Advertisement

ಬಾರಾಳಿ ಶಾಲೆ ದೈಹಿಕ ಶಿ.ಶಿಕ್ಷಕ ರಾಜಾರಾಮ್‌ ಡಬ್ಬಲ್‌ ಡ್ಯೂಟಿ

06:00 AM Jul 06, 2018 | |

ವಿಶೇಷ ವರದಿ -ಕೋಟ: ಆಂಗ್ಲ ಮಾಧ್ಯಮ ಶಾಲೆಗಳ ಹಳದಿ ಬಸ್ಸುಗಳ ಮಾಯೆಯಿಂದ ಇಂದು ಸರಕಾರಿ ಕನ್ನಡ ಶಾಲೆಗಳು ಸಂಕಷ್ಟಕ್ಕೆ ಸಿಲುಕುತ್ತಿದೆ. ಹೀಗಾಗಿ ಮಕ್ಕಳ ಸಂಖ್ಯಾಬಲ ಉಳಿಸಿಕೊಳ್ಳಲು ಸರಕಾರಿ ಶಾಲೆಗಳಲ್ಲೂ ವಾಹನದ ವ್ಯವಸ್ಥೆ ಮಾಡಲಾಗುತ್ತಿದೆ. ಇದೇ ರೀತಿ ಮಂದಾರ್ತಿ ಸಮೀಪ  ಬಾರಾಳಿ ಸ.ಹಿ.ಪ್ರಾ. ಶಾಲೆಯಲ್ಲೂ ಕಳೆದ ವರ್ಷದಿಂದ ಬಸ್ಸಿನ ವ್ಯವಸ್ಥೆ ಮಾಡಲಾಗಿದ್ದು,  ಇಲ್ಲಿನ ದೈ.ಶಿ.ಶಿಕ್ಷಕ ರಾಜಾರಾಮ್‌ ಚಾಲಕನಾಗಿ ಉಚಿತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಶಾಲೆಯಲ್ಲಿ ಇವರದ್ದು ಡಬ್ಬಲ್‌ ಡ್ಯೂಟಿ.

Advertisement

ಶಿಕ್ಷಣಾಭಿಮಾನಿಗಳಿಂದ 
ಮಿನಿ ಬಸ್ಸು ಕೊಡುಗೆ

ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವು ದನ್ನು  ಮನಗೊಂಡ ಹಳೆ ವಿದ್ಯಾರ್ಥಿ ವಿಜಯ್‌ ಹೆಗ್ಡೆ ಅವರು  ಕಳೆದ ವರ್ಷ ಶ್ರೀರಾಮ್‌ ಸೇವಾ ಸಮಿತಿ ಮೂಲಕ ಶಾಲೆಗೆ ಮಿನಿ ಬಸ್ಸು ಕೊಡುಗೆಯಾಗಿ ನೀಡಿದ್ದಾರೆ.  ಇದರ  ನಿರ್ವಹಣೆ ಹಳೆ ವಿದ್ಯಾರ್ಥಿಗಳ ಮೂಲಕ ನಡೆಯುತ್ತಿದೆ. ನಿರ್ವಹಣಾ ವೆಚ್ಚ ಅಧಿಕವಾಗುವುದರಿಂದ ಚಾಲಕನ ಸಂಬಳ ಉಳಿಸಲು ದೈ.ಶಿ.ಶಿಕ್ಷಕರೇ ಚಾಲಕನಾಗಿದ್ದಾರೆ.

ಬೆಳಗ್ಗೆ  6ಗಂಟೆಯಿಂದ ಸಂಜೆ 5.30ರ ವರೆಗೆ ಡ್ನೂಟಿ
ದೈ.ಶಿ.ಶಿಕ್ಷಕ ರಾಜಾರಾಮ್‌ ಅವರು ಮೂಲತಃ ಹೆಬ್ರಿ ನಿವಾಸಿಯಾಗಿದ್ದು ಇದೀಗ 15ವರ್ಷದಿಂದ ಈ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಹಾಗೂ ಬಾರಳಿಯಲ್ಲೇ ವಾಸವಾಗಿದ್ದಾರೆ. ಬೆಳಗ್ಗೆ  6ಗಂಟೆಗೆ ಶಾಲೆಯ ಕರ್ತವ್ಯಕ್ಕೆ ಹಾಜರಾಗುವ ಇವರು ಮೊದಲಿಗೆ ಹತ್ತಿರದ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿ ನೀಡುತ್ತಾರೆ. ಅನಂತರ 8ಗಂಟೆಗೆ ಚಾಲಕನ ಸೀಟಿನಲ್ಲಿ ಕುಳಿತು ಐದಾರು ಕಿ.ಮೀ. ದೂರದ ವಿದ್ಯಾರ್ಥಿಗಳನ್ನು ಶಾಲೆಗೆ ತಂದು ಬಿಡುತ್ತಾರೆ. ಸಂಜೆ ಮಕ್ಕಳನ್ನು ಮನೆ ಸೇರಿಸಿ 6ಗಂಟೆಗೆ ಮನೆ ತಲಪುತ್ತಾರೆ. ನಾಲ್ಕೈದು ದಿನ ರಜೆಯಲ್ಲಿದ್ದರೆ ಮಾತ್ರ ಬೇರೆ ಚಾಲಕನನ್ನು ನೇಮಿಸಲಾಗುತ್ತದೆ ಹಾಗೂ ಬಸ್ಸಿನ ನಿರ್ವಹಣೆಗೂ 65ಸಾವಿರಕ್ಕೂ ಅಧಿಕ ಇವರ ಕೈಯಿಂದಲೇ ವ್ಯಯಿಸಿದ್ದಾರೆ.

ಬಹುಮುಖ ಪ್ರತಿಭೆ
ದೈಹಿಕ ಶಿಕ್ಷಣ ತರಬೇತುದಾರ, ಗಣಿತ, ವಿಜ್ಞಾನ ಪಾಠ ಬೋಧಿಸುವ ಶಿಕ್ಷಕ, ಚಾಲಕ, ಕರಕುಶಲ ವಸ್ತುಗಳ ತರಬೇತುದಾರ, ಸಮಾಜಸೇವಕ ಹೀಗೆ ಬಹುಮುಖ ಪ್ರತಿಭೆ ಮೂಲಕ ಇವರು ಗುರುತಿಸಿಕೊಂಡಿದ್ದಾರೆ.

ಹೆಚ್ಚಿದ ವಿದ್ಯಾರ್ಥಿಗಳ ಸಂಖ್ಯಾಬಲ
1ರಿಂದ 7ನೇ ತರಗತಿ ವರೆಗಿನ ಈ ಶಾಲೆಯಲ್ಲಿ  ಬಸ್ಸು ಆರಂಭಿಸುವ ಮೊದಲು ವಿದ್ಯಾರ್ಥಿಗಳ ಸಂಖ್ಯೆ 50ರ 
ಆಸುಪಾಸಿನಲ್ಲಿತ್ತು. ಆದರೆ ಇದೀಗ 90ಕ್ಕೇರಿದೆ. ಶಾಲೆಯ ಕುರಿತು ವಿದ್ಯಾರ್ಥಿ ಗಳು ಹೆತ್ತವರು ಆಕರ್ಷಿತರಾಗುತ್ತಿದ್ದಾರೆ.

Advertisement

ಖುಷಿಯಿಂದಲೇ ಕಾರ್ಯ ನಿರ್ವಹಣೆ 
ಶಿಕ್ಷಣಾಭಿಮಾನಿಗಳು ಶಾಲೆಯ ಒಳಿತಿಗಾಗಿ ಮಿನಿ ಬಸ್ಸು ಕೊಡುಗೆಯಾಗಿ ನೀಡಿದ್ದಾರೆ.  ನಿರ್ವಹಣೆ ಕಷ್ಟವಾದ್ದರಿಂದ ಚಾಲಕನ ಸಂಬಳವನ್ನು ಉಳಿಸಿ  ನಿರ್ವಹಣೆಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ನಾನೇ ಆ ಕರ್ತವ್ಯಕ್ಕೆ ಮುಂದಾದೆ. ಇದೀಗ ಒಂದು ವರ್ಷ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ವಿದ್ಯಾರ್ಥಿಗಳ ಸಂಖ್ಯೆ ಕೂಡ ಹೆಚ್ಚಿದೆ. ನನಗೆ ಇದೊಂದು ಹೆಚ್ಚುವರಿ ಕೆಲಸ ಅನಿಸುತ್ತಿಲ್ಲ. ಖುಷಿಯಿಂದಲೇ  ಮಾಡುತ್ತಿದ್ದೇನೆ.
– ರಾಜಾರಾಮ್‌,
ದೈ.ಶಿ.ಶಿಕ್ಷಕರು ಬಾರಾಳಿ

Advertisement

Udayavani is now on Telegram. Click here to join our channel and stay updated with the latest news.

Next