Advertisement

ಬಿಳಿಗೆರೆ ರೆಕ್ಕೆ ಕೀಜುಗ 

01:10 AM Jan 19, 2019 | |

 ಟೆಲಿಫೋನ್‌ ತಂತಿ, ವಿದ್ಯುತ್‌ ತಂತಿ ಅಥವಾ ಎತ್ತರದ ಬೋಳುಮರ ಈ ಹಕ್ಕಿಗಳಿಗೆ ತುಂಬಾ ಪ್ರಿಯವಾದ ಸ್ಥಳ.  ಬೇಟೆ ಯಾಡಿದ ಸಂಭ್ರಮ ಪ್ರಕಟಿಸಲು ಅಥವಾ ವಿಫ‌ುಲ ಆಹಾರ ಇದೆ ಎಂಬ ಸಂದೇಶ ರವಾನಿಸಲು,  ಮಿಲನದ ಸಂದರ್ಭದಲ್ಲಿ ಭಿನ್ನದನಿಯಲ್ಲಿ ಕೂಗುತ್ತದೆ.   

Advertisement

ಈ ಹಕ್ಕಿಯ ಇನ್ನೊಂದು ಹೆಸರು ಹುಳ ಹಿಡುಕ ಕೀಜುಗ. ಇದು ಬೇಟೆಯಾಡುವ ಪರಿ ಬಹಳ ಚೆನ್ನಾಗಿದೆ.  ದಟ್ಟ ಕಾಡಿನ ಮಧ್ಯೆ, ಮರದಿಂದ ಮರಕ್ಕೆ ಹಾರುತ್ತಾ -ಹಾರುವ ರೆಕ್ಕೆ ಹುಳಗಳನ್ನು ಮಾರ್ಗ ಮಧ್ಯದಲ್ಲಿಯೇ ಹಿಡಿದು -ತಾನು ಕುಳಿತ ಟೊಂಗೆಗೆ ತಿರುಗಿ ಬಂದು, ತನ್ನ ಬೇಟೆಯನ್ನು ಟೊಂಗೆಗೆ ಚಚ್ಚಿಸಾಯಿಸಿ ತಿನ್ನುತ್ತದೆ.  ಬಿಳಿಗೆರೆ ರೆಕ್ಕೆ ಕೀಜುಗ ಹಕ್ಕಿಯ ಮೈ ಬಣ್ಣವು  ಹೊಳೆವ ನೀಲಿಗಪ್ಪು ಬಣ್ಣದಿಂದ ಕೂಡಿರುತ್ತದೆ. 

ಇದು ಸದಾ ಹಾರುವ ರೆಕ್ಕೆ ಹುಳಗಳನ್ನು ತಿನ್ನುತ್ತಿತ್ತದೆ. ಆ ಕಾರಣದಿಂದಲೇ ಇಂಗ್ಲಿಷ್‌ನಲ್ಲಿ ಇದನ್ನು ಪ್ಲೆ„ಕ್ಯಾಚರ್‌ ಶ್ರೆ„ಕ್‌ ಎಂದು ಕರೆಯುತ್ತಾರೆ. ಈ ಹಕ್ಕಿಯ ರೆಕ್ಕೆ ಅಂಚಿನ ಸ್ವಲ್ಪ ಒಳಗೆ ಮೇಲಿನಿಂದ ರೆಕ್ಕೆ ತುದಿಯವರೆಗೆ ಇರುವ ಬಿಳಿ ಗೆರೆಯಿಂದಲೇ ಈ ಹಕ್ಕಿಗೆ ‘ಬಿಳಿಗೆರೆ ರೆಕ್ಕೆ ಕೀಜುಗ ಎಂದು ಹೆಸರಿಸಲಾಗಿದೆ.  ಇದರ ಬಾಲದ ಪುಕ್ಕ ಅಗಲವಿದೆ.  ಅಂಚಿನ ಗರಿಯ ತುದಿಯಲ್ಲಿ -ಬಿಳಿಗೆರೆ ಇದೆ. ಹೊಟ್ಟೆ, ಕುತ್ತಿಗೆ, ಬಾಲದ ಅಡಿಯಲ್ಲೂ ಬಿಳಿಬಣ್ಣದ ಗರಿ ಇದೆ. ಕುಳಿತಾಗ ಎರಡೂ ರೆಕ್ಕೆ ಸೇರುವ ತುದಿಬಾಗದಲ್ಲಿ ಬಿಳಿ ಬಣ್ಣ ಎದ್ದು ಕಾಣುತ್ತದೆ.  ಕಾಲು, ಬೂದುಗಪ್ಪು ಬಣ್ಣದಿಂದ ಕೂಡಿರುತ್ತದೆ.  ತಲೆಯಲ್ಲಿ ಟೋಪಿಯಂತಿರುವ ನಿಲಿಗಪ್ಪು ಬಣ್ಣ ಇದನ್ನು ಇತರ ಕೀಜುಗ ಹಕ್ಕಿಗಳಿಂದ ಪ್ರತ್ಯೇಕಿಸಲು ಸಹಾಯಕವಾಗಿದೆ. ಮಡಿವಾಳ ಹಕ್ಕಿ ಇಲ್ಲವೇ ಮೇಗೆಪೈ ರಾಬಿನ್ನ ಈ ಹಕ್ಕಿಯನ್ನು ತುಂಬಾ ಹೋಲುತ್ತದೆ . ಆದರೆ, ಅದು ಈ ಹಕ್ಕಿಗಿಂತ ಕೊಂಚ ದೊಡ್ಡದು. ಇವೆರಡೂ ಹಕ್ಕಿಯ ರೆಕ್ಕೆಯಲ್ಲಿರುವ ಬಿಳಿಗೆರೆ ತುಂಬಾ ಹೋಲುತ್ತದೆ.  ಆದರೆ ಮೆಗೆಪೈ ರಾಬಿನ್ನ ಹಕ್ಕಿ ಚುಂಚು ಚೂಪಾಗಿರುತ್ತದೆ. 

ಒಣಗಿದ ಮರದ ಟೊಂಗೆಯ ತುತ್ತ ತುದಿಯಲ್ಲಿ ಕುಳಿತು -ರೆಕ್ಕೆ ಹುಳ ಬರುವುದನ್ನೇ ಹೊಂಚು ಹಾಕಿ ಕಾಯುತ್ತಿರುತ್ತದೆ.   ಇದರ ಬೇಟೆಯ ರೀತಿ ಭಿನ್ನ.  ತಿರು ತಿರುಗಿ ಹಾರುತ್ತಾ -ಸಮತೋಲನ ಕಾಯ್ದುಕೊಳ್ಳುವ ನೈಪುಣ್ಯ ಈ ಹಕ್ಕಿಗೆ ಇದೆ. ಟೆಲಿಫೋನ್‌ ತಂತಿ, ವಿದ್ಯುತ್‌ ತಂತಿ ಅಥವಾ ಎತ್ತರದ ಬೋಳುಮರ ಈ ಹಕ್ಕಿಗಳಿಗೆ ತುಂಬಾ ಪ್ರಿಯವಾದ ಸ್ಥಳ.  ಬೇಟೆ ಯಾಡಿದ ಸಂಭ್ರಮ ಪ್ರಕಟಿಸಲು ಅಥವಾ ವಿಫ‌ುಲ ಆಹಾರ ಇದೆ ಎಂಬ ಸಂದೇಶ ರವಾನಿಸಲು,  ಮಿಲನದ ಸಂದರ್ಭದಲ್ಲಿ ಭಿನ್ನದನಿಯಲ್ಲಿ ಕೂಗುತ್ತದೆ.   ಭೂಮಿಗೆ ಸಮಾನಾಂತರವಾಗಿರುವ ಒಣ ಮರದ ಟೊಂಗೆಯ ಮೇಲ್ಭಾಗದಲ್ಲಿ  ಬೇರು ನಾರು ಸೇರಿಸಿ ಗೂಡು ಕಟ್ಟುತ್ತದೆ.  ಇದು ಗೂಡನ್ನು ಒಣ ಟೊಂಗೆಯ 
ಹತ್ತಿರವೇ ಯಾಕೆ ಆರಿಸುತ್ತದೆ? ಇದರಿಂದ ಪ್ರಯೋಜನ ಏನು? ಎಂಬುದು ತಿಳಿದಿಲ್ಲ. ಬಹುಶಃ ಈ ಒಣ ಟೊಂಗೆಯಲ್ಲಿರುವ ಹುಳಗಳು ಆಹಾರಕ್ಕೆ ಸುಲಭವಾಗಿ ದಕ್ಕುತ್ತವೆ ಅನ್ನೋ ಕಾರಣಕ್ಕೆ ಇಲ್ಲಿ ಗೂಡು ಕಟ್ಟುವುದೇನೋ… 

 ಬೋಳು ಮರದ ಟೊಂಗೆಯಲ್ಲಿ ಇದರ ಗೂಡು ಚಿಕ್ಕ ಮರದ ಬೊಡ್ಡೆಯಂತೆ ಕಾಣುತ್ತದೆ. ಹೀಗೆ ಭಾಸವಾಗುವುದರಿಂದ ಇದು ಮರದ ಗೆಣ್ಣು ಎಂದು ಭಾವಿಸುವ ವೈರಿ ಹಕ್ಕಿಗಳಿಗೆ ಇದರ ಗೂಡು ಪತ್ತೆಮಾಡುವುದೇ ಕಷ್ಟವಾಗುವುದು. ಒಂದು ಸಲಕ್ಕೆ ಎರಡು, ಮೂರು ಮೊಟ್ಟೆ ಇಡುತ್ತದೆ. ಅವು ಕಂದು ಮಚ್ಚೆ ಮತ್ತು ಚುಕ್ಕೆಯಿಂದ ಕೂಡಿರುತ್ತವೆ. ಭಾರತದಲ್ಲಿ  ಮಾರ್ಚ್‌ನಿಂದ ಮೇ ಅವಧಿಯಲ್ಲಿ ಗೂಡು ಮಾಡಿ ಮರಿಮಾಡುತ್ತದೆ. ಹೆಣ್ಣು ಕಾವು ಕೊಟ್ಟು ಮರಿಮಾಡುತ್ತದೆ.  ಮರಿ ಕಣ್ಣು ಮುಚ್ಚಿರುವ ವರೆಗೆ ಗೂಡಿನ ಮಧ್ಯದಲ್ಲಿ ತನ್ನ ಚುಂಚನ್ನು ಮೇಲ್ಮುಖವಾಗಿಸಿ, ತಾಯಿ ಹಕ್ಕಿಯು ಗುಟುಕು ನೀಡುತ್ತದೆ. ಕೆಲವು ಸಮಯ ತಂದೆ ತಾಯಿಯ ಜೊತೆ -ರೆಕ್ಕೆ ಹುಳ ಹಾರಿ ಹಿಡಿಯುವುದನ್ನು ಕಲಿಯುತ್ತದೆ. ಇದರ ಉಪ ತಳಿಗಳು ದಕ್ಷಿಣ  ಏಷಿಯಾ, ಸುಮಾತ್ರಾ , ಬರ್ಮಾ, ಪೆನ್ಸಿಲ್ವೇನಿಯಾ ಕಾಡಿನಲ್ಲೂ ಇವೆ.  ದಾಂಡೇಲಿ -ಕರ್ನಾಟಕ, ಕಾರವಾರ , ಗೊವಾ, ತಮಿಳುನಾಡಿನ ಸಮಶೀತೋಷ್ಣ  ಕಾಡಿನ ನಡುವೆ ಈ ಹಕ್ಕಿಯ ಇರು ನೆಲೆಗಳಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next