ಬಂಟ್ವಾಳ : ಸಾಮಾನ್ಯವಾಗಿ ಹಳ್ಳಿಗಳಲ್ಲಿ ಪಶುಸಂಗೋಪನೆ ಎಂಬುದು ರೈತರ ವೃತ್ತಿ. ಬೇಸಾಯ ಇನ್ನೊಂದು ಭಾಗ. ನಾನೂ ರೈತನಾಗಿದ್ದು, ಪಶುಗಳ ಅಗತ್ಯ ಮತ್ತು ಕಷ್ಟ ನನಗೆ ಗೊತ್ತಿದೆ. ಬೆಂಜನಪದವು ನೂತನ ಪಶು ಚಿಕಿತ್ಸಾಲಯ ಕಟ್ಟಡ 2015 – 16ರಲ್ಲಿ ಮಂಜೂರಾತಿ ಪಡೆದಿತ್ತು. ಗುಡ್ಡ ದೇಶದಲ್ಲಿರುವ ಈ ಕೇಂದ್ರ ಜನರಿಗೆ ದೂರವಾದರೂ ಹೆಚ್ಚು ಅನುಕೂಲಕರವಾಗಲಿದೆ ಎಂದು ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಹೇಳಿದರು.
ಫೆ. 23ರಂದು ಆರೈಡಿಎಫ್ 21 ಯೋಜನೆಯಡಿ ಬೆಂಜನಪದವಿನಲ್ಲಿ ನಿರ್ಮಿಸಲಾದ ನೂತನ ಪಶು ಚಿಕಿತ್ಸಾಲಯ ಕಟ್ಟಡವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ದ.ಕ. ಜಿ.ಪಂ. ಮಂಗಳೂರು, ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಬಂಟ್ವಾಳ ಹಾಗೂ ದ.ಕ. ನಿರ್ಮಿತಿ ಕೇಂದ್ರ ಸುರತ್ಕಲ್ ಆಶ್ರಯದಲ್ಲಿ ಕಟ್ಟಡ ನಿರ್ಮಿಸಲಾಗಿತ್ತು. ಪಶು ಸಂಗೋಪನ ಇಲಾಖೆ ಉಪ ನಿರ್ದೇಶಕ ಡಾ| ಎಸ್. ಮೋಹನ್ ಮಾತನಾಡಿ, ಇದು ಹೆಚ್ಚು ರೈತರು ಇರುವ ಪ್ರದೇಶ. ಹಾಗಾಗಿ ಪಶು ಸಂಗೋಪನೆಗೆ ಪಶು ವೈದ್ಯಕೀಯ ಆಸ್ಪತ್ರೆಗಳು ಅತಿ ಅವಶ್ಯ. ಅತ್ಯುತ್ತಮ ಸೌಕರ್ಯಗಳಿದ್ದರೆ ವೈದ್ಯರಿಂದ ಉತ್ತಮ ಸೇವೆ ನೀಡಲು ಸಾಧ್ಯವಿದೆ ಎಂದು ತಿಳಿಸಿದರು.
ಎಚ್.ಆರ್. ಲಾಸ್ರದೋ ಸ್ವಾಗತಿಸಿ, ಯೋಜನ ನಿರ್ದೇಶಕ ರಾಜೇಂದ್ರ ಕಲಾವಿ, ಅಮ್ಮುಂಜೆ ಪಂ. ಉಪಾಧ್ಯಕ್ಷ ವಾಮನ ಆಚಾರ್ಯ, ಚಂದ್ರಶೇಖರ ಭಂಡಾರಿ, ಉಮೇಶ್ ಶೆಟ್ಟಿ, ಕಾರ್ತಿಕ್ ಬಲ್ಲಾಳ್ ಉಪಸ್ಥಿತರಿದ್ದರು.
ಬಹುಕಾಲದ ಬೇಡಿಕೆ
ಅಮ್ಮುಂಜೆ ಪಂ. ಅಧ್ಯಕ್ಷೆ ಪ್ರೇಮಲತಾ ಎಲ್. ಪೂಜಾರಿ ಮಾತನಾಡಿ, ಇದು ನಮ್ಮ ಬಹುಕಾಲದ ಬೇಡಿಕೆಯಾಗಿದ್ದು, ಇಂದು ಲೋಕಾರ್ಪಣೆಗೊಂಡಿದೆ. ಮಾಜಿ ಸಚಿವ ರಮಾನಾಥ ರೈ ಪ್ರಯತ್ನದ ಫಲ ಇದಾಗಿದೆ. ಇದು ಈ ಭಾಗದ ರೈತರಿಗೆ ಹೆಚ್ಚು ಅನುಕೂಲಕರವಾಗಲಿದೆ ಎಂದರು.