Advertisement

ಬಾಪೂ ಕನಸು ಈಡೇರಿಸಲು ಒಂದಾದ ದೇಶ

12:30 AM Oct 02, 2018 | |

ಬಹುತೇಕ ಭಾರತೀಯರಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗುವ ಸದವಕಾಶ ಸಿಕ್ಕಿಲ್ಲ. ಅಂದು ನಮಗೆ ದೇಶಕ್ಕಾಗಿ ಸಾಯುವ ಅವಕಾಶ ಸಿಗದಿದ್ದರೇನಂತೆ, ಇಂದು ದೇಶಕ್ಕಾಗಿ ಬದುಕುವ ಅವಕಾಶ ಸಿಕ್ಕಿದೆ. ಹೀಗಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕಲ್ಪನೆಯ ಭಾರತವನ್ನು ನಿರ್ಮಿಸಲು ಎಲ್ಲಾ ರೀತಿಯಿಂದಲೂ ಪ್ರಯತ್ನಿಸೋಣ. 

Advertisement

ಇಂದು ನಾವು ನಮ್ಮ ಪ್ರೀತಿಪಾತ್ರ ಬಾಪೂಜಿಯವರ 150ನೇ ಜನ್ಮವಾರ್ಷಿಕೋತ್ಸವದ ಹೊಸ್ತಿಲಲ್ಲಿದ್ದೇವೆ. ಸಮಾನತೆ, ಘನತೆ, ಸಕಲರ ಒಳಗೊಳ್ಳುವಿಕೆ ಮತ್ತು ಸಬಲೀಕರಣದ ಜೀವನವನ್ನು ಬಯಸುವ ಪ್ರಪಂಚದ ಲಕ್ಷಾಂತರ ಜನರಿಗೆ ಇಂದಿಗೂ ಗಾಂಧೀಜಿಯವರು ದಾರಿದೀಪವಾಗಿ ಉಳಿದಿದ್ದಾರೆ. ಮಾನವ ಸಮಾಜದ ಮೇಲಿನ ಗಾಂಧೀಜಿಯವರ ಪ್ರಭಾವಕ್ಕೆ ಸರಿಸಾಟಿಯಾದವರು ಕೆಲವೇ ಕೆಲವರಷ್ಟೆ. 

ಮಹಾತ್ಮಾ ಗಾಂಧಿಯವರು ತಮ್ಮ ಮಾತು ಮತ್ತು ಕೃತಿಯಿಂದ ಭಾರತವನ್ನು ಬೆಸೆದವರು. ಗಾಂಧೀಜಿಯವರ ಬಗ್ಗೆ ಸರ್ದಾರ್‌ ಪಟೇಲರು ಹೇಳಿದ್ದು ಹೀಗೆ- “”ಭಾರತ ವಿವಿಧತೆಯ ತವರಾಗಿದೆ. ನಮ್ಮಂಥ ವೈವಿಧ್ಯತೆ ಇರುವ ಭೂಮಿ ಮತ್ತೆಲ್ಲೂ ಇಲ್ಲ. ಇಂಥ ವೈವಿಧ್ಯಮಯ ಭಾರತೀಯರನ್ನೆಲ್ಲ ಯಾರಾದರೂ ಒಂದುಗೂಡಿಸಿದ್ದಾರೆ ಎಂದರೆ, ಜನರು ಪರಸ್ಪರರ ನಡುವಿನ ವ್ಯತ್ಯಾಸವನ್ನು ಬದಿಗೊತ್ತಿ ಬ್ರಿಟಿಷ್‌ ಆಳ್ವಿಕೆಯ ವಿರುದ್ಧ ಎದ್ದು ನಿಲ್ಲುವಂತೆ ಪ್ರೇರೇಪಿಸಿದ್ದಾರೆ ಎಂದರೆ, ವಿಶ್ವವೇದಿಕೆಯ ಮೇಲೆ ಭಾರತದ ಶ್ರೇಷ್ಟತೆಯನ್ನು ಹೆಚ್ಚಿಸಿದ ವ್ಯಕ್ತಿ ಯಾರಾದರೂ ಇದ್ದಾರೆಂದರೆ ಅದು ಮಹಾತ್ಮಾ ಗಾಂಧೀಜಿ. ಅವರು ಈ ಕೆಲಸವನ್ನು ಭಾರತದಿಂದಲ್ಲ, ಬದಲಾಗಿ ದಕ್ಷಿಣ ಆಫ್ರಿಕಾದಿಂದಲೇ ಆರಂಭಿಸಿದರು. ಬಾಪೂ ಅವರಿಗೆ ಭವಿಷ್ಯದ ಮುನ್ನೋಟವಿತ್ತು ಮತ್ತು ಬೃಹತ್‌ ಚಿತ್ರಣವನ್ನು ಅರ್ಥಮಾಡಿಕೊಳ್ಳುವ ಅರಿವಿತ್ತು. ಕೊನೆಯುಸಿರಿರುವವರೆಗೂ ತಮ್ಮ ತತ್ವಗಳಿಗೆ ಅವರು ಬದ್ಧರಾಗಿದ್ದರು”. ಬಾಪೂಜಿಯವರ ಬಗೆಗಿನ ಸರ್ದಾರ್‌ ಪಟೇಲರ ವ್ಯಾಖ್ಯಾನ ಸೂಕ್ತವಾಗಿದೆ.

ಮಹಾತ್ಮಾ ಗಾಂಧೀಜಿಯವರ ಆಲೋಚನೆಗಳು ಹೇಗೆ ಆ ಸಮಯಕ್ಕೆ ಅತ್ಯಗತ್ಯವಾಗಿದ್ದವೋ ಹಾಗೆಯೇ 21ನೇ ಶತಮಾನದಲ್ಲೂ ಕೂಡ ಜಗತ್ತು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಅವು ಅಗತ್ಯ. ಉಗ್ರವಾದ, ಮೂಲಭೂತವಾದ, ತೀವ್ರವಾದ ಮತ್ತು ಅರ್ಥಹೀನ ದ್ವೇಷಗಳಿಂದ ರಾಷ್ಟ್ರಗಳ‌ು ಮತ್ತು ಸಮಾಜಗಳು ವಿಭಜನೆಗೊಳ್ಳುತ್ತಿರುವ ಈ ಸಮಯದಲ್ಲಿ,  ಮಹಾತ್ಮಾ ಗಾಂಧಿಯವರ ಶಾಂತಿ ಮತ್ತು ಅಹಿಂಸೆಯ ತತ್ವಕ್ಕೆ ಮಾನವೀಯತೆಯನ್ನು ಒಗ್ಗೂಡಿಸುವ ಶಕ್ತಿಯಿದೆ. 

ಅಸಮಾನತೆಯೆನ್ನುವುದು ವಿರಳವೇನೂ ಅಲ್ಲದ ಈ ಸಮಯದಲ್ಲಿ ಬಾಪೂಜಿಯ “ಸರ್ವರನ್ನೂ ಒಳಗೊಂಡ’ ಬೆಳವಣಿಗೆಯ ಸೂತ್ರವು ಬಡತನದಂಚಿನಲ್ಲಿರುವ ಲಕ್ಷಾಂತರ ಜನರಿಗೆ ಸಮೃದ್ಧಿ ಒದಗಿಸಬಲ್ಲದು. 
ಇಂದು ಹವಾಮಾನ ಬದಲಾವಣೆ ಮತ್ತು ಪರಿಸರ ಮಾಲಿನ್ಯವೇ ನಮ್ಮ ಚರ್ಚೆಗಳ ಕೇಂದ್ರ ಬಿಂದುವಾಗಿವೆ. ಇಂಥ ಸಮಯದಲ್ಲಿ ಇಡೀ ಜಗತ್ತು ಗಾಂಧೀಜಿಯವರ ಆಲೋಚನೆಗಳನ್ನು ಅವಗಾಹಿಸಬೇಕು. ಒಂದು ಶತಮಾನಕ್ಕೂ ಹಿಂದೆಯೇ, ಅಂದರೆ 1909ರಲ್ಲೇ ಗಾಂಧೀಜಿ “ಮನುಷ್ಯನ ಅವಶ್ಯಕತೆ’ ಮತ್ತು “ಮನುಷ್ಯನ ದುರಾಸೆಯ’ ನಡುವಿನ ವ್ಯತ್ಯಾಸವನ್ನು ಗುರುತಿಸಿದ್ದರು. ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುವಾಗ ನಮ್ಮಲ್ಲಿ ನಿಯಂತ್ರಣ ಮತ್ತು ಪರಿಸರದೆಡೆಗೆ ಸಹಾನುಭೂತಿಯಿರಬೇಕೆಂದು ಅವರು ಹೇಳಿದ್ದರು. ನುಡಿದಂತೆಯೇ ಅವರು ನಡೆದು ತೋರಿಸಿದರೂ ಕೂಡ. ತಮ್ಮ ಶೌಚಾಲಯವನ್ನು ತಾವೇ ಸ್ವತ್ಛಗೊಳಿಸಿದರು, ಸುತ್ತಲಿನ ಪರಿಸರ ಶುಭ್ರವಾಗಿರುವಂತೆ ಸದಾ ನೋಡಿಕೊಂಡರು. 

Advertisement

ಅಲ್ಲದೇ ನೀರಿನ ಮಿತಬಳಕೆಯನ್ನು ಸದಾ ಪಾಲಿಸುತ್ತಿದ್ದರು  ಮತ್ತು ಪ್ರೋತ್ಸಾಹಿಸುತ್ತಿದ್ದರು ಗಾಂಧೀಜಿ. ಅವರು ಅಹಮದಾಬಾದ್‌ನಲ್ಲಿದ್ದಾಗ ಅಶುದ್ಧ ನೀರು ಸಾಬರಮತಿಯೊಂದಿಗೆ ಬೆರೆಯದಂತೆ ಬಹಳ ಮುತುವರ್ಜಿಯಿಂದ ನೋಡಿಕೊಂಡರು. ಗಾಂಧೀಜಿಯವರು ಬರೆದ ಸಂಕ್ಷಿಪ್ತ ಮತ್ತು ಸಮಗ್ರ ದಾಖಲೆಯೊಂದು ಕೆಲ ದಿನಗಳ ಹಿಂದೆ ನನ್ನ ಗಮನಕ್ಕೆ ಬಂದಿತು. 1941ರಲ್ಲಿ ಬಾಪೂ “ಕನ್‌ಸ್ಟ್ರಕ್ಟಿವ್‌ ಪ್ರೋಗ್ರಾಮ್‌: ಇಟ್ಸ್‌ ಮೀನಿಂಗ್‌ ಆ್ಯಂಡ್‌ ಪ್ಲೇಸ್‌’ ಎನ್ನುವ ಡಾಕ್ಯುಮೆಂಟ್‌ ಅನ್ನು ಬರೆದಿದ್ದರು. ಮುಂದೆ ಅಂದರೆ, 1945ರಲ್ಲಿ ದೇಶದಲ್ಲೆಲ್ಲ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಹೊಸ ಉತ್ಸಾಹ ಮೂಡಿದ್ದ ಸಮಯದಲ್ಲಿ ಈ ದಾಖಲೆಯಲ್ಲಿ ಅವರು ಕೆಲವು ಬದಲಾವಣೆಗಳನ್ನು ಮಾಡಿದ್ದರು. ಈ ಡಾಕ್ಯುಮೆಂಟ್‌ನಲ್ಲಿ ಗಾಂಧೀಜಿ ಗ್ರಾಮೀಣಾಭಿವೃದ್ಧಿಯಿಂದ ಹಿಡಿದು, ಕೃಷಿ ಕ್ಷೇತ್ರದ ಬೆಳವಣಿಗೆ, ನೈರ್ಮಲ್ಯದ ಮಹತ್ವ, ಖಾದಿಗೆ ಪ್ರೋತ್ಸಾಹ, ಮಹಿಳಾ ಸಬಲೀಕರಣ, ಆರ್ಥಿಕ ಸಮಾನತೆ ಸೇರಿದಂತೆ ಇನ್ನೂ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. 

ಗಾಂಧೀಜಿ ಬರೆದ “Constructive programme’ ಓದಬೇಕೆಂದು ನಾನು ಸಹ ಭಾರತೀಯರಿಗೆ ಕೇಳಿಕೊಳ್ಳುತ್ತೇನೆ(ಇದು ಆನ್‌ಲೈನ್‌ನಲ್ಲಿ ಮತ್ತು ಹೊರಗೂ ಲಭ್ಯವಿದೆ). ಬಾಪೂಜಿಯ ಕನಸಿನ ಭಾರತವನ್ನು ನಿರ್ಮಿಸಲು ಕನ್ಸ್‌ಟ್ರಕ್ಟಿವ್‌ ಪ್ರೋಗ್ರಾಮ್‌ ಬರಹವನ್ನು ನಾವು ದಾರಿದೀಪವನ್ನಾಗಿ ಬಳಸೋಣ. ಇದರಲ್ಲಿನ ಅನೇಕ ವಸ್ತುವಿಷಯಗಳು ಇಂದಿಗೂ ಪ್ರಸ್ತುತವಾಗಿವೆ. ಪೂಜ್ಯ ಗಾಂಧೀಜಿಯವರು ಏಳು ದಶಕಗಳ ಹಿಂದೆ ಚರ್ಚಿಸಿದ ಅನೇಕ ಆಶಯಗಳನ್ನು ಅನುಷ್ಠಾನಕ್ಕೆ ತರುತ್ತಿ¤ದೆ ಕೇಂದ್ರ ಸರ್ಕಾರ. 

ಗಾಂಧೀಜಿಯವರ ವ್ಯಕ್ತಿತ್ವದ ಒಂದು ಸುಂದರ ಅಂಶವೆಂದರೆ, ಅವರು ಪ್ರತಿಯೊಬ್ಬ ಭಾರತೀಯನಿಗೂ ತಾನು ದೇಶದ ಸ್ವಾತಂತ್ರ್ಯಕ್ಕಾಗಿ ದುಡಿಯುತ್ತಿದ್ದೇನೆ ಎಂಭ ಭಾವನೆಯನ್ನು ಹುಟ್ಟುಹಾಕಿದ್ದು. ವಕೀಲರು, ಶಿಕ್ಷಕರು, ವೈದ್ಯರು, ರೈತರು, ಕೂಲಿಕಾರ್ಮಿಕರು, ಉದ್ಯಮಿಗಳು…ಯಾರು ಯಾವ ಕ್ಷೇತ್ರದಲ್ಲೇ ಇದ್ದರೂ ಅವರಿಗೆ ತಾವು ಭಾರತಕ್ಕಾಗಿ ದುಡಿಯುತ್ತಿದ್ದೇವೆ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲುದಾರರಾಗುತ್ತಿದ್ದೇವೆ ಎನ್ನುವ ಭಾವನೆ ಬಿತ್ತಿದರು ಬಾಪೂಜಿ. 

ಗಾಂಧೀಜಿಯವರ ಇಚ್ಛೆಯನ್ನು ಸಾಕಾರಗೊಳಿಸಬಲ್ಲ ಅವೇ ಅಂಶಗಳನ್ನು ನಾವೂ ಈಗ ಅಳವಡಿಸಿಕೊಳ್ಳೋಣ. ಅವು ಅತ್ಯಂತ ಸರಳ ಸಂಗತಿಯಾಗಿದ್ದರೂ ಪರವಾಗಿಲ್ಲ. ಉದಾಹರಣೆಗೆ, “ಆಹಾರವನ್ನು ಪೋಲು ಮಾಡುವುದಿಲ್ಲ’ ಎನ್ನುವುದರಿಂದ ಹಿಡಿದು “ಅಹಿಂಸೆ ಮತ್ತು ಏಕತೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತೇವೆ’ ಎನ್ನುವುದರವರೆಗೂ ಇರಬಹುದು. 

ಹೇಗೆ ನಮ್ಮ ಈಗಿನ ಕೆಲಸಗಳು ಮುಂದಿನ ತಲೆಮಾರಿಗೆ ಶುಭ್ರ ಮತ್ತು ಹಸಿರು ವಾತಾವರಣವನ್ನು  ಬಿಟ್ಟುಹೋಗುವುದಕ್ಕೆ ಸಹಾಯಕವಾಗಬಲ್ಲವು ಎನ್ನುವುದರ ಬಗ್ಗೆ ಯೋಚಿಸೋಣ. ಸುಮಾರು ಎಂಟು ದಶಕಗಳ ಹಿಂದೆ, ಅಂದರೆ, ಮಾಲಿನ್ಯದ ಅಪಾಯಗಳು ಈಗಿನಷ್ಟು ಇರದ ಸಮಯದಲ್ಲಿ ಮಹಾತ್ಮಾ ಗಾಂಧಿ ಸೈಕಲ್‌ ಅನ್ನು ಆಯ್ಕೆ ಮಾಡಿಕೊಂಡರು. ಅಂದು ಗಾಂಧೀಜಿ ಗುಜರಾತ್‌ನ ವಿದ್ಯಾಪೀಠದಿಂದ ಸಾಬರಮತಿ ಆಶ್ರಮದವರೆಗೆ ಸೈಕಲ್‌ನಲ್ಲೇ ತೆರಳುತ್ತಿದ್ದರು ಎಂದು ನೋಡಿದವರು ಹೇಳುತ್ತಾರೆ. ಸತ್ಯವೇನೆಂದರೆ, ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ ಮೊದಲ ಪ್ರತಿಭಟನೆಯೂ ಸೈಕ್ಲಿಂಗ್‌ಗೆ ಸಂಬಂಧಿಸಿದ್ದೇ ಆಗಿತ್ತು. ಆಗ ಅಲ್ಲಿನ ಕೆಲವು ಕಾನೂನುಗಳು ಒಂದು ವರ್ಗದ ಜನರಿಗೆ ಸೈಕಲ್‌ ನಡೆಸಲು ಅನುಮತಿಸುತ್ತಿರಲಿಲ್ಲ. ಈ ಕಾನೂನುಗಳ ವಿರುದ್ಧ ಗಾಂಧೀಜಿ ಹೋರಾಡಿದ್ದರು. ತಮ್ಮ ಕಾನೂನು ವೃತ್ತಿ ಸಮೃದ್ಧವಾಗಿತ್ತಾದರೂ ಗಾಂಧೀಜಿ ಜೋಹಾನ್ನೆಸ್‌ಬರ್ಗ್‌ಗೆ ಬೈಸಿಕಲ್‌ನಲ್ಲೇ ತೆರಳುತ್ತಿದ್ದರು ಎಂದು ನಾನು ಓದಿದ್ದೇನೆ. ಒಮ್ಮೆ ಜೋಹಾನ್ನೆಸ್‌ಬರ್ಗ್‌ಗೆ ಪ್ಲೇಗ್‌ ಆವರಿಸಿದಾಗ ಗಾಂಧೀಜಿ ಈ ರೋಗ ವ್ಯಾಪಕವಾಗಿ ಹರಡಿದ್ದ ಪ್ರದೇಶಕ್ಕೆ ಬೈಸಿಕಲ್‌ನಲ್ಲೇ ವೇಗವಾಗಿ ತೆರಳಿ, ಸಹಾಯ ಕಾರ್ಯದಲ್ಲಿ ತೊಡಗಿಸಿಕೊಂಡರಂತೆ. ನಾವಿಂದು ಗಾಂಧೀಜಿ ತೋರಿಸಿಕೊಟ್ಟ ಈ ಮಾರ್ಗದಲ್ಲೇ ನಡೆಯೋಣವೇ? 

ಇದು ಹಬ್ಬದ ಸಮಯವಾಗಿದ್ದು ಭಾರತದಾದ್ಯಂತ ಜನರು ಹೊಸ ಬಟ್ಟೆ, ಗಿಫ್ಟ್ಗಳು, ಖಾದ್ಯಗಳು ಮತ್ತು ಇತರೆ ವಸ್ತುಗಳ ಶಾಪಿಂಗ್‌ ನಡೆಸುತ್ತಿದ್ದಾರೆ. ಹೀಗೆ ಮಾಡುವಾಗ ಗಾಂಧಿಯವರ ಮಾತನ್ನು ನೆನಪು ಮಾಡಿಕೊಳ್ಳಿ. ಹೇಗೆ ನಮ್ಮ ಕಾರ್ಯಗಳು ಸಹಭಾರತೀಯರ ಬದುಕಿನಲ್ಲಿ ಬೆಳಕು ತರಬಲ್ಲದೋ ಯೋಚಿಸಿ. ಅದು ಖಾದಿ ಉತ್ಪನ್ನವೇ ಆಗಿರಲಿ, ಗಿಫ್ಟ್ ಐಟಂ ಆಗಿರಲಿ ಅಥವಾ ಆಹಾರ ಪದಾರ್ಥವಾಗಿರಲಿ. ಅವುಗಳ ಖರೀದಿಯ ಮೂಲಕ ನಾವು ನಮ್ಮ ಸಹನಾಗರಿಕರಿಗೆ ಉತ್ತಮ ಜೀವನ ನಡೆಸಲು ಸಹಾಯ ಮಾಡುತ್ತಿದ್ದೇವೆ. ನಾವು ಅವರನ್ನು ಜೀವನದಲ್ಲಿ ಎಂದಿಗೂ ನೋಡದೆಯೇ ಇರಬಹುದು, ಆದರೆ ನಾವು ನಮ್ಮ ಕಾರ್ಯಗಳ ಮೂಲಕ ಭಾರತೀಯರಿಗೆ ಸಹಾಯ ಮಾಡುತ್ತಿರುವುದನ್ನು ನೋಡಿ ಬಾಪೂಜಿಯವರು ನಮ್ಮ ಬಗ್ಗೆ ಗರ್ವ ಪಡುತ್ತಾರೆ. 

ಕಳೆದ ನಾಲ್ಕು ವರ್ಷಗಳಲ್ಲಿ 130 ಕೋಟಿ ಭಾರತೀಯರು ಸ್ವಚ್ಛ ಭಾರತ ಅಭಿಯಾನದ ಮೂಲಕ ಮಹಾತ್ಮಾ ಗಾಂಧಿಯವರಿಗೆ ನಮನ ಸಲ್ಲಿಸಿದ್ದಾರೆ. ಪ್ರತಿಯೊಬ್ಬ ಭಾರತೀಯನ ಕಠಿಣ ಪರಿಶ್ರಮದಿಂದಾಗಿ ನಾಲ್ಕು ವರ್ಷ ಪೂರೈಸಿರುವ ಸ್ವತ್ಛ ಭಾರತ ಅಭಿಯಾನವು ಈಗ ಚಲನಶೀಲ ಸಾಮೂಹಿಕ ಚಳವಳಿಯಾಗಿ ಬದಲಾಗಿದೆ ಮತ್ತು ಶ್ಲಾಘನೀಯ ಫ‌ಲಿತಾಂಶವನ್ನು ತೋರಿಸುತ್ತಿದೆ. ಇದೇ ಮೊದಲ ಬಾರಿಗೆ ದೇಶದಲ್ಲಿ 85 ದಶಲಕ್ಷಕ್ಕಿಂತಲೂ ಹೆಚ್ಚು ಮನೆಗಳಿಗೆ ಶೌಚಾಲಯ ಸೌಲಭ್ಯ ದೊರಕಿದೆ. 400 ದಶಲಕ್ಷ ಭಾರತೀಯರಿಗೆ ಈಗ ಬಯಲು ಬಹಿರ್ದೆಸೆಗೆ ಹೋಗುವ ಅನಿವಾರ್ಯತೆ ಇಲ್ಲ. ಕೇವಲ ನಾಲ್ಕು ವರ್ಷಗಳ ಈ ಚಿಕ್ಕ ಅವಧಿಯಲ್ಲಿ ನೈರ್ಮಲ್ಯದ ವ್ಯಾಪ್ತಿ 39 ಪ್ರತಿಶತದಿಂದ 95 ಪ್ರತಿಶತಕ್ಕೇರಿದೆ. 21 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು 4.5 ಲಕ್ಷ ಗ್ರಾಮಗಳೀಗ ಬಯಲು ಬಹಿರ್ದೆಸೆ ಮುಕ್ತವಾಗಿವೆ. 

ಸ್ವತ್ಛ ಭಾರತ ಮಿಷನ್‌ ದೇಶದ ಉತ್ತಮ ಭವಿಷ್ಯ ಮತ್ತು ದೇಶವಾಸಿಗಳ ಘನತೆಗೆ ಸಂಬಂಧಪಟ್ಟ ಯೋಜನೆ. ನೈರ್ಮಲ್ಯದ ಕೊರತೆಯಿಂದ ಅನೇಕ ರೋಗಗಳ ಅಪಾಯ ಎದುರಿಸುತ್ತಿದ್ದ ಮಕ್ಕಳು ಮತ್ತು ಪ್ರತಿ ಮುಂಜಾವೂ ಮುಖ ಮುಚ್ಚಿಕೊಂಡು ಬಯಲು ಬಹಿರ್ದೆಸೆಗೆ ಹೋಗುವ ತೊಂದರೆ ಎದುರಿಸುತ್ತಿದ್ದ ಕೋಟ್ಯಂತರ ಹೆಣ್ಣುಮಕ್ಕಳಿಗೆ ಶುಭಶಕುನವಾಗಿದೆ ಈ ಯೋಜನೆ. 

ಕೆಲವು ದಿನಗಳ ಹಿಂದೆ ನನ್ನ “ಮನ್‌ ಕೀ ಬಾತ್‌’ ಕಾರ್ಯಕ್ರಮಕ್ಕೆ ರಾಜಸ್ಥಾನದ ದಿವ್ಯಾಂಗ ಸಹೋದರನೊಬ್ಬ ಕರೆ ಮಾಡಿದ. ಆ ಸಹೋದರನಿಗೆ ಎರಡೂ ಕಣ್ಣಿನ ದೃಷ್ಟಿಯೂ ಹಾಳಾಗಿದೆ. ಆತ ಮಾತನಾಡುತ್ತಾ, ಈಗ ತನ್ನದೇ ಶೌಚಾಲಯವಿರುವುದರಿಂದ ಹೇಗೆ ಜೀವನದಲ್ಲಿ ಗುಣಾತ್ಮಕ ಬದಲಾವಣೆಗಳು ಎದುರಾಗಿವೆ ಎನ್ನುವುದನ್ನು ಆತ ನನ್ನೊಂದಿಗೆ ಹಂಚಿಕೊಂಡ. ಇದೇ ರೀತಿಯೇ ಬಯಲು ಬಹಿರ್ದೆಸೆ ಪ್ರದೇಶಗಳಿಗೆ ಹೋಗಬೇಕಾದ ಅಸೌಖ್ಯ ಎದುರಿಸುತ್ತಿದ್ದ ಅನೇಕ ದಿವ್ಯಾಂಗ ಸಹೋದರಿಯರು ಮತ್ತು ಸಹೋದರರು ಇಂದು ಆ ಕಷ್ಟದಿಂದ ಮುಕ್ತರಾಗಿದ್ದಾರೆ. ಆ ಸಹೋದರನ ಹಾರೈಕೆ ಸದಾ ನನ್ನ ನೆನಪುಗಳಲ್ಲಿ ಅಚ್ಚಳಿಯದೇ ಉಳಿಯಲಿದೆ 

ಬಹುತೇಕ ಭಾರತೀಯರಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗುವ ಸದವಕಾಶ ಸಿಕ್ಕಿಲ್ಲ. ಅಂದು ನಮಗೆ ದೇಶಕ್ಕಾಗಿ ಸಾಯುವ ಅವಕಾಶ ಸಿಗದಿದ್ದರೇನಂತೆ, ಇಂದು ದೇಶಕ್ಕಾಗಿ ಬದುಕುವ ಅವಕಾಶ ಸಿಕ್ಕಿದೆ. ಹೀಗಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕಲ್ಪನೆಯ ಭಾರತವನ್ನು ನಿರ್ಮಿಸಲು ಎಲ್ಲಾ ರೀತಿಯಿಂದಲೂ ಪ್ರಯತ್ನಿಸೋಣ. ಗಾಂಧೀಜಿಯವರ ಕನಸನ್ನು ಸಾಕಾರಗೊಳಿಸಲು ನಮ್ಮ ಮುಂದೆ ಇಂದು ಅದ್ಭುತ ಅವಕಾಶವಿದೆ. ಈ ನಿಟ್ಟಿನಲ್ಲಿ ನಾವು ಗಣನೀಯವಾಗಿ ಮುಂದೆ ಸಾಗಿದ್ದೇವೆ ಮತ್ತು ಮುಂಬರುವ ದಿನಗಳಲ್ಲಿ ಇನ್ನಷ್ಟು ಮುಂದೆ ಸಾಗುತ್ತೇವೆ ಎನ್ನುವ ಭರವಸೆ ನನಗಿದೆ.

“ವೈಷ್ಣವ ಜನ ತೋ ತೇನೇ ಕಹಿಯೇ ಜೇ, ಪೀರ ಪರಾಯಿ ಜಾನೇ ರೇ’ ಎನ್ನುವುದು ಮಹಾತ್ಮಾ ಗಾಂಧೀಜಿಯವರ ಅಚ್ಚುಮೆಚ್ಚಿನ ಸ್ತುತಿಯಾಗಿತ್ತು. “ಇತರರ ನೋವನ್ನು ಅರ್ಥಮಾಡಿಕೊಳ್ಳುವವನೇ ಒಳ್ಳೆಯ ವ್ಯಕ್ತಿ’ ಎನ್ನುವುದು ಇದರ ಅರ್ಥ. ಇಂಥ ಚೈತನ್ಯವೇ ಅವರನ್ನು ಇತರರ ಸೇವೆಗಾಗಿ ಬದುಕಲು ಪ್ರೇರೇಪಿಸಿತು. ದೇಶಕ್ಕಾಗಿ ಯಾವ ಗಾಂಧೀಜಿ ತಮ್ಮ ಪ್ರಾಣವನ್ನೇ ಸಮರ್ಪಿಸಿದರೋ ಆ ಮಹಾತ್ಮನ ಕನಸನ್ನು ಸಾಕಾರಗೊಳಿಸಲು ನಾವು 130 ಕೋಟಿ ಭಾರತೀಯರೂ ಬದ್ಧರಾಗೋಣ…

ನರೇಂದ್ರ ಮೋದಿ, ಪ್ರಧಾನಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next