Advertisement

ಬಂಟ್ವಾಳ: ತುಳು ಕೂಟ ಸದಸ್ಯತ್ವ ಅಭಿಯಾನ 

04:34 PM Oct 27, 2017 | Team Udayavani |

ಬಂಟ್ವಾಳ: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆ ಮಾಡುವ ಕಾಲ ಸನ್ನಿಹಿತವಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ 2016ರ ಆ. 31 ರಂದು ಪ್ರಧಾನಿಯವರಿಗೆ ಈ ಕುರಿತು ಮನವಿ ನೀಡಲಾಗಿತ್ತು, ಅ.29ರಂದು ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಕ್ಷೇತ್ರಕ್ಕೆ ಬರುವ ಸಂದರ್ಭ ತುಳುವನ್ನು ಸೇರ್ಪಡೆ ಮಾಡುವ ಕುರಿತು ಡಾ| ವೀರೇಂದ್ರ ಹೆಗ್ಗಡೆ ಅವರು ಪ್ರಸ್ತಾವ ಮಾಡಲಿದ್ದಾರೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಹೇಳಿದರು.

Advertisement

ಅವರು ಅ. 25ರಂದು ಜೋಡು ಮಾರ್ಗ ಸ್ವಶಾì ಕಲಾ ಮಂದಿರದಲ್ಲಿ ನಡೆದ ತುಳು ಕೂಟ ಸದಸ್ಯತ್ವ ಅಭಿಯಾನದ ಮೊದಲ ಸದಸ್ಯತ್ವ ಮೊಬಲಗು ಪಾವತಿ ಪತ್ರವನ್ನು ಪಡೆದು ಮಾತನಾಡಿದರು. 

ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಸಹಿತ ಇತರ 32 ಭಾಷೆಗಳು ಸಂವಿಧಾನದಲ್ಲಿ ಸೇರ್ಪಡೆಗಾಗಿ ಸರತಿಯಲ್ಲಿವೆ. ಈಗಾಗಲೇ 21 ಭಾಷೆಗಳ ಸೇರ್ಪಡೆ ಆಗಿದೆ. ತುಳುವಿನ ಸೇರ್ಪಡೆಯನ್ನು ಪ್ರಸ್ತುತ ನಿರ್ದಿಷ್ಟ ಕ್ರಮದಲ್ಲಿ ಮಾಡಲಾಗುತ್ತಿದೆ ಎಂದವರು ತಿಳಿಸಿದರು

ತುಳು ಕೂಟಕ್ಕೆ ಬಲ
ತುಳು ಕೂಟ ಬಂಟ್ವಾಳ ಇದರ ಅಧ್ಯಕ್ಷ ಸುದರ್ಶನ ಜೈನ್‌ ಅಧ್ಯಕ್ಷತೆ ವಹಿಸಿದ್ದರು. ಸದಸ್ಯತ್ವ ಅಭಿಯಾನದ ಮೂಲಕ ತುಳು ಕೂಟವನ್ನು ಬಲಯುತವಾಗಿ ಮಾಡಲು ಸಾಧ್ಯ ಎಂದರು. ಮುಂದಿನ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಸಭೆಯಲ್ಲಿ ಪ್ರಸ್ತಾವನೆ, ಸಲಹೆ, ಸೂಚನೆ, ವಿವರದ ಮಂಡನೆ ನಡೆಯಿತು.  ವೇದಿಕೆಯಲ್ಲಿ ಬಂಟ್ವಾಳ ಕಸಾಪ ಅಧ್ಯಕ್ಷ ಕೆ. ಮೋಹನ ರಾವ್‌, ಯಕ್ಷಗಾನ ಹಿರಿಯ ಕಲಾವಿದ ಸರಪಾಡಿ ಅಶೋಕ ಶೆಟ್ಟಿ, ಬ್ಯಾರಿ ಸಾಹಿತ್ಯ ಪರಿಷತ್‌ ಅಧ್ಯಕ್ಷ ಅಬ್ಟಾಸ್‌ ಅಲಿ, ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಶಿವಾನಂದ ಕರ್ಕೇರ, ಸುಧಾ ನಾಗೇಶ್‌, ವಿಜಯ ಸಾಲೆತ್ತೂರು, ವಿದ್ಯಾಶ್ರೀ, ತುಳು ಕೂಟದ ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್‌ ಮತ್ತಿತರರು ಉಪಸ್ಥಿತರಿದ್ದರು.

ಅಕಾಡೆಮಿ ನಿಕಟಪೂರ್ವ ಸದಸ್ಯ ಡಿ.ಎಂ. ಕುಲಾಲ್‌ ಸ್ವಾಗತಿಸಿದರು. ಹಾಲಿ ಸದಸ್ಯ ಗೋಪಾಲ ಅಂಚನ್‌ ಪ್ರಸ್ತಾವನೆ ನೀಡಿದರು. ಕೂಟದ ಪ್ರಮುಖರಾದ ಸೀತಾರಾಮ ಶೆಟ್ಟಿ ಕಾಂತಾಡಿ ವಂದಿಸಿ, ಕಲಾವಿದ ಎಚ್ಕೆ ನಯನಾಡು ನಿರ್ವಹಿಸಿದರು.

Advertisement

ತುಳು ಸಾಂಸ್ಕೃತಿಕ ಸಂಪತ್ತು ಉಳಿಸುವ ಕೆಲಸವಾಗಲಿ
ಅಕಾಡೆಮಿಯು ಗ್ರಾಮೀಣ ಪ್ರದೇಶದಲ್ಲಿ ಇರುವ ತುಳುವಿನ ಸಾಂಸ್ಕೃತಿಕ ಸಂಪತ್ತನ್ನು ಬೆಳಕಿಗೆ ತರುವ, ಸಾರ್ವತ್ರಿಕವಾಗಿ ಅದನ್ನು ಉಳಿಸಿಕೊಳ್ಳುವ ಮಹತ್ವದ ಹೊಣೆ ನಿರ್ವಹಿಸಲಿದೆ. ಬಂಟ್ವಾಳದಲ್ಲಿ ಮುಂದಿನ ಡಿ. 10ರಂದು ಪ್ರಥಮ ತುಳು ಸಾಹಿತ್ಯ ಸಮ್ಮೇಳನ ನಡೆಯಲಿದೆ . ಈಗಾಗಲೇ ತುಳು ಭಾಷೆಯ ಉಳಿಸುವಿಕೆ , ಬೆಳೆಸುವಿಕೆಯಲ್ಲಿ ಅನೇಕ ಪ್ರಯತ್ನ ನಡೆದಿವೆ. 1972ರಲ್ಲಿ ಅಡ್ಯಾರ್‌ನಲ್ಲಿ ಪ್ರಥಮ ವಿಶ್ವ ತುಳು ಸಮ್ಮೇಳನ ನಡೆದಿತ್ತು. 1989ರಲ್ಲಿ ಅಖಿಲ ಭಾರತ ತುಳು ಸಮ್ಮೇಳನ ನಡೆದಿದೆ. 2009ರಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಆಶ್ರಯದಲ್ಲಿ ಉಜಿರೆಯಲ್ಲಿ ವಿಶ್ವ ತುಳು ಸಮ್ಮೇಳನ ನಡೆದಿತ್ತು. 2010ರಲ್ಲಿ ಪುತ್ತೂರು ಸವಣೂರಿನಲ್ಲಿ ಅಖೀಲ ಭಾರತ ತುಳು ಸಮ್ಮೇಳನ ನಡೆದಿದೆ. 2012ರಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮಿಗಳ ಮಾರ್ಗದರ್ಶನದಲ್ಲಿ ತುಳುನಾಡ ಜಾತ್ರೆ, ತುಳು ತೇರ್‌ ಒಯಿಪುಗ ಆಗಿದೆ. 2015ರಲ್ಲಿ ಮಕ್ಕಳ ತುಳು ಸಾಹಿತ್ಯ ಸಮ್ಮೇಳನ ನಡೆದಿರುವುದನ್ನು ಸ್ಮರಿಸಬಹುದು.
– ಎ.ಸಿ. ಭಂಡಾರಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next