ಬಂಟ್ವಾಳ: ಬಂಟ್ವಾಳ ತಾಲೂಕಿನ ಗೂಡಿನಬಳಿ ಎಂಬಲ್ಲಿಗೆ ನೇತ್ರಾವತಿ ನದಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಪುತ್ತೂರು ಸಮೀಪ ಕೆಮ್ಮಿಂಜೆ ನಿವಾಸಿ, ಪುತ್ತೂರು ಕೋರ್ಟ್ ರಸ್ತೆಯಲ್ಲಿ ಅಂಗಡಿ ಹೊಂದಿರುವ ವಿಘ್ನೇಶ್ ಕಾಮತ್ (32 ವ) ನದಿಗೆ ಹಾರಿದ ವ್ಯಕ್ತಿ. ಭಾನುವಾರ ಮಧ್ಯಾಹ್ನ ಸ್ಕೂಟರ್ ನಲ್ಲಿ ಬಂದ ಈತ ಪಾಣೆಮಂಗಳೂರಿನ ಗೂಡಿನಬಳಿ ಎಂಬಲ್ಲಿರುವ ನೇತ್ರಾವತಿ ಹಳೆ ಸೇತುವೆ ಬಳಿ ಸ್ಕೂಟರ್ ನಿಲ್ಲಿಸಿ ನದಿಗೆ ಹಾರಿದ್ದಾನೆ.
ಸುಮಾರು 1 ಗಂಟೆ ವೇಳೆ ಈ ಘಟನೆ ನಡೆದಿದ್ದು, ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ಬಂದ ಈತ, ಸೇತುವೆ ಮೇಲೆ ಸ್ಕೂಟರನ್ನು ಇಟ್ಟು ನದಿಗೆ ಹಾರಿದ್ದಾನೆ. ಈ ಸಂದರ್ಭ ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯ ಈಜುಗಾರರು ನೀರಿಗೆ ಹಾರಿದ್ದು, ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಬಂಟ್ವಾಳ ನಗರ ಪೊಲೀಸರು ಆಗಮಿಸಿ, ಮೃತನ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.