ಬಂಟ್ವಾಳ: ಯಕ್ಷಕಲಾ ಪೊಳಲಿಯ 29ನೇ ವರ್ಧಂತ್ಯುತ್ಸವದ ಅಂಗವಾಗಿ ಶನಿವಾರ ಸಂಜೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ವಿದ್ವಾಂಸ ಡಾ| ಎಂ.ಪ್ರಭಾಕರ ಜೋಶಿಯವರಿಗೆ ಪೊಳಲಿ ಯಕ್ಷೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹಾಗೂ ಹಿರಿಯ ಧಾರ್ಮಿಕ ಮುಂದಾಳು ವೆ| ಮೂ| ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯ ಅವರು ಆಶೀರ್ವಚನ ನೀಡಿದರು. ಪೊಳಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ| ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ವಿದ್ವಾಂಸ ಕದ್ರಿ ನವನೀತ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಪೊಳಲಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಭಟ್ ಪೊಳಲಿ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ, ಶುಭ ಸಮೂಹ ಸಂಸ್ಥೆಗಳ ಮುಖ್ಯಸ್ಥ ಭುವನೇಶ್ ಪಚ್ಚಿನಡ್ಕ, ಕರ್ನಿರೆ ಪ್ರತಿಷ್ಠಾನದ ಮುಖ್ಯಸ್ಥ ಪ್ರಭಾಕರ ಡಿ.ಸುವರ್ಣ ಭಾಗವಹಿಸಿದ್ದರು.
ಹಿರಿಯ ಕಲಾವಿದರಾದ ಶಂಭು ಶರ್ಮ ವಿಟ್ಲ, ಕೆ.ಎಚ್. ದಾಸಪ್ಪ ರೈ, ಶ್ರೀಧರ ಐತಾಳ್ ಪಣಂಬೂರು, ಹಳುವಳ್ಳಿ ಗಣೇಶ್ ಭಟ್, ಗುರುಪ್ರಸಾದ್ ಬೊಳಿಂಜಡ್ಕ, ಸುರೇಂದ್ರ ಮಲ್ಲಿ ಗುರುಪುರ, ಸದಾಶಿವ ಕುಲಾಲ್ ವೇಣೂರು, ದಿನೇಶ್ ಶೆಟ್ಟಿ ಕಾವಳಕಟ್ಟೆ, ಮಾಧವ ಬಂಗೇರ ಕೊಳತ್ತಮಜಲು, ರವಿರಾಜ ಭಟ್ ಪನೆಯಾಲ, ವಳಕುಂಜ ರವಿಶಂಕರ್ ಭಟ್ ಅವರನ್ನು ಸಮ್ಮಾನಿಸಲಾಯಿತು.
ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ಹಾಗೂ ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್ ಕೆರೆಕಾಡು ಅವರಿಗೆ ಗೌರವಾರ್ಪಣೆ ನೀಡಲಾಯಿತು. ಯುವ ಪ್ರತಿಭೆಗಳಾದ ಭೂಷಣ್ ಪೂಜಾರಿ ಕಲ್ಕುಟ ಹಾಗೂ ಮಾನ್ಯ ಪೊಳಲಿ ಅವರನ್ನು ಅಭಿನಂದಿಸಲಾಯಿತು. ಸಂಚಾಲಕ ವೆಂಕಟೇಶ್ ನಾವಡ ಸ್ವಾಗತಿಸಿದರು. ಸಂಘಟಕ ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರ್ವಹಿಸಿದರು.