ಬೆಂಗಳೂರು: ಮಿತಿ ಮೀರಿದ ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವ ದೂರಿನ ಹಿನ್ನೆಲೆಯಲ್ಲಿ ಇಂದಿರಾನಗರ 100 ಅಡಿ ರಸ್ತೆಯಲ್ಲಿರುವ “ಟಿಪ್ಲರ್ ಬಾರ್ ಅಂಡ್ ರೆಸ್ಟೋರೆಂಟ್’ಗೆ ಬೀಗಮುದ್ರೆ ಹಾಕಲಾಗಿದೆ ಎಂದು ಬಿಬಿಎಂಪಿ ಸೋಮವಾರ ಹೈಕೋರ್ಟ್‌ಗೆ ಹೇಳಿದೆ.
ಇಂದಿರಾನಗರದಲ್ಲಿ ಪಬ್ ಹಾಗೂ ರೆಸ್ಟೋರೆಂಟ್‌ಗಳಿಂದ ಮಿತಿ ಮೀರಿದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ದೂರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾ. ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಬಿಬಿಎಂಪಿ ಪರ ವಕೀಲರು ಈ ಕುರಿತು ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
ಹೈಕೋರ್ಟ್ ನಿರ್ದೇಶನದಂತೆ ಟಿಪ್ಲರ್ ಬಾರ್ ಆಂಡ್ ರೆಸ್ಟೋರೆಂಟ್ ಅನ್ನು ಜಪ್ತಿ ಮಾಡಿಕೊಳ್ಳಲಾಗಿದ್ದು, ಕರ್ನಾಟಕ ಪೌರ ನಿಗಮ ಕಾಯ್ದೆಯನ್ವಯ ನೋಟಿಸ್ ಜಾರಿಗೊಳಿಸಲಾಗಿದೆ. ಅಲ್ಲದೆ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ. ಈ ಪ್ರಮಾಣಪತ್ರವನ್ನು ದಾಖಲಿಸಿಕೊಂಡ ನ್ಯಾಯಪೀಠ, ಕ್ರಮ ಕೈಗೊಂಡಿರುವ ಬಗ್ಗೆ ಆ.13ರಂದು ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಪೂರ್ವ ವಲಯದ ಜಂಟಿ ಆಯುಕ್ತ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ , ನ್ಯಾಯಾಲಯದ ನಿರ್ದೇಶನದಂತೆ ಪಾಲಿಕೆ ಅಧಿಕಾರಿಗಳು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, 2017ರ ಜ.7, 2018ರ ಜ.12 ಮತ್ತು 2019ರ ಜು.3ರಂದು ಇಂದಿರಾನಗರದ 100 ಅಡಿ ರಸ್ತೆಯಲ್ಲಿರುವ ಟಿಪ್ಲರ್ ಬಾರ್ ಆಂಡ್ ರೆಸ್ಟೋರೆಂಟ್ ದಿಢೀರ್ ಭೇಟಿ ನೀಡಿ ಶಬ್ದ ಮಾಲಿನ್ಯದ ಪ್ರಮಾಣವನ್ನು ಅಳತೆ ಮಾಡಲಾಯಿತು ಎಂದು ಹೇಳಿದ್ದಾರೆ.
ಶಬ್ದ ಮಾಲಿನ್ಯದೊಂದಿಗೆ ಬಾರ್ ಮಾಲೀಕರು ಕಟ್ಟಡ ಬೈಲಾಗಳ ಉಲ್ಲಂಘನೆಯನ್ನೂ ಮಾಡಿದ್ದಾರೆ. ಹಾಗಾಗಿ ಜು.6ರಂದೇ ಕೆಎಂಸಿ ಕಾಯಿದೆ ಸೆಕ್ಷನ್ 321(1) ಮತ್ತು (2) ಪ್ರಕಾರ ನೋಟಿಸ್ ನೀಡಲಾಗಿದೆ. ನಂತರ ಜು.12ಕ್ಕೆ ಬಾರ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಕೆಎಂಸಿ ಕಾಯಿದೆ ಅಡಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.