Advertisement

ಬಪ್ಪನಾಡು ಮೊಗವೀರ ಸಭಾ ಮುಂಬಯಿ ಶಾಖೆಯ ವಾರ್ಷಿಕ ಮಹಾಸಭೆ

05:27 PM Mar 21, 2017 | Team Udayavani |

ಮುಂಬಯಿ: ಜನತಾ ಸೇವೆಯೇ ಜನಾರ್ಧನ ಸೇವೆ ಎಂದು ನಮ್ಮ ಹಿರಿಯರು ಸಮಾಜ ಸೇವೆಯನ್ನು ನಿಸ್ವಾರ್ಥ  ಸಲ್ಲಿಸಿದ್ದಾರೆ. ಆದ್ದರಿಂದ ಇಂದಿನ ಯುವ ಜನಾಂಗ ಮುಂದೆ ಬಂದು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಬೇಕು. ತಾಯ್ನಾಡಿನಲ್ಲಿ ಸಮಾಜ ಬಾಂಧವರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸಬೇಕು ಎಂದು ಬಪ್ಪನಾಡು ಮೊಗವೀರ ಸಭಾ ಮುಂಬಯಿ ಇದರ ಅಧ್ಯಕ್ಷ ಶ್ರೀನಿವಾಸ ಸುವರ್ಣ ನುಡಿದರು.

Advertisement

ಬಪ್ಪನಾಡು ಮೊಗವೀರ ಸಭಾ ಮುಂಬಯಿ ಶಾಖೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಅಂಧೇರಿಯ ಮೊಗವೀರ ಭವನದಲ್ಲಿ ನಡೆದಿದ್ದು, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ಹೊರನಾಡಿನಲ್ಲಿದ್ದರೂ ಕೂಡಾ ನಮ್ಮ ಭಾಷೆ, ನಮ್ಮ ಸಂಸ್ಕಾರ, ಪರಂಪರೆಗಳನ್ನು ಮುಂದುವರಿಸುವ ಮೂಲಕ ಸಮಾಜೋದ್ಧಾರ ಕಾರ್ಯಕ್ರಮಗಳನ್ನು ಮಾಡಬೇಕು. ಯುವಪೀಳಿಗೆ ಸಂಸ್ಥೆಯ ಕಾರ್ಯಕ್ರಮಗಳಿಗೆ ಕೈಜೋಡಿಸಬೇಕು ಎಂದು ಕರೆನೀಡಿದರು.

ಪ್ರಧಾನ ಕಾರ್ಯದರ್ಶಿ ನಾರಾಯಣ ತಿಂಗಳಾಯ ಗತ ಸಭೆಯ ಟಿಪ್ಪಣಿ ಹಾಗೂ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಲಾಯಿತು. ಮೊಗವೀರ ವ್ಯವಸ್ಥಾಪಕ ಮಂಡಳಿಯ ಉಪಾಧ್ಯಕ್ಷರಾಗಿ ನೇಮಕಗೊಂಡ ಶ್ರೀನಿವಾಸ ಸುವರ್ಣ, ಮೊಗವೀರ ವ್ಯವಸ್ಥಾಪಕ ಮಂಡಳಿಯ ಗೌರವ ಕೋಶಾಧಿಕಾರಿಯಾಗಿ ನೇಮಕಗೊಂಡ ದಿಲೀಪ್‌ ಕುಮಾರ್‌ ಮುಲ್ಕಿ, ಮಂಡಳಿಯ ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿ ನೇಮಕಗೊಂಡ ಪ್ರೀತಿ ಹರೀಶ್‌ ಶ್ರೀಯಾನ್‌ ಅವರನ್ನು ಶಾಲು ಹೊದೆಸಿ, ಪುಷ್ಪಗುಚ್ಚವನ್ನಿತ್ತು ಅಭಿನಂದಿಸಿ ಗೌರವಿಸಲಾಯಿತು.

ಭರತನಾಟ್ಯ ಕಲಾವಿದೆ ಕು| ಮಾನ್ಯಾ ಮಹೇಶ್‌ ಪುತ್ರನ್‌ ಹಾಗೂ ಬಪ್ಪನಾಡು ಸಭಾದ ಸದಸ್ಯ ಬಾಂಧವರ ಎಸ್‌ಎಸ್‌ಸಿ, ಎಚ್‌ಎಸ್‌ಸಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ನಗದು ಬಹುಮಾನವನ್ನಿತ್ತು ಗೌರವಿಸಲಾಯಿತು. ಇತ್ತೀಚೆಗೆ ಧಾರ್ಮಿಕ ಯಾತ್ರೆಗೈದ ಮುಂಬಯಿ ಶಾಖೆಯ ಸದಸ್ಯರನ್ನು ಅಭಿನಂದಿಸಿ ಗೌರವಿಸಲಾಯಿತು.

ಗೌರವ ಪ್ರಧಾನ ಕಾರ್ಯದರ್ಶಿ ನಾರಾಯಣ ತಿಂಗಳಾಯ ಅವರು ಮಾತನಾಡಿ, ವರದಿ ವರ್ಷದಲ್ಲಿ ನಮ್ಮ ಪ್ರಧಾನ ಸಭೆ ಮತ್ತು ಮುಂಬಯಿ ಶಾಖೆಯವರು ಮಾಡಿರುವ ಸಮಾಜಪರ ಕಾರ್ಯಕ್ರಮಗಳನ್ನು ವಿವರಿಸಿದರು. ಮೇ 1 ರಂದು ಬಪ್ಪನಾಡು ಹೆಜಮಾಡಿ ಕೋಡಿಯ ನಾಗಬ್ರಹ್ಮ ಸನ್ನಿಧಿಯಲ್ಲಿ ಜರಗಲಿರುವ ಆಶ್ಲೇಷ ಬಲಿ, ನಾಗ ತನು, ವಿಠೊಭಾ ಭಜನಾ ಮಂದಿರದಲ್ಲಿ ಆಹೋರಾತ್ರಿ ಭಜನ ಕಾರ್ಯಕ್ರಮ, ಸಾಮೂಹಿಕ ಸತ್ಯನಾರಾಯಣ ಮಹಾಪೂಜೆ, ಅನ್ನಸಂತರ್ಪಣೆ ಇತ್ಯಾದಿಗಳಿಗೆ ಎಲ್ಲರ ಸಹಕರಾ ಅಗತ್ಯವಾಗಿದೆ ಎಂದರು. ಸಭೆಯಲ್ಲಿ ದಿನೇಶ್‌ ಇಡ್ಯಾ ಅವರನ್ನು ನೂತನ ಕೋಶಾಧಿಕಾರಿಯನ್ನಾಗಿ ನೇಮಿಸಲಾಯಿತು. ಆರಿಸಲಾಯಿತು.

Advertisement

ಊರಿನಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಕ್ಕೆ   ನವೀನ್‌ ತಿಂಗಳಾಯ ಮತ್ತು ಸುಧಾಕರ ಪುತ್ರನ್‌ ಅವರು ನೀಡಿರುವ ಪ್ರಾಯೋಜಕತ್ವವನ್ನು ಘೋಷಿಸಲಾಯಿತು. ದಿಲೀಪ್‌ ಕುಮಾರ್‌ ಮುಲ್ಕಿ ಮತ್ತು ಆರ್‌. ಎಸ್‌. ಕೋಟ್ಯಾನ್‌ ಅವರು ಮಾತನಾಡಿ ಶುಭಹಾರೈಸಿದರು. ಗೌರವ ಕಾರ್ಯದರ್ಶಿ ನಾರಾಯಣ ತಿಂಗಳಾಯ ವಂದಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next