ಬಂಟ್ವಾಳ: ಕೋವಿಡ್ 19 ವೈರಸ್ ಆತಂಕದಿಂದ ಎಲ್ಲೆಡೆ ಲಾಕ್‌ಡೌನ್ ಘೋಷಿಸಲಾಗಿದ್ದು, ಬಂಟ್ವಾಳ ತಾಲೂಕಿನ ಬಂದ್‌ನ ಸ್ಥಿತಿ ಮುಂದುವರಿದಿದೆ. ಶುಕ್ರವಾರ ಬೆಳಗ್ಗಿನ ಹೊತ್ತು ಎಂದಿಗಿಂತ ಕೊಂಚ ಹೆಚ್ಚಿನ ಮಂದಿ ಅಗತ್ಯ ವಸ್ತುಗಳನ್ನು ಖರೀದಿಸಿ ತೆರಳಿದ್ದಾರೆ.
ಪೇಟೆ, ಗ್ರಾಮೀಣ ಭಾಗಗಳಲ್ಲೂ ಬೆಳಗ್ಗಿನ ಹೊತ್ತು ಕೊಂಚ ಚಟುವಟಿಕೆ ಕಂಡು ಬಂದರೂ ಮಧ್ಯಾಹ್ನ 12ರ ಬಳಿಕ ಸಂಪೂರ್ಣ ಸ್ತಬ್ಧವಾಗಿತ್ತು. ಬಳಿಕ ಪೊಲೀಸರು ರೌಂಡ್ಸ್ ಹೊಡೆದು ಜನರನ್ನು ಎಚ್ಚರಿಸುವ ಕಾರ್ಯ ನಡೆಸಿದರು.
ಮೆಡಿಕಲ್ ಮಳಿಗೆಗಳು ಸಂಜೆವರೆಗೂ ತೆರೆದಿದ್ದರೆ, ಕೆಲವು ಪೆಟ್ರೋಲ್ ಬಂಕ್ ಮಧ್ಯಾಹ್ನವೇ ಬಂದ್ ಆದರೆ ಇನ್ನು ಕೆಲವು ಸಂಜೆವರೆಗೂ ಕಾರ್ಯಚರಿಸಿದ್ದವು. ಬಹು ತೇಕ ಹೊಟೇಲ್‌ಗಳು ಬಂದ್ ಆಗಿದ್ದರೆ, ಒಂದೆರಡು ಮಧ್ಯಾಹ್ನ 12ರ ತನಕ ಪಾರ್ಸೆಲ್ ಆಹಾರ ನೀಡಿತ್ತು.
ತಾಲೂಕಿನ ಬಿ.ಸಿ.ರೋಡು, ಬಂಟ್ವಾಳ ಪೇಟೆ, ವಿಟ್ಲ, ಫರಂಗಿಪೇಟೆ ಪೇಟೆ, ಮೆಲ್ಕಾರ್, ಕಲ್ಲಡ್ಕ, ಮಾಣಿ, ಸಿದ್ಧಕಟ್ಟೆ, ವಾಮದಪದವು, ಪುಂಜಾಲಕಟ್ಟೆ ಮೊದಲಾದ ಪ್ರದೇಶಗಳು ಸಹಿತ ಗ್ರಾಮೀಣ ಭಾಗಗಳಲ್ಲೂ ಜನತೆ ಆಹಾರ ವಸ್ತುಗಳ ಖರೀದಿ ನಡೆಸಿದರು. ಗ್ರಾಮೀಣ ಭಾಗದಲ್ಲಿ ಅಕ್ಕಿ ಸಹಿತ ದಿನಸಿ ಸಾಮಗ್ರಿಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಜನತೆ ಅನಿವಾರ್ಯವಾಗಿ ಪೇಟೆ ಕಡೆಗೆ ಹೆಜ್ಜೆ ಹಾಕಿದ್ದರು.
ಪೊಲೀಸ್ ಇಲಾಖೆಯ ಜತೆ ಕಂದಾಯ, ಆರೋಗ್ಯ ಇಲಾಖೆ, ಪುರಸಭೆ ಸಹಿತ ಇತರ ಇಲಾಖೆಗಳ ಅಧಿಕಾರಿ, ಸಿಬಂದಿ ಅಹಿತಕರ ಘಟನೆಗಳು, ಜನತೆ ಮನೆಯಿಂದ ಹೊರಗೆ ಬರದಂತೆ ಎಚ್ಚರಿಕೆ ವಹಿಸುತ್ತಿದ್ದರು.
ಬಂಟ್ವಾಳ ಶಾಸಕರ ಕಚೇರಿಯಲ್ಲಿ ತುರ್ತು ಸ್ಪಂದನ ತಂಡ ಕಾರ್ಯ ಮುಂದುವರಿಸಿದ್ದು, ಕೆಲಸಕ್ಕೆಂದು ಬಂದು ಕಲ್ಲಡ್ಕದಲ್ಲಿ ಬಾಕಿಯಾಗಿದ್ದ ಕುಟುಂಬ ವೊಂದಕ್ಕೆ ಈ ತಂಡದ ಮೂಲಕ ತಹಶೀಲ್ದಾರ್ ನೇತೃತ್ವದಲ್ಲಿ ವ್ಯವಸ್ಥೆ ಕಲ್ಪಿಸಲಾಯಿತು. ಕಲ್ಲಡ್ಕದಲ್ಲಿ ಟೈಲರ್ ಧೀರಜ್ ನೇತೃತ್ವದ ಯುವಕರ ತಂಡ ಮಾಸ್ಕ್ ಹೊಲಿದು ವಿತರಿಸುವ ಕಾರ್ಯ ನಡೆಸಿತು.
ಆಶಾ ಕಾರ್ಯಕರ್ತೆಯರ ಮನೆ ಭೇಟಿ ಮುಂದುವರಿದಿದ್ದು, ವಿದೇಶದಿಂದ ಬಂದು ಗೃಹ ಬಂಧನದಲ್ಲಿದ್ದವರ ಕುರಿತು ಪೊಲೀಸ್, ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಿತ್ತು.