯತೆಗಳೇ ಹೆಚ್ಚು. ಒಟ್ಟಾರೆ ಬಾರ್ ಕೋಡಿಂಗ್ ಪದ್ಧತಿಯ ಮೂಲ ಆಶಯ ಸಮರ್ಪಕ ಜಾರಿಯಾಗಿ ಶೈಕ್ಷಣಿಕ ಮಟ್ಟ ಸುಧಾರಣೆಗೆ ನಾಂದಿ ಹಾಡಬೇಕೆಂದು ವಿವಿಯ ಕೆಲ ಪ್ರಾಧ್ಯಾಪಕರು ಹಾಗೂ ಶಿಕ್ಷಣ ಪ್ರೇಮಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂಬರುವ ನವೆಂಬರ್ ತಿಂಗಳಿನಿಂದ ನಡೆಯುವ ವಿವಿಯ ಎಲ್ಲ ಹಂತದ ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆಗಳ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಬಾರ್ ಕೋಡಿಂಗ್ ನೀಡುವ ಪದ್ಧತಿ ಜಾರಿಗೆ ತರಲು ವಿವಿ ನಿರ್ಧರಿಸಿದೆ. ಈ ಸಂಬಂಧ ಏಜೆನ್ಸಿಗಳೊಂದಿಗೆ ಮಾತುಕತೆ ನಡೆದಿದೆ. ಒಟ್ಟಾರೆ ಈ ಪದ್ಧತಿ ಕಾರ್ಯಾನುಷ್ಠಾನಕ್ಕೆ ಬರಲಿದೆ.ಪ್ರೊ| ಡಿ.ಎಂ. ಮದರಿ, ಕುಲಸಚಿವರು (ಮೌಲ್ಯಮಾಪನ) ಗುಲ್ಬರ್ಗ ವಿವಿ ಹಣಮಂತರಾವ ಭೈರಾಮಡಗಿ