Advertisement

ಬಂಟ್ವಾಳ: ಸಮವಸ್ತ್ರ ಖಾತೆಗಳ ಸಚಿವ ರೈ!

01:47 PM Mar 18, 2018 | Team Udayavani |

ಮಂಗಳೂರು: ಬಂಟ್ವಾಳ ವಿಧಾನಸಭಾ ಕ್ಷೇತ್ರವನ್ನು ರಮಾನಾಥ ರೈ ಅವರು 2004ರ ಅವಧಿ ಹೊರತು ಪಡಿಸಿ ನಿರಂತರ ಪ್ರತಿನಿಧಿಸುತ್ತಿದ್ದಾರೆ. ಮೂರು ಬಾರಿ ಸಚಿವರಾಗಿದ್ದಾರೆ. ಒಂದೇ ಕ್ಷೇತ್ರವನ್ನು ಆರು ಬಾರಿ ಪ್ರತಿನಿಧಿಸಿದ ದಾಖಲೆಯೂ ಅವರ ಪಾಲಿಗಿದೆ. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡನೆಯ ಬಳಿಕ ಕೆಲವು ಭಾಗ ಇತರ ಕ್ಷೇತ್ರಗಳಿಗೆ ಸೇರಿದೆ. ಇತರ ಕ್ಷೇತ್ರಗಳ ಕೆಲವು ಭಾಗಗಳು ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಬಂದಿವೆ. ಇದೀಗ ಕ್ಷೇತ್ರದಿಂದ ಎಂಟನೇ ಬಾರಿಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿರುವ ರಮಾನಾಥ ರೈ ಅವರು ಶಾಸಕನಾಗಿ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಮಾಡಿರುವ ಸಾಧನೆಗಳು, ಮುಂದಿನ ಅವಧಿಗೆ ಶಾಸಕನಾದರೆ ಕ್ಷೇತ್ರದ ಅಭಿವೃದ್ಧಿಗೆ ತನ್ನ ಯೋಜನೆ, ಯೋಚನೆಗಳೇನು ಎಂಬುದನ್ನು ಹಂಚಿಕೊಂಡಿದ್ದಾರೆ.

Advertisement

ಅಭಿವೃದ್ಧಿ ಪರ್ವ
ಬಂಟ್ವಾಳ ವಿಧಾನಸಭಾ ಕ್ಷೇತ್ರ ಕಳೆದ 5 ವರ್ಷಗಳಲ್ಲಿ ಅಭಿವೃದ್ಧಿಯ ಹೊಸ ಶಕೆಯೊಂದನ್ನು ಕಂಡಿದೆ. ವಿವಿಧ ಯೋಜನೆಗಳಲ್ಲಿ 1,000 ಕೋ. ರೂ.ಗೂ ಅಧಿಕ ಅನುದಾನ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ವಿನಿಯೋಗವಾಗಿದ್ದು, ಹೊಸ ದಾಖಲೆಯೊಂದನ್ನು ಬರೆಯಲಾಗಿದೆ.

ನಾನು 6 ಬಾರಿ ಬಂಟ್ವಾಳ ಕ್ಷೇತ್ರದಿಂದ ಶಾಸಕನಾಗಿದ್ದೇನೆ. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡನೆಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಬದಲಾವಣೆಗಳಾದವು. ಪ್ರಸ್ತುತ ಬಂಟ್ವಾಳ ತಾಲೂಕಿನ ಬಹುತೇಕ ಭಾಗ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಶಾಸಕನಾಗಿ ಆರು ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಬಹಳಷ್ಟು ಯೋಜನೆಗಳನ್ನು ತಂದಿದ್ದೇನೆ. ಅಭಿವೃದ್ಧಿ ಸಾಕಾರಗೊಂಡಿದೆ. ಕಳೆದ 5 ವರ್ಷಗಳ ಅವಧಿಯ ಬಗ್ಗೆ ಹೇಳುವುದಾದರೆ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ್ದೇನೆ. ಅನೇಕ ಮಹತ್ವದ ಮತ್ತು ಬಹುಕಾಲದಿಂದ ಈ ಭಾಗದ ಬೇಡಿಕೆಯಾಗಿದ್ದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ.

ಮೂಲ ಸೌಕರ್ಯಗಳಿಗೆ ಆದ್ಯತೆ
ಕುಡಿಯುವ ನೀರು, ರಸ್ತೆ, ವಿದ್ಯುತ್‌ ಹಾಗೂ ಸಾಮಾಜಿಕ ನ್ಯಾಯ ಸೇರಿದಂತೆ ಕಳೆದ 5 ವರ್ಷಗಳ ಅವಧಿಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದು , ಈ ನಿಟ್ಟಿನಲ್ಲಿ ಬಹಳಷ್ಟು ಯೋಜನೆಗಳು ಅನುಷ್ಠಾನಗೊಂಡಿವೆ. ನದಿಯಿಂದ ನೀರೆತ್ತಿ ಕುಡಿಯುವ ಉದ್ದೇಶಕ್ಕೆ ಬಳಸುವ ಒಟ್ಟು 128.4 ಕೋ.ರೂ. ವೆಚ್ಚದಲ್ಲಿ 5 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಬಂದಿದ್ದು, ಇದರಲ್ಲಿ 3 ಯೋಜನೆಗಳು ಪೂರ್ಣಗೊಂಡಿವೆ; 2 ಯೋಜನೆಗಳು ಪ್ರಗತಿಯಲ್ಲಿವೆ. ಪ್ರತಿ ಗ್ರಾಮದ ಮನೆಮನೆಗಳಿಗೆ ಕುಡಿಯಲು ನದಿನೀರು ಪೂರೈಕೆಯಾಗಲಿದೆ.

ಕ್ಷೇತ್ರದಲ್ಲಿ ಬಹಳಷ್ಟು ಜಿಲ್ಲಾ ಪಂಚಾಯತ್‌ ರಸ್ತೆಗಳನ್ನು ಲೋಕೋಪಯೋಗಿ ರಸ್ತೆಗಳಾಗಿ ಪರಿವರ್ತಿಸಲಾಗಿದೆ. ಹೆಚ್ಚುವರಿ ಅನುದಾನಗಳನ್ನು ತಂದಿದ್ದೇನೆ. ರಸ್ತೆ, ಸೇತುವೆಗಳ ಅಭಿವೃದ್ಧಿಗೆ 144.71 ಕೋ.ರೂ. ವಿನಿಯೋಗಿಸಲಾಗಿದೆ. ಸಣ್ಣ ನೀರಾವರಿ ಇಲಾಖೆಯ 126 ಕಾಮಗಾರಿಗಳಿಗೆ ಒಟ್ಟು 26.66 ಕೋ.ರೂ. ಅನುದಾನ ಮಂಜೂರಾಗಿದೆ. ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಲ್ಲಿ ಒಟ್ಟು ಸುಮಾರು 60 ಕಿ.ಮೀ. ರಸ್ತೆಯನ್ನು 52.77 ಕೋ.ರೂ. ಗಳಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಹೊಸತಾಗಿ 19 ಸೇತುವೆಗಳನ್ನು ನಿರ್ಮಿಸಲಾಗಿದೆ. ಕಳೆದ 5 ವರ್ಷಗಳಲ್ಲಿ 1,548 ಶೌಚಾಲಯ ನಿರ್ಮಿಸಲಾಗಿದೆ. ಕೃಷಿ, ಶಿಕ್ಷಣ, ಕೈಗಾರಿಕೆ ಸೇರಿದಂತೆ ಅನೇಕ  ಕ್ಷೇತ್ರಗಳಲ್ಲಿ ಬಹಳಷ್ಟು ಯೋಜನೆಗಳು ಅನುಷ್ಠಾನಗೊಂಡಿವೆ.

Advertisement

94ಸಿ ಮತ್ತು 94ಸಿಸಿ ಅಡಿಯಲ್ಲಿ ಬಂಟ್ವಾಳ ತಾಲೂಕಿನಲ್ಲಿ 16,000ಕ್ಕೂ ಅಧಿಕ ಕುಟುಂಬಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಒಟ್ಟಾರೆಯಾಗಿ ಬಂಟ್ವಾಳ ಕ್ಷೇತ್ರ ಕಳೆದ 5 ವರ್ಷಗಳಲ್ಲಿ ಅಭಿವೃದ್ಧಿಯ ಪರ್ವವನ್ನು ಕಂಡಿದೆ ಎಂದು ರೈ ವಿವರಿಸುತ್ತಾರೆ.

ಪ್ರಮುಖ ಅಭಿವೃದ್ಧಿ ಕಾರ್ಯಗಳು
10 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಜನಪದವಿನಲ್ಲಿ ತಾಲೂಕು ಮಟ್ಟದ ಕ್ರೀಡಾಂಗಣ, ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ 52.79 ಕೋ.ರೂ. ವೆಚ್ಚದಲ್ಲಿ ಸಮಗ್ರ ಕುಡಿಯುವ ನೀರು ಯೋಜನೆ, 31 ಕೋ. ರೂ. ವೆಚ್ಚದಲ್ಲಿ ಅಜಿಲಮೊಗರು-ಕಡೇಶಿವಾಲಯ ಸೌಹಾರ್ದ ಸೇತುವೆ, 128.4 ಕೋ. ರೂ. ವೆಚ್ಚದಲ್ಲಿ 5 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು, 10.07 ಕೋ. ರೂ. ವೆಚ್ಚದಲ್ಲಿ ಬಿ.ಸಿ.ರೋಡಿನಲ್ಲಿ ನೂತನ ಕೆಎಸ್‌ ಆರ್‌ಟಿಸಿ ಬಸ್‌ ನಿಲ್ದಾಣ,10 ಕೋ. ರೂ. ವೆಚ್ಚದಲ್ಲಿ ಮಾದರಿ ಮಿನಿ ವಿಧಾನಸೌಧ, 5.16 ಕೋ. ರೂ. ವೆಚ್ಚದಲ್ಲಿ ನೂತನ ವಿಭಾಗೀಯ ಮೆಸ್ಕಾಂ ಕಚೇರಿ, 56 ಕೋ. ರೂ. ವೆಚ್ಚದಲ್ಲಿ ಒಳಚರಂಡಿ ಯೋಜನೆ, 20 ಕೋ. ರೂ. ವೆಚ್ಚದಲ್ಲಿ ಬಿ.ಸಿ.ರೋಡಿನಲ್ಲಿ ಸುಸುಜ್ಜಿತ ಸರ್ವಿಸ್‌ ಬಸ್‌ನಿಲ್ದಾಣ, 5 ಕೋ.ರೂ. ವೆಚ್ಚದಲ್ಲಿ ಪಂಜೆ ಮಂಗೇಶರಾಯರ ಭವನ ಸೇರಿದಂತೆ ಕಳೆದ 5 ವರ್ಷಗಳಲ್ಲಿ ಅನೇಕ ಪ್ರಮುಖ ಯೋಜನೆಗಳು ಕ್ಷೇತ್ರದಲ್ಲಿ ಅನುಷ್ಠಾನಗೊಂಡಿದೆ ಎನ್ನುತ್ತಾರೆ ರಮಾನಾಥ ರೈ ಅವರು.

ಚಿಂತನೆಯಲ್ಲಿರುವ ಯೋಜನೆಗಳು
ಪ್ರಸ್ತುತ ಅನುಷ್ಠಾನಗೊಂಡಿರುವ ಯೋಜನೆಗಳಲ್ಲದೆ ಇನ್ನೂ ಅನೇಕ ಯೋಜನೆಗಳು ಚಿಂತನೆಯಲ್ಲಿವೆ. ಬಂಟ್ವಾಳ ವಿಧಾನಸಭಾ ವ್ಯಾಪ್ತಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ, ಉಪವಿಭಾಗಾಧಿಕಾರಿಗಳ (ಎಸಿ) ಕಚೇರಿ, ಬಂಟ್ವಾಳವನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸುವುದು, ಕ್ರೀಡಾ ಶಾಲೆ ಇವುಗಳಲ್ಲಿ ಪ್ರಮುಖವಾದವು ಎಂದವರು ವಿವರಿಸುತ್ತಾರೆ.

ಜಾತ್ಯತೀತ ನಿಲುವಿನ ಬದ್ಧತೆ
ನಾನು ಎಲ್ಲ ಧರ್ಮ, ಜಾತಿ, ಭಾಷೆಯ ಜನರನ್ನು ಪ್ರೀತಿಸುತ್ತಾ ಬಂದವನು. ಜಾತ್ಯತೀತ ಸಿದ್ಧಾಂತದಲ್ಲಿ ನಂಬಿಕೆಯಿಟ್ಟು ಅದನ್ನು ನನ್ನ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿದ್ದೇನೆ. ಎರಡೂ ರೀತಿಯ ಮತೀಯವಾದವನ್ನು ವಿರೋಧಿಸುತ್ತಿದ್ದೇನೆ. ನಾನು ನಂಬಿಕೊಂಡು ಬಂದ ತತ್ವ ಸಿದ್ಧಾಂತಗಳಲ್ಲಿ ಎಂದೂ ರಾಜಿ ಮಾಡಿಕೊಂಡಿಲ್ಲ .
– ರಮಾನಾಥ ರೈ

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next