ಬಂಟ್ವಾಳ: ಜೋಗ ಜಲಪಾತ ಪ್ರವಾಸಕ್ಕೆ ತೆರಳಿದ್ದ ಬಸ್ ಅಪಘಾತದಲ್ಲಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ (ಡಿ.30 ರಂದು) ಮೃತಪಟ್ಟಿದ್ದಾರೆ.
ಶಂಭೂರು ಮುಂಡಜೋರ ನಿವಾಸಿ ಭಾರತಿ (55) ಮೃತಪಟ್ಟ ಮಹಿಳೆ.
ಡಿ.15 ರಂದು ಬಂಟ್ವಾಳ ತಾಲೂಕಿನ ಶಂಭೂರು ಶ್ರೀ ಸಾಯಿ ಮಂದಿರದಿಂದ ಸುಮಾರು 55 ಮಂದಿ ಖಾಸಗಿ ಬಸ್ ನಲ್ಲಿ ಜೋಗ ಜಲಪಾತಕ್ಕೆ ತೆರಳಿದ್ದರು. ಶಂಭೂರು , ಬಿಸಿರೋಡು,ಪಾಣೆಮಂಗಳೂರು ಹಾಗೂ ಮಂಗಳೂರಿನಿಂದ ಬಸ್ ಮೂಲಕ ಪ್ರವಾಸಕ್ಕೆ ಹೋಗಿದ್ದರು. ಜೋಗ ತಲಪುವ ಸ್ವಲ್ಪ ದೂರವೇ ಬಸ್ ನ ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ಕಳೆದು ಪಲ್ಟಿಯಾಗಿತ್ತು.
ಘಟನೆಯಲ್ಲಿ ಸುಮಾರು 20 ಕ್ಕೂ ಅಧಿಕ ಮಂದಿಗೆ ಗಂಭೀರವಾಗಿ ಗಾಯವಾಗಿತ್ತು. ಇವರೆಲ್ಲರನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ವಿಶೇಷ ಮುತುವರ್ಜಿಯಿಂದ ಸಾಗರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ಕರೆತರಲಾಗಿತ್ತು.
ಶಾಸಕರ ಸೂಚನೆಯಂತೆ ಎ.ಜೆ.ಆಸ್ಪತ್ರೆಯಲ್ಲಿ ಗಂಭೀರ ಗಾಯಗೊಂಡ ಎಲ್ಲರನ್ನು ಚಿಕಿತ್ಸೆ ನೀಡಲು ದಾಖಲು ಮಾಡಲಾಗಿತ್ತು.
ಆದರೆ ಕೈ ಹಾಗೂ ಎದೆ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಭಾರತಿ ಅವರು ಸುಮಾರು 15 ದಿನಗಳ ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಭಾರತಿ ಅವರ ಮಗಳು ಕೂಡ ಅಪಘಾತದಲ್ಲಿ ಗಾಯಗೊಂಡಿದ್ದು, ಮಂಗಳೂರು ಎಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.