ವಾಷಿಂಗ್ಟನ್:ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅಮೆರಿಕದ 45ನೇ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿಯಲು ಕ್ಷಣಗಣನೆ ಆರಂಭಗೊಂಡಿದ್ದರೆ, ಮತ್ತೊಂದೆಡೆ ಅಮೆರಿಕದ ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಉಭಯ ಕುಶಲೋಪರಿ ನಡೆಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಬರಾಕ್ , ಪ್ರಧಾನಿ ಉಭಯ ಕುಶಲೋಪರಿ
ಪ್ರಧಾನಿ ಮೋದಿಗೆ ಬುಧವಾರ ಸಂಜೆ ಕರೆ ಮಾಡಿರುವ ಬರಾಕ್, ಭಾರತ ಮತ್ತು ಅಮೆರಿಕದ ಸಂಬಂಧ ಬಲಪಡಿಸಲು ನೀಡಿದ ಬೆಂಬಲಕ್ಕಾಗಿ ಕೃತಜ್ಞತೆ ಅರ್ಪಿಸುವುದಾಗಿ ಹೇಳಿದರು. ಉಭಯ ನಾಯಕರು ದೂರವಾಣಿಯಲ್ಲಿ ಮಾತನಾಡುತ್ತ ಎಲ್ಲಾ ಹಂತದಲ್ಲಿಯೂ ತೃಪ್ತಿ ತಂದ ಬಗ್ಗೆ ಘಟನೆಯನ್ನು ಮೆಲುಕು ಹಾಕಿದರು ಎಂದು ವರದಿ ವಿವರಿಸಿದೆ.
2015ರಲ್ಲಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾರತಕ್ಕೆ ಭೇಟಿ ಕೊಟ್ಟ ಸಂದರ್ಭವನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಂಡರಲ್ಲದೆ, ಭಾರತದ 68ನೇ ಗಣರಾಜ್ಯೋತ್ಸವಕ್ಕೆ ಶುಭ ಹಾರೈಸುವುದಾಗಿಯೂ ತಿಳಿಸಿರುವುದಾಗಿ ವರದಿ ತಿಳಿಸಿದೆ.
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧದಿಂದಾಗಿ ಆರ್ಥಿಕ ಮತ್ತು ಭದ್ರತೆಗೆ ನೀಡಿದ ಪ್ರಾಮುಖ್ಯತೆಯ ಕುರಿತು ಚರ್ಚಿಸಿದರು. 2014ರಲ್ಲಿ ನಡೆದ ಚುನಾವಣೆಯಲ್ಲಿ ಮೋದಿ ಭರ್ಜರಿ ಜಯಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದ ಕೂಡಲೇ ದೂರವಾಣಿ ಕರೆ ಮಾಡಿ ಮೋದಿಯನ್ನು ಅಭಿನಂದಿಸಿದ ಪ್ರಮುಖ ಗಣ್ಯರಲ್ಲಿ ಒಬಾಮ ಮೊದಲಿಗರು. ಬಳಿಕ ಶ್ವೇತಭವನಕ್ಕೆ ಭೇಟಿ ನೀಡುವಂತೆಯೂ ಬರಾಕ್ ಆಹ್ವಾನ ನೀಡಿದ್ದರು. ಬಳಿಕ 2014ರಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಶ್ವೇತ ಭವನಕ್ಕೆ ಭೇಟಿ ನೀಡಿದ್ದರು.