ನಿರ್ದೇಶಕ ಬರಗೂರು ರಾಮಚಂದ್ರಪ್ಪ ಸದ್ದಿಲ್ಲದೆಯೇ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ. ಆ ಚಿತ್ರಕ್ಕೆ “ಬಯಲಾಟದ ಭೀಮಣ್ಣ’ ಎಂದು ಹೆಸರಿಡಲಾಗಿದೆ. ಅದು ಅವರೇ ಬರೆದ ಕಥೆ. ರಂಗ ಕಲಾವಿದನ ಯಶೋಗಾಥೆ ಕುರಿತಾದ ಚಿತ್ರವದು. ಇತ್ತೀಚೆಗೆ ರವಿಚಂದ್ರನ್ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.
ನಿರ್ದೇಶಕ ಬರಗೂರು ರಾಮಚಂದ್ರಪ್ಪ ತಮ್ಮ “ಬಯಲಾಟದ ಭೀಮಣ್ಣ’ ಕುರಿತು ಹೇಳಿದ್ದಿಷ್ಟು. “ಇದು ನಾನೇ ಬರೆದ ಕಥೆಯೊಂದನ್ನು ಆಧರಿಸಿದ ಚಿತ್ರ. ಯಕ್ಷಗಾನ ಮತ್ತು ಬಯಲಾಟ ದೊಡ್ಡ ಕಲೆ. ಬಯಲಾಟದ ಕಲಾವಿದನೊಬ್ಬ ಸಾಮಾಜಿಕ ನಾಟಕದಲ್ಲೊಮ್ಮೆ ನಟಿಸಬೇಕು ಎಂಬ ಆಸಕ್ತಿ ಉಳ್ಳವನು. ಆದರೆ, ಅದನ್ನು ಮಾಡದಂತಹ ಸ್ಥಿತಿ ಎದುರಾಗುತ್ತದೆ. ಬಯಲಾಟ ಕಲಾವಿದನ ಬದುಕಿನ ಏಳು-ಬೀಳು, ನಿರಾಸೆ, ಹತಾಶೆ ಕುರಿತಾದ ವಿಷಯಗಳು ಇಲ್ಲಿವೆ. ಇದೊಂದು ಹಳ್ಳಿ ಕಥೆಯಾಗಿದ್ದರೂ, ದೇಶದ ಕಲಾವಿದನ ಆಶೋತ್ತರ ಇಲ್ಲಿದೆ. ಹಳ್ಳಿಕಥೆಯಾಗಿದ್ದರೂ, ದೇಶದ ಕಥೆಯೇ ಎನ್ನುವಷ್ಟರ ಮಟ್ಟಿಗೆ ರೂಪಕವಾಗಿರಲಿದೆ’ ಎಂದು ಹೇಳಿದ ಬರಗೂರು, ರವಿಚಂದ್ರನ್ ಅವರ ಗುಣಗಾನ ಮಾಡಿದ್ದು ಹೀಗೆ, “ರವಿಚಂದ್ರನ್ ನೇರ ಮಾತುಗಾರ. ಭಾರತೀಯ ಚಿತ್ರರಂಗದಲ್ಲಿ ತೆರೆಯ ಮೇಲೆ ಹಾಡುಗಳ ಚಿತ್ರಣವನ್ನು ಅದ್ಭುತವಾಗಿ ಕಟ್ಟಿಕೊಡುವ ಇಬ್ಬರು ಅದ್ಭುತ ಪ್ರತಿಭೆಗಳೆಂದರೆ ಅದು ರವಿಚಂದ್ರನ್ ಹಾಗೂ ರಾಜ್‌ಕಪೂರ್. ಹಾಡಿನ ಸಂದರ್ಭದ ಭಾವ ತೀವ್ರತೆಯನ್ನು ಚೆನ್ನಾಗಿ ಕಟ್ಟಿಕೊಡುತ್ತಾರೆ. ಹಾಡಲ್ಲಿ ಸೌಂದರ್ಯ ಪ್ರಜ್ಞೆ, ಭಾವ ಪ್ರಜ್ಞೆ ವಿಶೇಷವಾಗಿ ಕಾಣಬಹುದು. ನನ್ನ ಪ್ರಕಾರ, ಸಾಲ ಮಾಡಿಯೂ ಸಂಭ್ರಮ ಪಡುವ ಕಲಾವಿದ ಅಂದರೆ ಅದು ರವಿಚಂದ್ರನ್. ದಿನದ 24 ಗಂಟೆ ಸಿನಿಮಾ ಬಿಟ್ಟು ಬೇರೆ ಏನೂ ಯೋಚಿಸಲ್ಲ. ರವಿಚಂದ್ರನ್ ಅವರ ಸರಳ ಮಾತುಗಳ ಹಿಂದೆ ಫಿಲಾಸಫಿ ಇರುತ್ತದೆ. ಅದು ಸಿನಿಮಾ ಬದುಕಿಗೆ ಸಂಬಂಧಿಸಿದಂತೆ ಸೀಮಿತವಾಗಿರುತ್ತೆ. ಅವರ ಚಿತ್ರಗಳ ಕುರಿತು ಗಂಭೀರ ಅಧ್ಯಯನ ಆಗಬೇಕು’ ಎಂಬುದು ಬರಗೂರು ಮಾತು.
ಈ ವೇಳೆ ರವಿಚಂದ್ರನ್ ಕೂಡ, ಬಯಲಾಟದ ಭೀಮಣ್ಣ ಕುರಿತು ಮಾತನಾಡಿದರು. “ಬರಗೂರು ಅವರು ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಮೂಲಕ ಅವರ ಮೊಗದಲ್ಲಿ ನಗುವಿಗೆ ಕಾರಣರಾಗಿದ್ದಾರೆ. ಅವರು ನನಗೂ ಮೇಷ್ಟ್ರು ಇದ್ದಂತೆ. ಅವರ ನನ್ನ ಸ್ನೇಹ ಹಳೆಯದು. ಆ ಪ್ರೀತಿಗೆ ನಾನು ಬಂದಿದ್ದೇನೆ. ಚಿತ್ರಕ್ಕೆ ಒಳ್ಳೆಯದಾಗಲಿ’ ಎಂದರು ರವಿಚಂದ್ರನ್.
ಸಂಗೀತ ನಿರ್ದೇಶಕಿ ಶಮಿತಾ ಮಲಾ°ಡ್ ಅವರಿಗೆ ಬರಗೂರು ರಾಮಚಂದ್ರಪ್ಪ ಅವರ ಚಿತ್ರಕ್ಕೆ ಸಂಗೀತ ನೀಡಿದ್ದು ಹೆಮ್ಮೆಯಂತೆ. ಆ ಬಗ್ಗೆ ಹೇಳುವ ಶಮಿತಾ ಮಲಾ°ಡ್, “ಚಿತ್ರದಲ್ಲಿ ಎಲ್ಲಾ ಗೀತೆಗಳಿಗೆ ಬರಗೂರು ಅವರ ಸಾಹಿತ್ಯವಿದೆ. ಇನ್ನು, ಚಿತ್ರಕ್ಕೆ ಪೊಲೀಸ್ ಅಧಿಕಾರಿ ರೂಪಾ, ಸುಂದರ್‌ರಾಜ್, ಸಂಚಾರಿ ವಿಜಯ್ ಹಾಡಿರುವುದು ವಿಶೇಷ. ಪ್ರತಿ ಹಾಡಲ್ಲೂ ವಿಶೇಷ ಅರ್ಥವಿದೆ. ಈ ಚಿತ್ರ ನನ್ನ ಬದುಕಿನ ಮೈಲಿಗಲ್ಲು’ ಎಂದರು ಶಮಿತಾ.
ಚಿತ್ರಕ್ಕೆ ಹಾಡಿರುವ ಪೊಲೀಸ್ ಅಧಿಕಾರಿ ರೂಪಾ, ಸಂಚಾರಿ ವಿಜಯ್, ಸುಂದರ್‌ರಾಜ್, ಕುರಿಗಾಹಿ ಹನುಮಂತ ಬಟ್ಟೂರು ತಮ್ಮ ಹಾಡುಗಳ ಬಗ್ಗೆ ಮಾತನಾಡಿದರು. ರಂಜಿತ್ ಎಂಬ ಹೊಸ ಪ್ರತಿಭೆ ಈ ಚಿತ್ರದ ಮೂಲಕ ಹೀರೋ ಆಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದೆ. ಚಿತ್ರವನ್ನು ನಂಜಪ್ಪ ಕಾಳೇಗೌಡ, ಕೃಷ್ಣವೇಣಿ, ಧನಲಕ್ಷ್ಮಿ, ಕೃಷ್ಣಪ್ಪ ನಿರ್ಮಾಣ ಮಾಡಿದ್ದಾರೆ. ನಾಗರಾಜ ಆದವಾನಿ ಛಾಯಾಗ್ರಹಣವಿದೆ. ಸುರೇಶ್ ಅರಸ್ ಸಂಕಲನವಿದೆ. ಚಿತ್ರದಲ್ಲಿ “ಸ್ಪರ್ಶ’ ರೇಖಾ, ಪ್ರಮೀಳಾ ಜೋಷಾಯ್, ರಾಧಾ, ಮಾ.ಆಕಾಂಕ್ಷ್, ವತ್ಸಲಾ ಮೋಹನ್, ಶಾಂತರಾಜ್, ಬಸವರಾಜ್, ರಂಗಾರೆಡ್ಡಿ , ಅರುಣ್ ಇತರರು ನಟಿಸಿದ್ದಾರೆ.
ವಿಜಯ್ ಭರಮಸಾಗರ