Advertisement

ಅಧಿಕಾರಿಗಳ ಗೊಂದಲ: ನೀರು ಪೂರೈಕೆ ವಿಳಂಬ

11:58 AM Oct 04, 2018 | |

ಬಂಟ್ವಾಳ: ಕರೋಪಾಡಿಯಲ್ಲಿ 26 ಕೋ. ರೂ. ವೆಚ್ಚದಲ್ಲಿ ಅನುಷ್ಠಾನಗೊಂಡ ಇಲ್ಲಿನ ನೇತ್ರಾವತಿ ನದಿಯಿಂದ ನೀರು ಮೇಲೆತ್ತಿ ಶುದ್ಧೀಕರಿಸಿ ಹಲವು ಗ್ರಾಮ ಗಳಿಗೆ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಈಗಾಗಲೇ ಉದ್ಘಾಟನೆಗೊಂಡಿದೆ. ಆದರೆ ಮೆಸ್ಕಾಂ ಇಲಾಖೆ- ಜಿ.ಪಂ. ಎಂಜಿನಿಯರಿಗ್‌ ವಿಭಾಗದ ನಡುವೆ ಹೊಂದಾಣಿಕೆ ಇಲ್ಲದ ಪರಿಣಾಮ ಸ್ಥಳೀಯರಿಗೆ ಕುಡಿಯುವ ನೀರು ಪೂರೈಕೆ ಯಾಗುತ್ತಿಲ್ಲ ಎಂದು ತಾ.ಪಂ. ಸದಸ್ಯ ಉಸ್ಮಾನ್‌ ಕರೋಪಾಡಿ ಆರೋಪಿಸಿದರು.

Advertisement

ಅವರು ಅ. 3ರಂದು ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆಯಲ್ಲಿ ನಡೆದ ತಾ.ಪಂ. ಮಾಸಿಕ ಸಭೆಯಲ್ಲಿ ವಿವಿಧ ವಿಷಯಗಳ ಮೇಲೆ ನಡೆದ ಚರ್ಚೆಯಲ್ಲಿ ವಿಚಾರ ಪ್ರಸ್ತಾವಿಸಿದರು. ಜಿ.ಪಂ. ಸ. ಕಾರ್ಯ ನಿರ್ವಾಹಕ ಎಂಜಿನಿಯರ್‌ ನರೇಂದ್ರ ಬಾಬು ಪ್ರತಿಕ್ರಿಯಿಸಿ, ಹೆಚ್ಚುವರಿ ವಿದ್ಯುತ್‌ ಲೈನ್‌ ಅಳವಡಿಸಲು ನಿಗದಿತ ಮೊತ್ತ ಪಾವತಿಸಲಾಗಿದ್ದು, ವಿದ್ಯುತ್‌ ಸಂಪರ್ಕ ವ್ಯವಸ್ಥೆ ಮೆಸ್ಕಾಂ ನಿರ್ವಹಿಸಬೇಕು ಎಂದರು.

ಮೆಸ್ಕಾಂನ ಸ. ಕಾರ್ಯನಿರ್ವಾಹಕ ಎಂಜಿನಿಯರ್‌ ನಾರಾಯಣ ಭಟ್‌ ಉತ್ತರಿಸಿ, ಸಜೀಪಮುನ್ನೂರು ಗ್ರಾಮದ ಆಲಾಡಿ ಎಂಬಲ್ಲಿ ಮಳೆಗಾಲದಲ್ಲಿ ವಿದ್ಯುತ್‌ ಟವರ್‌ ಕುಸಿದು ಬಿದ್ದಿದೆ. ಪ್ರತ್ಯೇಕ ಹೊಸ ಟವರ್‌ ನಿರ್ಮಿಸಲು ಸ್ಥಳೀಯರು ಅಡ್ಡಿ ಪಡಿಸುತ್ತಿದ್ದಾರೆ. ಇದರಿಂದಾಗಿ ಸಮಸ್ಯೆ ಉಂಟಾಗಿದೆ ಎಂದರು.

ಜಿ.ಪಂ. ಸದಸ್ಯ ಎಂ.ಎಸ್‌. ಮಹಮ್ಮದ್‌ ಪ್ರತಿಕ್ರಿಯಿಸಿ, ಮೆಸ್ಕಾಂ-ಜಿ.ಪಂ. ಎಂಜಿನಿಯರ್‌ ವಿಭಾಗದ ನಡುವಿನ ಗೊಂದಲದಲ್ಲಿ ಜನರಿಗೆ ಕುಡಿಯುವ ನೀರು ಇಲ್ಲದಂತೆ ಮಾಡುವುದು ತಪ್ಪು ಎಂದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸಭೆ ಮುಗಿದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಅಲ್ಲಿನ ಜನಪ್ರತಿನಿಧಿಗಳೊಂದಿಗೆ ಸ್ಥಳಕ್ಕೆ ತೆರಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ವಿದ್ಯುತ್‌ ಲೈನ್‌ ಹಾದು ಹೋಗುವ ಪ್ರದೇಶಗಳ ನಾಗರಿಕರ ಸಭೆಯನ್ನು ನಾಳೆ ಕರೆದು ಚರ್ಚಿಸಿ ಸರಿಪಡಿಸಿಕೊಳ್ಳಲು ಸೂಚಿಸಿದರು.

ಬ್ಯಾನರ್‌ನಲ್ಲಿ ಪಕ್ಷಗಳ ಚಿಹ್ನೆ
ಕೆಲವೊಂದು ಗ್ರಾ.ಪಂ.ಗಳಲ್ಲಿ 94ಸಿ ಮತ್ತು 94ಸಿಸಿ ಹಕ್ಕುಪತ್ರ ವಿತರಣೆ ಸಂದರ್ಭ ಬ್ಯಾನರ್‌ನಲ್ಲಿ ರಾಜಕೀಯ ಪಕ್ಷಗಳ ಚಿಹ್ನೆ ಬಳಕೆ ಖಂಡನೀಯ. ಈ ಬಗ್ಗೆ ತಾ.ಪಂ. ಕಾರ್ಯ ನಿರ್ವಹಣಾ ಧಿಕಾರಿ ಎಲ್ಲ ಪಂ.ಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕೆಂದು ತಾ.ಪಂ. ಸದಸ್ಯೆ ಮಲ್ಲಿಕಾ ವಿ. ಶೆಟ್ಟಿ ಆಗ್ರಹಿಸಿದರು.

Advertisement

ಕಾಂಕ್ರೀಟ್‌ ರಸ್ತೆ
ಮಂಚಿ ಸಮೀಪದ ಕುಕ್ಕಾಜೆಯಲ್ಲಿ ಮಸೀದಿಗೆ ಹೋಗುವ ಕಾಂಕ್ರೀಟ್‌ ರಸ್ತೆಯನ್ನು ಒಡೆದು ಹಾಕಿರುವ ಬಗ್ಗೆ ತನಿಖೆ ನಡೆಸಬೇಕೆಂದು ಇರಾ ಗ್ರಾ.ಪಂ. ಅಧ್ಯಕ್ಷ ಅಬ್ದುಲ್‌ ರಝಾಕ್‌ ಕುಕ್ಕಾಜೆ ಆಗ್ರಹಿಸಿದರು. ಜಿ.ಪಂ. ಸ. ಕಾರ್ಯ ನಿರ್ವಾಹಕ ಎಂಜಿನಿಯರ್‌ ನರೇಂದ್ರ ಬಾಬು ಪ್ರತಿಕ್ರಿಯಿಸಿ, ಮಸೀದಿ ವತಿಯಿಂದಲೇ ರಸ್ತೆ ಒಡೆದು ಹಾಕಲಾಗಿದೆ ಎಂದರು.

ಠೇವಣಿ ಇಟ್ಟ ರೈತರಿಗೂ 3 ಲಕ್ಷ ರೂ. ತನಕ ಸುಸ್ತಿ ಸಾಲ ಮನ್ನಾ ಮಾಡಲಾಗಿದ್ದರೂ ತೆರಿಗೆ ಪಾವತಿ ಸುವ ರೈತರಿಗೆ ಈ ಸೌಲಭ್ಯ ಯಾಕಿಲ್ಲ ಎಂದು ತಾ.ಪಂ. ಸದಸ್ಯ ಯಶವಂತ ಪೊಳಲಿ ಪ್ರಶ್ನಿಸಿದರು. ಅಂಗವಿಕಲ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಯಲ್ಲಿ ಶುಲ್ಕ ವಿನಾಯಿತಿ ನೀಡಬೇಕು ಎಂದು ತಾ.ಪಂ. ಸದಸ್ಯ ಹೈದರ್‌ ಆಗ್ರಹಿಸಿದರು. ಹದಗೆಟ್ಟ ಹತ್ತು ಸರಕಾರಿ ಶಾಲೆ ಕೊಠಡಿ ಗಳನ್ನು ಕೆಡವಲು ಶಿಫಾರಸು ಮಾಡಲಾಗಿದೆ ಎಂದು ಕಾರ್ಯ ನಿರ್ವಾಹಕ ಎಂಜಿನಿಯರ್‌ ವೈ. ಉಮೇಶ್‌ ಭಟ್‌ ತಿಳಿಸಿದರು.

ಶೇಂದಿ ಮಾರಾಟ
ತಾ.ಪಂ. ಸದಸ್ಯರಾದ ಕೆ. ಸಂಜೀವ ಪೂಜಾರಿ, ರಮೇಶ್‌ ಕುಡ್ಮೇರು ಮಾತನಾಡಿ, ಶೇಂದಿ ಮಾರಾಟಕ್ಕೆ ಅಬಕಾರಿ ಇಲಾಖೆ ಅಡ್ಡಿ ಪಡಿಸಬಾರದೆಂದು ಆಗ್ರಹಿಸಿದರು. ಶಾಲಾಭಿವೃದ್ಧಿ ಸಮಿತಿ ರಚನೆ, ಬಿಎಸ್‌ ಎನ್‌ಎಲ್‌ ಅಂತರ್ಜಾಲ ಸಮಸ್ಯೆ, ಸರಕಾರಿ ಬಸ್‌ ಓಡಾಟ ಸ್ಥಗಿತ, ಪಡಿತರ ಸಾಮಗ್ರಿ ರವಿವಾರವೂ ತೆರೆಯ ಬೇಕೆಂದು ಚರ್ಚೆ ನಡೆಸಲಾಯಿತು. ತಾ.ಪಂ. ಉಪಾಧ್ಯಕ್ಷ ಅಬ್ಟಾಸ್‌ ಆಲಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ತಹಶೀಲ್ದಾರ್‌ ಪುರಂದರ ಹೆಗ್ಡೆ ಉಪಸ್ಥಿತರಿದ್ದರು.

ಅನುದಾನ ಒದಗಿಸಿ
ಸತ್ತಿಕಲ್ಲು ಸರಕಾರಿ ಪ್ರಾಥಮಿಕ ಶಾಲೆಯ ಜಮೀನಿನ ನಕ್ಷೆ ಪಹಣಿ ಪತ್ರ ಆಗಿಲ್ಲ, ನೆಟ್ಲ ಮುಟ್ನೂರು ಮನೆ ನಿವೇಶನಕ್ಕೆ ಮೀಸಲಿಟ್ಟ ಜಮೀನು ಸರ್ವೆ ನಡೆಸಬೇಕು. ಪ್ರಾಕೃತಿಕ ವಿಕೋಪ ಯೋಜನೆಯಡಿ ಕೈಗೊಂಡ ತುರ್ತು ಕಾಮಗಾರಿಗಳಿಗೆ ಅನುದಾನ ಒದಗಿಸಬೇಕು ಎಂದು ಜಿ.ಪಂ. ಸದಸ್ಯೆ ಮಂಜುಳಾ ಮಾವೆ ಆಗ್ರಹಿಸಿದರು.

ಅಕ್ರಮ ಸಾರಾಯಿ
ತಾ.ಪಂ. ಸದಸ್ಯ ಉಸ್ಮಾನ್‌ ಕರೋಪಾಡಿ ಮಾತನಾಡಿ, ಕರೋಪಾಡಿಯಲ್ಲಿ ಕಳೆದ 1 ವರ್ಷದಿಂದ ಸಾರಾಯಿ ಅಕ್ರಮ ಅಂಗಡಿ ತೆರೆಯಲಾಗಿದೆ. ಇಲ್ಲಿನ ಬಹುತೇಕ ಅಂಗಡಿಗಳಲ್ಲಿ ಸಾರಾಯಿ ಅಕ್ರಮ ಮಾರಾಟ ಮಾಡಲಾಗುತ್ತದೆ ಎಂದು ಆರೋಪಿಸಿದರು. ಇದಕ್ಕೆ ಅಬಕಾರಿ ಇಲಾಖೆ ಸಹಕಾರ ನೀಡುತ್ತಿದೆ ಎಂದು ತಾ.ಪಂ. ಸದಸ್ಯ ಆದಂ ಕುಂಞಿ ಬೆಂಬಲಿಸಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next