ಬಂಟ್ವಾಳ : ಯುವ ಜನತೆ ಓದುವ ಹವ್ಯಾಸ ಬೆಳೆಸಿಕೊಳ್ಳುವ ಮೂಲಕ ಸಮಾಜಕ್ಕೆ ಉತ್ತಮ, ಆರೋಗ್ಯಕರ ಚಿಂತನೆ ನೀಡ ಬೇಕಾಗಿದೆ. ಗ್ರಂಥಾಲಯಗಳು ಸುದೀರ್ಘ ಅವಧಿಯಿಂದ ಜ್ಞಾನದ ಕೊಡುಗೆ ನೀಡಿವೆ. ಆಧುನಿಕ ವ್ಯವಸ್ಥೆಯಲ್ಲಿ ಹೊಸತನಕ್ಕೆ ತೆರೆದು ಕೊಳ್ಳುವುದು ಅವಶ್ಯ ಎಂದು ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ನ. 18ರಂದು ತಾ.ಪಂ. ಎಸ್‌ಜಿ ಎಸ್‌ವೈ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು, ಶಾಖಾ ಗ್ರಂಥಾಲಯ ಬಂಟ್ವಾಳ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ, ಪುಸ್ತಕ ಪ್ರದರ್ಶನ, ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ, ಗ್ರಂಥಾಲಯ ಸಪ್ತಾಹದ ಮೂಲಕ ಜನರಲ್ಲಿ ಓದುವ ಅಭಿರುಚಿ ಬೆಳೆಸುವ ಕಾರ್ಯಕ್ರಮ ನಿಜವಾದ ಸಾಮಾಜಿಕ ಕಾಳಜಿಯ ಕೆಲಸ. ಡಿಜಿಟಲ್ ಓದುವಿಕೆ, ಕನಿಷ್ಠ ಸಮಯದಲ್ಲಿ ಗರಿಷ್ಠ ಅರ್ಹ ವಿಷಯಗಳಿಗೆ ಸೀಮಿತವಾಗಿ ಓದಿಸಿಕೊಳ್ಳುತ್ತದೆ ಎಂದು ವಿವರಿಸಿದರು.
ಸಾಹಿತಿ ಡಾ| ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರನ್ನು ಸಮ್ಮಾನಿಸಲಾಯಿತು. ಅವರು ಮಾತನಾಡಿ, ಪುಸ್ತಕಗಳ ಓದುವಿಕೆ ಮಾನವತೆ, ಹೃದಯವಂತಿಕೆ, ಪ್ರೀತಿಯನ್ನು ಕಲಿಸುತ್ತದೆ. ಆಧುನಿಕ ತಂತ್ರಜ್ಞಾನದ ಓದು ವಿವರ ನೀಡುವ ಶಬ್ದಕೋಶವಾಗಿದೆ. ಓದುವ ಮೂಲಕ ಮಕ್ಕಳಿಗೆ ಅದರ ಹವ್ಯಾಸ ಹತ್ತಿಸಬೇಕು ಎಂದು ಕರೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಮಾತನಾಡಿ, ಪ್ರತೀ ಶಾಲೆಯಲ್ಲಿ ಕಪಾಟಿನೊಳಗಿರುವ ಪುಸ್ತಕಗಳನ್ನು ಓದುವಂತೆ ಇಲಾಖೆಯ ವತಿಯಿಂದ ಪ್ರಯತ್ನ ನಡೆಸಲಾಗುವುದು ಎಂದರು. ಪುಸ್ತಕ ಪ್ರದರ್ಶನವನ್ನು ತಾ.ಪಂ. ಉಪಾಧ್ಯಕ್ಷ ಅಬ್ಟಾಸ್ ಅಲಿ ಉದ್ಘಾಟಿಸಿದರು. ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ ಉಪಸ್ಥಿತರಿದ್ದರು. ಜಯಲಕ್ಷ್ಮೀ ಹಾಗೂ ಬಳಗ ನಾಡಗೀತೆ ಹಾಡಿದರು. ವಿವಿಧ ಗ್ರಾ.ಪಂ. ವ್ಯಾಪ್ತಿಯ ಗ್ರಂಥಾಲಯ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿರುವ ಮಾನಸಾ, ಜಯಲಕ್ಷ್ಮೀ, ವಿಮಲಾ, ಜಯಲಕ್ಷ್ಮೀ, ಗುಣವತಿ, ಜಯಂತಿ, ಉಮಾವತಿ ಅವರನ್ನು ಸಮ್ಮಾನಿಸಲಾಯಿತು. ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ಮಮತಾ ರೈ ಪ್ರಸ್ತಾವಿಸಿ, ಸ್ವಾಗತಿಸಿದರು. ಶಾಖಾ ಗ್ರಂಥಾಲಯ ಸಹಾಯಕ ಗ್ರಂಥಪಾಲಕಿ ನಮಿತಾ ಬಿ. ನಿರೂಪಿಸಿದರು
ಗ್ರಂಥಗಳು ಜ್ಞಾನ ಸಂಪತ್ತು ನಾವು ಹಲವು ಪತ್ರಿಕೆಗಳನ್ನು ಓದುತ್ತೇವೆ. ವೈವಿಧ್ಯ ವಿಚಾರಗಳು
ದೈನಂದಿನ ವಿಷಯಗಳ ಮಾಹಿತಿ ಪಡೆಯುತ್ತೇವೆ. ಗ್ರಂಥಗಳು ಕ್ರೋಡೀಕೃತ ಜ್ಞಾನ ಸಂಪತ್ತು, ಸಾರಸಂಗ್ರಹಿತ ಅಕ್ಷರ ಜ್ಞಾನಗಳಾಗಿವೆ.
–
ರಾಜೇಶ್ ನಾೖಕ್
ಉಳಿಪ್ಪಾಡಿಗುತ್ತು, ಶಾಸಕರು