ಎಚ್.ಡಿ.ಕೋಟೆ: ಮಧ್ಯ ಏಷ್ಯಾದಿಂದ ರಾಜ್ಯದ ದಕ್ಷಿಣ ಭಾಗಕ್ಕೆ ವಲಸೆ ಬರುವ ಪಟ್ಟೆ ತಲೆಯ ಹೆಬ್ಟಾತು (ಬಾರ್ ಹೆಡೆಡ್ ಗೂಸ್) ತಾಲೂಕಿನ ಕಬಿನಿ ಹಿನ್ನೀರಿನಲ್ಲಿ ಕಾಣಿಸಿಕೊಂಡು ಪಕ್ಷಿಪ್ರೇಮಿಗಳಲ್ಲಿ ಕುತೂಹಲ ಮೂಡಿಸಿವೆ.
ದೇಶ ವಿದೇಶಗಳಿಂದ ಹಾರಿಬರುವ ಸಾವಿರಾರು ಪಕ್ಷಿಗಳಾದ ಪಟ್ಟೆ ತಲೆ ಹೆಬ್ಟಾತು ಅಥವಾ ಗೀರು ತಲೆ ಹೆಬ್ಟಾತುಗಳು ತಾವು ಮೂಲ ಸ್ಥಳದಲ್ಲಿ ಬೇಸಿಗೆಯಲ್ಲಿ ಸಂತಾನೋತ್ಪತ್ತಿ ಮಾಡಿ, ಮಳೆಗಾಲದಲ್ಲಿ ಮರಿಗಳನ್ನು ಬೆಳೆಸಿಕೊಂಡು ಚಳಿಗಾಲದಲ್ಲಿ ದಕ್ಷಿಣ ಭಾರತದತ್ತ ವಲಸೆ ಬರುತ್ತಿವೆ. ಚಳಿಗಾಲ ಮುಗಿದ ನಂತರ ಮಾರ್ಚ್ – ಏಪ್ರಿಲ್ ಹೊತ್ತಿಗೆ ವಾಪಸ್ ತೆರಳುತ್ತವೆ. ಅದರಲ್ಲೂ ಕಳೆದ ಆರೇಳು ವರ್ಷಗಳಿಂದ ತಪ್ಪದೆ ತಾಲೂಕಿನ ಕಬಿನಿ ಜಲಾ ಶಯದ ಹಿನ್ನೀರಿನಲ್ಲಿ ಬಂದು ಬೀಡುತ್ತಿವೆ. ಸಾಮಾನ್ಯವಾಗಿ ಚಳಿಗಾಲ ಆರಂಭವಾಗುತ್ತಿದ್ದಂತೆ ಮಂಗೋಲಿಯ, ಸೈಬೀರಿಯಾ, ಮಧ್ಯ ಏಷ್ಯಾ ಮತ್ತು ಟಿಬೆಟ್ ದೇಶಗಳಿಂದ ಹಿಮಾಲಯ ಮಾರ್ಗ ವಾಗಿ ದಕ್ಷಿಣ ಭಾರತದತ್ತ ಈ ಬಾತುಕೋಳಿ ಜಾತಿಯ ಪಟ್ಟೆ ತಲೆ ಹೆಬ್ಟಾತು ಅಥವಾ ಬಾರ್ ಹೆಡೆಡ್ ಗೂಸ್ ಹಕ್ಕಿಗಳು ಪ್ರತಿ ವರ್ಷ ಡಿಸೆಂಬರ್ ತಿಂಗಳ ಕೊನೆಯಲ್ಲಿ ಇಲ್ಲಿಗೆ ಬರುತ್ತವೆ. ಸದ್ಯ ಕಬಿನಿ ಹಿನ್ನೀರಿನಲ್ಲಿ ಒಂದು ವಾರದ ಹಿಂದೆ ಬಂದು ಬಿಡು ಬಿಟ್ಟಿವೆ.
ಸಸ್ಯಹಾರಿ ಹಕ್ಕಿಗಳು, ನಿಶಾ ಚರಿಯೂ ಹೌದು: ಪಟ್ಟೆ ತಲೆಯ ಹೆಬ್ಟಾತುಗಳು ಜಗತ್ತಿನಲ್ಲೇ ಅತಿ ಎತ್ತರದಲ್ಲಿ ಹಾರಬಲ್ಲ ಪಕ್ಷಿಗಳು. ಅವು ಅಪ್ಪಟ ಸಸ್ಯಹಾರಿಯೂ ಹೌದು. ಭತ್ತದ ಕಟಾವು ಮಾಡಿದ ಗದ್ದೆಯಲ್ಲಿ ಬಿದ್ದಿರುವ ಭತ್ತ ಮತ್ತು ಗದ್ದೆಯಲ್ಲಿ ಉದುರಿ ಹೊಸದಾಗಿ ಮೂಡಿದ ಚಿಗುರುನ್ನು ತಿಂದು ತಮ್ಮ ಆಹಾರವನ್ನು ಕಂಡುಕೊಳ್ಳುತ್ತವೆ. ಬೆಳಗ್ಗೆ ಸುಮಾರು 6 ಗಂಟೆಯಿಂದ 10 ರಿಂದ 11 ಗಂಟೆ ತನಕ ಗದ್ದೆಯಲ್ಲಿ ಆಹಾರವನ್ನು ತಿನ್ನುತ್ತವೆ, ನಂತರ ಬಿಸಿಲು ಹೆಚ್ಚಾಗುತ್ತಿದ್ದಂತೆ ಕಬಿನಿ ಹಿನ್ನೀರಿನ ನೀರಿನಲ್ಲಿ ಬಂದು ಆಶ್ರಯಿಸುತ್ತವೆ. ಪುನಃ ಸಂಜೆ ಹೊತ್ತಿಗೆ ಭತ್ತದ ಕಟಾವು ಆಗಿರುವ ಗದ್ದೆಯ ಬಯಲು ಪ್ರದೇಶಕ್ಕೆ ಹೋಗಿ ರಾತ್ರಿಯ ವೇಳೆಯಲ್ಲೂ ಆಹಾರ ಹುಡುಕಾಟ ದಲ್ಲಿ ತೊಡಗಿಕೊಳ್ಳುತ್ತವೆ.
ರೈತರಿಗೂ ಅನುಕೂಲ: ಒಂದೊಂದು ಗುಂಪಿನಲ್ಲಿ ನೂರಾರು ಬಾತುಕೋಳಿಗಳು ಪ್ರತಿನಿತ್ಯ 4 ರಿಂದ 5 ಗಂಟೆಗಳ ಕಾಲ ಭತ್ತ ಕಟಾವು ಆಗಿರುವ ಗದ್ದೆಯಲ್ಲಿ ಇರುವುದರಿಂದ ಇವುಗಳ ಪಿಕ್ಕೆ, ಜಮೀನಿಗೆ ಉತ್ತಮ ಗೊಬ್ಬರವಾಗುತ್ತದೆ. ರೈತರು ಬಾತು ಕೋಳಿಗಳು ಗದ್ದೆಗೆ ಬಂದು ಕುಳಿತಿವೆ ಎಂದರೆ ಯಾರೂ ಅವುಗಳ ಹತ್ತಿರವೇ ಹೋಗುವುದಿಲ್ಲ .
ಬಹು ಸೂಕ್ಷ್ಮಮತಿ ಈ ಬಾತು ಹಕ್ಕಿಗಳು! : ಯಾರದರೂ ಸಣ್ಣ ಕಲ್ಲು ಹೊಡೆಯುವುದು, ಇನ್ನಿತರ ಯಾವುದಾದರೂ ರೀತಿಯಲ್ಲಿ ತೊಂದರೆ ಕೊಟ್ಟರೆ ಪುನಃ ಅವುಗಳು ಈ ಜಮೀನಿಗೆ ಬರುವುದಿಲ್ಲ. ಹಾಗಾಗಿ ಇಲ್ಲಿನ ರೈತರು ಈ ಬಾತು ಕೋಳಿಗಳು ಗದ್ದೆಗೆ ಬಂದ ಸಮಯದಲ್ಲಿ ಅವುಗಳಿಗೆ ಯಾವುದೇ ರೀತಿ ಯಲ್ಲಿ ತೊಂದರೆ ಆಗದ ರೀತಿಯಲ್ಲಿ ಎಚ್ಚರಿಕೆ ಯಿಂದ ನೋಡಿಕೊಳ್ಳುತ್ತಾರೆ. ತಾಲೂಕಿನ ಕಬಿನಿ ಹಿನ್ನೀರಿಗೆ ಗುಂಪು ಗುಂಪಾಗಿ ಬಂದು ವಿರಮಿ ಸುವ ಈ ವಲಸೆ ಹಕ್ಕಿಗಳು ವಲಸೆ ಬರುವಾಗ ದಿನವೊಂದಕ್ಕೆ ನೂರಾರು ಕಿ.ಮೀ. ಸಾಗುತ್ತವೆ. ಜತೆಗೆ ಆಮ್ಲಜನಕ ಕೊರತೆ ಎದುರಿಸಿ ಹಿಮಾ ಲಯ ಪರ್ವತವನ್ನು ದಾಟಲು 18 ಸಾವಿರ ದಿಂದ 26 ಸಾವಿರ ಅಡಿಗಳ ಎತ್ತರದಲ್ಲಿ ಹಾರಿ ಬರುತ್ತವೆ ಆದ್ದರಿಂದ ಇವುಗಳನ್ನು ಪರ್ವತ ಹಕ್ಕಿಗಳೆಂದು ಸಹ ಕರೆಯುತ್ತಾರೆ.
ಕಳೆದ ಆರೇಳು ವರ್ಷದಲ್ಲಿ ನಾನು ಕಂಡಂತೆ ಬಾರ್ ಹೆಡೆಡ್ ಗೂಸ್ ಹೆಬ್ಟಾತುಗಳು ಡಿಸೆಂ ಬರ್ ತಿಂಗಳ ಆರಂಭದಲ್ಲೇ ಕಬಿನಿ ಹಿನ್ನೀರಿಗೆ ಆಗಮಿ ಸುತ್ತಿದ್ದವು, ಈ ವರ್ಷ ಡಿಸೆಂಬರ್ ಅಂತ್ಯದಲ್ಲಿ ಆಗಮಿ ಸಿದ್ದು, ಮೊದಲೆಲ್ಲ ಹಿಂಡು ಹಿಂಡಾಗಿ ಕಾಣಿಸಿಕೊಳ್ಳು ತ್ತಿದ್ದ ವಲಸೆ ಹಕ್ಕಿಗಳು ವರ್ಷಗಳು ಉರುಳಿದಂತೆ ವಲಸೆ ಹಕ್ಕಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದಾಗಿ ವನ್ಯಜೀವಿ ಛಾಯಾಗ್ರಾಹಕರಿಗೆ, ಪಕ್ಷಿ ಪ್ರಿಯರಿಗೆ ಬಹಳ ನಿರಾಸೆಯಾಗಿದೆ.
● ಸಮೀರ್ ಕೋಟೆ, ವನ್ಯಜೀವಿ ಛಾಯಾಗ್ರಾಹಕ, ಎಚ್.ಡಿ.ಕೋಟ
– ಬಿ.ನಿಂಗಣ್ಣಕೋಟೆ