ದೇವನಹಳ್ಳಿ: ಕತ್ತು ಸೀಳಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಚನ್ನರಾಯಪಟ್ಟಣ ಠಾಣೆ ವ್ಯಾಪ್ತಿಯ ನಲ್ಲೂರು ಗ್ರಾಮದ ಗುಲಾಬಿ ತೋಟದಲ್ಲಿ ನಡೆದಿದೆ. ಪೊಲೀಸರ ಸಮ್ಮುಖದಲ್ಲಿ ಅಂತರ್ ಜಾತಿ ವಿವಾಹವಾಗಿದ್ದ ಬಿದಲೂರಿನ ಹರೀಶ್(27) ಎಂಬಾತನನ್ನು ಆತನ ಪತ್ನಿಯ ತಮ್ಮ ವಿನಯ್‌ಕುಮಾರ್ ಕೊಲೆ ಮಾಡಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚನ್ನರಾಯಪಟ್ಟಣ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಕೊಲೆ ಆರೋಪ: ಆರು ತಿಂಗಳ ಹಿಂದೆಯಷ್ಟೇ ನಲ್ಲೂರು ನಿವಾಸಿ ಮೀನಾ ಮತ್ತು ಹರೀಶ್ ಅಂತರ್ಜಾತಿ ವಿವಾಹವಾಗಿದ್ದರು. ನಲ್ಲೂರು ಗ್ರಾಮದ ಬಳಿಯಿರುವ ಹೂವಿನ ತೋಟದಲ್ಲಿ ಬುಧವಾರ ಬೆಳಗ್ಗೆ ಹರೀಶ್ ಮೃತದೇಹ ಪತ್ತೆಯಾಗಿದೆ. ಕುತ್ತಿಗೆ ಮತ್ತು ಎದೆಯ ಭಾಗದಲ್ಲಿ ಹರಿತವಾದ ಆಯುಧಗಳಿಂದ ಇರಿದಿ ರುವುದರಿಂದ ಕೊಲೆ ಮಾಡಲಾಗಿದೆ ಎಂದು ಮೃತ ಹರೀಶ್ ತಂದೆ ನಾರಾಯಣಸ್ವಾಮಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರಿಂದ ಪರಿಶೀಲನೆ: ಮಂಗಳವಾರ ರಾತ್ರಿ ಚೀಟಿ ಹಣ ಕಟ್ಟಲೆಂದು ನಲ್ಲೂರು ಗ್ರಾಮಕ್ಕೆ ತೆರಳಿದ್ದ ಹರೀಶ್ ನನ್ನು ಆತನ ಭಾಮೈದ ವಿನಯ್ ಕುಮಾರ್ ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ವೃತ್ತ ನಿರೀಕ್ಷಕ ಪ್ರಕಾಶ್ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ್ ಬಾಲರೆಡ್ಡಿ, ದೊಡ್ಡಬಳ್ಳಾಪುರ ಉಪಭಾಗದ ಡಿವೈಎಸ್‌ಪಿ ಮೋಹನ್‌ಕುಮಾರ್, ಸಬ್ ಇನ್‌ಸ್ಪೆಕ್ಟರ್ ನಂದೀಶ್ ಭೇಟಿ ನೀಡಿ ಪರಿಶೀಲಿಸಿದರು.
ಮರ್ಯದೆ ಗೇಡು: ಬಿದಲೂರು ನಿವಾಸಿ ಹರೀಶ್ ಆರು ತಿಂಗಳ ಮುಂಚೆಯೇ ಪೊಲೀಸರ ಸಮ್ಮುಖದಲ್ಲಿ ಅಂತರ್ ಜಾತಿ ಹುಡುಗಿಯನ್ನು ಮದುವೆಯಾಗಿದ್ದ. ಬೇರೆ ಕಡೆ ನಡೆಯು ವಂತಹ ಅಹಿತಕರ ಘಟನೆ ರೀತಿ ಮರ್ಯದೆಗೇಡು ಹತ್ಯೆಗೈದಿದ್ದಾರೆ.
ಇದರಿಂದ, ಸಾಮಾನ್ಯ ಜನರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಪೊಲೀಸ್ ಅಧಿಕಾರಿಗಳು ಕ್ರಮ ಜರುಗಿಸಬೇಕು. ಕಾನೂನಿನ ರೀತಿ ನ್ಯಾಯ ದೊರಕಿಸಿಕೊಡಬೇಕು ಎಂದು ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಡೇರಿ ನಾಗೇಶ್‌ಬಾಬು ಒತ್ತಾಯಿಸಿದರು.