ಬಂಟ್ವಾಳ: ಫರಂಗಿಪೇಟೆಯ ಕೋಡಿಮಜಲು ನಿವಾಸಿ ಬಿಲ್ಡರ್‌ವೊಬ್ಬರ ಮನೆಯಿಂದ ಅ. 18 -23ರ ಮಧ್ಯೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೆಲಸದಾತನೇ ತನ್ನಲ್ಲಿದ್ದ ಕೀಲಿಕೈಯನ್ನು ಬಳಸಿ ನಗ-ನಗದು ಸೇರಿದಂತೆ ಸುಮಾರು 32.46 ಲಕ್ಷ ರೂ. ಮೌಲ್ಯದ ಸೊತ್ತುಗಳು ಕಳವಿನ ಪ್ರಕರಣಕ್ಕೆ ಬಂಟ್ವಾಳ ಪೊಲೀಸರು ಡಿ. 11ರಂದು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಕೆಲಸದಾತ ಮಂಜೇಶ್ವರ ಮೂಲದ ಅಶ್ರಫ್ ಆಲಿ ಹಾಗೂ ಬೆಂಗ್ರೆಯ ಕಬೀರ್ ಬಂಧಿತರು. ಪ್ರಸ್ತುತ ಪೊಲೀಸರು ಅವರಿಂದ ಸುಮಾರು 4.50 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ 4 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಕೋಡಿಮಜಲು ನಿವಾಸಿ ಬಿಲ್ಡರ್ ಮಾಲಕ ಮೊಹಮ್ಮದ್ ಜಫಾರುಲ್ಲಾ ಅವರ ಮನೆಯಿಂದ ಕಳವಾಗಿದ್ದು, ಒಟ್ಟು 27.50 ಲಕ್ಷ ರೂ. ನಗದು ಹಾಗೂ 4.96 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವ ಕುರಿತು ದೂರು ನೀಡಿದ್ದರು. ಹೀಗಾಗಿ ಕಳವಾಗಿರುವ ಉಳಿದ ಚಿನ್ನ ಹಾಗೂ ನಗದಿನ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆರೋಪಿ ಅಶ್ರಫ್ ಆಲಿಯು ಜಫಾರುಲ್ಲಾ ಜತೆ ಸುಮಾರು 8 ತಿಂಗಳಿನಿಂದ ಕೆಲಸಕ್ಕಿದ್ದು, ಮಾಲಕನ ಜತೆ ಅವರ ಮನೆಮಂದಿಯ ವಿಶ್ವಾಸವನ್ನೂ ಗಳಿಸಿಕೊಂಡಿದ್ದನು. ಅ.18ರಂದು ಝಫಾರುಲ್ಲಾ ಅವರ ಮನೆಯವರು ಮನೆಗೆ ಬೀಗ ಹಾಕಿ ಮಂಗಳೂರಿನ ಜಪ್ಪುನಲ್ಲಿರುವ ತಮ್ಮನ ಮನೆಗೆ ತೆರಳಿದ್ದರು. ಹೋಗುವ ಸಂದರ್ಭ ಮನೆಗೆ ಬೀಗ ಹಾಕಿ ಕೀಲಿಕೈಯನ್ನು ಕೆಲಸದಾಳು ಆಲಿಯ ಕೈಯಲ್ಲಿ ನೀಡಿದ್ದರು.
ಆದರೆ ಅ. 19ರಿಂದ ಕೆಲಸದಾಳುವಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್x ಆಫ್ ಆಗಿತ್ತು. ಜಫಾರುಲ್ಲಾ ಅವರು ಅದನ್ನು ಗಂಭೀರವಾಗಿ ಪರಿಗಣಿಸದೆ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದು, ಅಲ್ಲಿಂದ ಕರೆ ಮಾಡಿದಾಗಲೂ ಮೊಬೈಲ್ ಸ್ವಿಚ್x ಆಫ್ ಇತ್ತು. ಬೆಂಗಳೂರಿನ ಕೆಲಸ ಮುಗಿಸಿ ಅ.23ರ ರಾತ್ರಿ 8ರ ಸುಮಾರಿಗೆ ಮನೆಗೆ ಬಂದು ನೋಡಿದಾಗ ಮನೆಗೆ ಬೀಗ ಹಾಕಿದ್ದು, ಕೀಲಿಗೈಗಾಗಿ ಆಲಿಗೆ ಕರೆ ಮಾಡಿದರೆ ಆಗಲೂ ಮೊಬೈಲ್ ಸ್ವಿಚ್ ಆಫ್ ಇತ್ತು. ಸಂಶಯಗೊಂಡು ಮನೆಯ ಹಿಂಬದಿಯ ಕಿಟಕಿಯಲ್ಲಿ ನೋಡಿದಾಗ ಕೋಣೆಯ ಬಾಗಿಲು ತೆರೆಗಿದ್ದು, ಕಪಾಟಿನ ಲಾಕರ್ ಮುರಿದು ಅದರಲ್ಲಿದ್ದ ಸೊತ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದವು. ಒಳಗೆ ಹೋಗಿ ನೋಡಿದಾಗ ಕಳವಿನ ಪ್ರಕರಣ ಬೆಳಕಿಗೆ ಬಂದಿತ್ತು.