ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಕಳೆದೊಂದು ವಾರದ ಅವಧಿಯಲ್ಲಿ ಎರಡನೇ ಬಾರಿಗೆ ಟ್ರಂಪ್ ಸರಕಾರವನ್ನು ಟೀಕಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ನಿರ್ವಹಣೆ ದೇಶದ ನಾಯಕತ್ವದ ವೈಫಲ್ಯವನ್ನು ಎತ್ತಿ ತೋರಿಸಿದೆ ಎಂದು ಆರೋಪಿಸಿದ್ದಾರೆ.
ಪದವೀಧರರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಟ್ರಂಪ್ ಆಡಳಿತ ಕೋವಿಡ್ ಸಾಂಕ್ರಾಮಿಕವನ್ನು ನಿರ್ವಹಿಸಿದ ರೀತಿಯನ್ನು ಟೀಕಿಸಿದರು.
ಹಲವು ಅಧಿಕಾರಿಗಳು ತಮಗಿರುವ ಜವಾಬ್ದಾರಿಯನ್ನು ಅರಿಯದೆ, ಸಾಂಕ್ರಾಮಿಕ ನಿಯಂತ್ರಣದ ಜವಾಬ್ದಾರಿ ತಮ್ಮದು ಎಂಬುದನ್ನೇ ಮರೆತಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು. ಆದರೆ, ತಮ್ಮ ಭಾಷಣದಲ್ಲಿ ಅವರು ಟ್ರಂಪ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸಲಿಲ್ಲ.
ದೇಶದಲ್ಲಿನ ಆಫ್ರಿಕನ್-ಅಮೆರಿಕನ್ ಸಮುದಾದ ಬಹಳಷ್ಟು ಮಂದಿ ಕೋವಿಡ್ ಸೋಂಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಲವು ಮಂದಿ ಅಸುನೀಗಿದ್ದಾರೆ. ಒಬಾಮಾ ಕೂಡ ಇದೇ ಸಮುದಾಯಕ್ಕೆ ಸೇರಿದವರು.