ಬಂಟ್ವಾಳ: ಬಡವರು, ಕಾರ್ಮಿಕರ ಪರ ಧ್ವನಿ ಎತ್ತುವ ಸಮಾನ ಮನಸ್ಕರು ಒಟ್ಟಾಗಿ ಆಡಳಿತ ನಡೆಸಬೇಕು. ಆ ಮೂಲಕ ಜಗತ್ತಿನಲ್ಲಿ ಮತ್ತೆ ಹೊಸ ಭಾರತ ನಿರ್ಮಾಣಗೊಳ್ಳಬೇಕು. ದೇಶದಲ್ಲಿ ಹಿಟ್ಲರ್ ಮಾದರಿ ಏಕಸಾಮ್ಯ ಆಡಳಿತದ ಜತೆಗೆ ಭ್ರಷ್ಟ-ಕೋಮುವಾದದ ಮೂಲಕ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಫ್ಯಾಸಿಸ್ಟ್ ವಾದಿ ಸರಕಾರ ಕಿತ್ತೂಗೆಯಬೇಕು ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಬಿನೋಯ್ ವಿಶ್ವಂ ಹೇಳಿದರು.
ಅವರು ಜ. 30ರಂದು ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಆಶ್ರಯದಲ್ಲಿ ಬಂಟ್ವಾಳದಲ್ಲಿ ಏರ್ಪಡಿಸಿದ್ದ ನವೀಕೃತ ಎ. ಶಾಂತಾರಾಮ ಪೈ ಸ್ಮಾರಕ ಭವನ ಉದ್ಘಾಟನೆ ಮತ್ತು ಬಂಟ್ವಾಳ ಚಲೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಗಾಂಧೀಜಿ, ನೆಹರೂ ಬಳಿಕ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ರೈತರು ಮತ್ತು ಕಾರ್ಮಿಕರಿಗೆ ಕನಿಷ್ಠ ವೇತನ ಮತ್ತಿತರ ಸೌಲಭ್ಯ ನೀಡುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದು, ಇವರಿಗೆ ಕಾಂಗ್ರೆಸ್, ಕಮ್ಯೂನಿಸ್ಟ್, ಸಮಾಜವಾದಿ ಸಹಿತ ಜಾತ್ಯತೀತರು, ನೈಜ ರಾಷ್ಟ್ರೀಯವಾದಿಗಳು ಒಟ್ಟಾಗಿ ಸಹಕರಿಸಬೇಕಾದ ಅನಿವಾರ್ಯ ಇದೆ ಎಂದು ತಿಳಿಸಿದರು.
ಬಿನೋಯ್ ಅವರ ಇಂಗ್ಲಿಷ್ ಭಾಷಣ ವನ್ನು ಎನ್‌ಎಫ್‌ಐಡಬ್ಲ್ಯು ಸಂಘಟನೆ ರಾಜ್ಯ ಸಮಿತಿ ಅಧ್ಯಕ್ಷೆ ಜ್ಯೋತಿ ಎ. ಕನ್ನಡಕ್ಕೆ ಭಾಷಾಂತರಗೊಳಿಸಿದರು.
ಅವಿಭಜಿತ ಜಿಲ್ಲಾ ಸಿಪಿಐ ಕಾರ್ಯದರ್ಶಿ ವಿ. ಕುಕ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಎಐಟಿಯುಸಿ ರಾಜ್ಯಾಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ಸಿಪಿಐ ಧ್ವಜಾರೋಹಣ ನೆರವೇರಿಸಿದರು.ಸಿಪಿಐ ರಾಷ್ಟ್ರೀಯ ಮಂಡಳಿ ಮಾಜಿ ಸದಸ್ಯ ಡಾ| ಸಿದ್ಧನಗೌಡ ಪಾಟೀಲ, ಮಾಜಿ ಸಚಿವ ಬಿ. ರಮಾನಾಥ ರೈ, ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ. ಲೋಕೇಶ್, ಕಾರ್ಮಿಕ ಮುಖಂಡರಾದ ಎಚ್.ವಿ. ಅನಂತ ಸುಬ್ಬರಾವ್, ಕೆ.ಎಸ್.ಜನಾರ್ದನ್, ಎನ್. ಶಿವಣ್ಣ, ಸಂತೋಷ್, ಕೆ.ವಿ. ಭಟ್, ಎ.ಪ್ರಭಾಕರ ರಾವ್, ರಮೇಶ ನಾಯ್ಕ, ವಿದ್ಯಾರ್ಥಿ ನಾಯಕಿ ಜ್ಯೋತಿ, ಎ. ರಾಮಣ್ಣ ವಿಟ್ಲ, ಬಾಬು ಭಂಡಾರಿ, ಎಂ.ಎ. ಹಮೀದ್, ಭಾರತಿ ಮತ್ತಿತರರಿದ್ದರು. ದಿ| ಎ. ಶಾಂತಾರಾಮ ಪೈ ಭಾವಚಿತ್ರಕ್ಕೆ ಅವರ ಪುತ್ರ ಕಿಶೋರ್ ಎಸ್. ಪೈ ಹಾರಾರ್ಪಣೆ ಸಲ್ಲಿಸಿದರುಸಿಪಿಐ ತಾ| ಕಾರ್ಯದರ್ಶಿ ಬಿ. ಶೇಖರ್ ಸ್ವಾಗತಿಸಿ, ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಪ್ರಸ್ತಾವಿಸಿದರು. ಜಿಲ್ಲಾ ಸಹ ಕಾರ್ಯದರ್ಶಿ ವಿ. ಸೀತಾರಾಮ ಬೇರಿಂಜ ವಂದಿಸಿ, ತಾ| ಸಹ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.