ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದಿಲ್ಲೊಂದು ಸಮಸ್ಯೆಗಳನ್ನು ತಂದು ಜನತೆಗೆ ತೊಂದರೆ ಉಂಟು ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಪ್ರಸ್ತುತ ಹೊಸದಾದ ಸಮಸ್ಯೆಯೊಂದನ್ನು ತಂದು ಜನರ ಜೀವದ ಜತೆ ಚೆಲ್ಲಾಟವಾಡಲು ಹೊರಟಿದೆ. ಮಂಗಳೂರು-ಬಿ.ಸಿ.ರೋಡ್ ಚತುಷ್ಪಥ ಹೆದ್ದಾರಿಯ ಡಿವೈಡರ್ ಮಧ್ಯೆ ಗಿಡ ನೆಡುವ ಉದ್ದೇಶದಿಂದ ಹೊಂಡಗಳನ್ನು ತೆಗೆಯಲಾಗಿದ್ದು, ಗಿಡಗಳನ್ನು ನೆಡದೆ ಹೊಂಡ ಹಾಗೇ ಇರುವುದರಿಂದ ಅದಕ್ಕೆ ಬಿದ್ದು ಕೈಕಾಲುಗಳಿಗೆ ಗಂಭೀರ ಗಾಯ ಮಾಡಿಕೊಂಡ ಘಟನೆಗಳು ನಡೆದಿದೆ.
ಡಿವೈಡರ್ ಮಧ್ಯೆ ಮಳೆಗಾಲದ ಆರಂಭ ದಲ್ಲೇ ಸುಮಾರು ನಾಲ್ಕೈದು ಅಡಿಗಳ ಅಂತರದಲ್ಲಿ ಸುಮಾರು ಒಂದೆರಡು ಅಡಿ ಆಳಕ್ಕೆ ಹೊಂಡ ತೆಗೆಯಲಾಗಿದ್ದು, ಜನತೆ ವಾಹನಗಳನ್ನು ತಪ್ಪಿಸಿಕೊಂಡು ಹೆದ್ದಾರಿ ದಾಟುವ ಸಂದರ್ಭದಲ್ಲಿ ಹೊಂಡಗಳಿರುವುದು ತಿಳಿಯದೆ ಹೊಂಡಕ್ಕೆ ಬೀಳುತ್ತಿದ್ದಾರೆ. ಇದರಿಂದಾಗಿ ಈಗಾಗಲೇ ಎರಡು ಘಟನೆ ಗಳು ನಡೆದಿರುವುದು ತಿಳಿದುಬಂದಿದ್ದು, ಗಮನಕ್ಕೆ ಬಾರದೆ ಸಾಕಷ್ಟು ಘಟನೆಗಳು ವರದಿಯಾಗಿರುವ ಸಾಧ್ಯತೆ ಇದೆ.
ತುಂಬೆಯಲ್ಲಿ ಎರಡು ಘಟನೆ ತುಂಬೆಯ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮಡಂತ್ಯಾರು ಮೂಲದ ಕಾರ್ಮಿಕನೋರ್ವ ನ. 10ರಂದು ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ತುಂಬೆ ಜಂಕ್ಷನ್‌ನಲ್ಲಿ ಹೆದ್ದಾರಿ ಕ್ರಾಸ್ ಮಾಡುವ ಸಂದರ್ಭ ಡಿವೈಡರ್‌ನಲ್ಲಿ ಅವರ ಒಂದು ಕಾಲು ಹೊಂಡ ಹಾಗೂ ಮತ್ತೂಂದು ಕಾಲು ಹೆದ್ದಾರಿಗೆ ಚಾಚಿ ಬಿದ್ದಿದ್ದು, ಅವರ ಕಾಲಿನ ಮೇಲೆ ಬಸ್ಸು ಹರಿದು ಗಂಭೀರ ಗಾಯಗೊಂಡು ಪ್ರಸ್ತುತ ಅವರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನ. 16ರಂದು ಕಡೆಗೋಳಿಯಲ್ಲಿ ಸ್ಥಳೀಯ ಯುವಕನೋರ್ವ ಅದೇ ರೀತಿ ಹೊಂಡಕ್ಕೆ ಬಿದ್ದು ಗಾಯವಾಗಿದೆ ಎನ್ನಲಾಗಿದೆ.
ಮಳೆಗಾಲ ಪ್ರಾರಂಭದಲ್ಲೇ ಹೊಂಡ ಮಳೆಗಾಲ ಪ್ರಾರಂಭದಲ್ಲೇ ಈ ರೀತಿ ಡಿವೈಡರ್ ಮಧ್ಯೆ ಹೊಂಡ ತೆಗೆದಿದ್ದು, ಇನ್ನೂ ಗಿಡಗಳನ್ನು ನೆಟ್ಟಿಲ್ಲ. ಗಿಡಗಳನ್ನು ನೆಡುವುದಿಲ್ಲವೆಂದಾದರೆ ಹೊಂಡಗಳನ್ನು ಯಾಕೆ ತೆಗೆಯಲಾಗಿದೆ ಎಂಬ ಪ್ರಶ್ನೆಯೂ
ಹುಟ್ಟಿಕೊಂಡಿದೆ. ಪ್ರಸ್ತುತ ಹೊಂಡವನ್ನು ಹುಲ್ಲು ಆಚರಿಸಿದೆ.
ಬಿ.ಸಿ.ರೋಡ್-ಮಂಗಳೂರು ಹೆದ್ದಾರಿ ಮಧ್ಯೆ ಬೀದಿದೀಪಗಳನ್ನು ಹಾಕುವ ಬೇಡಿಕೆ ಹಾಗೇ ಇದ್ದು, ಕನಿಷ್ಠ ಪಕ್ಷ ಬೀದಿದೀಪ ಇದ್ದರೂ ಹೊಂಡ ಗಮನಕ್ಕೆ ಬರುತ್ತದೆ. ಜಂಕ್ಷನ್ ಪ್ರದೇಶಗಳಲ್ಲಿ ರೋಡ್ ಕ್ರಾಸ್ ಮಾಡುವುದಕ್ಕೆ ಝಿಬ್ರಾ ಕ್ರಾಸ್‌ನಂತಹ
ವ್ಯವಸ್ಥೆಗಳು ಇಲ್ಲದೇ ಇರುವುದರಿಂದ ಜನರು ಡಿವೈಡರ್ ಹತ್ತಿಯೇ ಹೆದ್ದಾರಿ ದಾಟುವ ಸ್ಥಿತಿ ಇದೆ ಎಂಬ ಆರೋಪಗಳು
ಕೇಳಿಬರುತ್ತಿದೆ.
ಸೂಕ್ತ ಕ್ರಮಕ್ಕೆ ಸೂಚನೆ
ಗಿಡ ನೆಡುವ ಉದ್ದೇಶದಿಂದ ಹೆದ್ದಾರಿ ಮಧ್ಯೆ ಹೊಂಡ ತೆಗೆದು ಗಿಡ ನೆಡದೆ ಹಾಗೇ ಬಿಟ್ಟು ತೊಂದರೆಯಾಗುತ್ತಿರುವ ಕುರಿತು ಸಂಬಂಧಪಟ್ಟ ಎನ್‌ಎಚ್‌ಐಗೆ ಗಮನಕ್ಕೆ ತಂದು ಸೂಕ್ತ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಸೂಚನೆ ನೀಡುತ್ತೇನೆ.
ಮುಲ್ಲೈ ಮುಗಿಲನ್,
ದ.ಕ.ಜಿಲ್ಲಾಧಿಕಾರಿಗಳು
ಎನ್‌ಎಚ್‌ಎಐ ಸ್ಪಂದನೆ ಇಲ್ಲ ಗ್ರಾ.ಪಂ.ನಿಂದ ಹೆದ್ದಾರಿ ಪ್ರಾಧಿಕಾರಕ್ಕೆ ಯಾವುದೇ ದೂರು, ಮನವಿ ನೀಡಿದರೂ ಸ್ಪಂದನೆಯೇ ಇಲ್ಲವಾಗಿದ್ದು, ಪ್ರಸ್ತುತ ಡಿವೈಡರ್ ಮಧ್ಯೆ ಹೊಂಡ ತೆಗೆದು ಜನರ ಜೀವದ ಜತೆ ಚೆಲ್ಲಾಟವಾಡಲು ಹೊರಟಿದ್ದಾರೆ. ನಮ್ಮ ಗ್ರಾಮ
ವ್ಯಾಪ್ತಿಯಲ್ಲಿ ಈಗಾಗಲೇ ಇಬ್ಬರು ಯುವಕರು ಬಿದ್ದು ಗಾಯ ಮಾಡಿಕೊಂಡ ಘಟನೆಗಳು ನಡೆದಿದೆ.
ಪ್ರವೀಣ್ ಬಿ. ತುಂಬೆ, ಸದಸ್ಯರು, ಗ್ರಾ.ಪಂ. ತುಂಬೆ
*ಕಿರಣ್ ಸರಪಾಡಿ