Advertisement
ಮೊದಲು ಕಲ್ಲಡ್ಕ ಪೇಟೆ ಎಂದರೆ ಎಲ್ಲ ಕಡೆಯ ಹಾಗೆಯೇ ಒಂದು ಸಾಮಾನ್ಯ ಅರೆಪಟ್ಟಣ. ಕಲ್ಲಡ್ಕದ ಕೇಟಿ, ಶ್ರೀ ರಾಮ ಶಾಲೆ, ದೂರದಿಂದಲೇ ಗಮನ ಸೆಳೆಯುವ ಅಲ್ಲಿನ ಮಸೀದಿ ಮತ್ತಿತರ ಕಾರಣಗಳಿಂದ ಜನಪ್ರಿಯತೆಯನ್ನು ಪಡೆದಿತ್ತು. ಒಳ್ಳೆಯ ಬ್ಯುಸಿನೆಸ್ ಸೆಂಟರ್ ಆಗಿ ಬೆಳೆದಿತ್ತು. ಈಗ ಬಿ.ಸಿ.ರೋಡ್-ಅಡ್ಡಹೊಳೆ ರಾ. ಹೆದ್ದಾರಿ ಕಾಮಗಾರಿ ಆರಂಭವಾದ ಬಳಿಕ ಆ ರಸ್ತೆಯಲ್ಲಿ ಹೋಗುವವರು ಎಲ್ಲಿದೆ ಕಲ್ಲಡ್ಕ ಎಂದು ಹುಡುಕಬೇಕಾಗಿದೆ! ಎರಡೂವರೆ ಕಿ.ಮೀ. ಉದ್ದದ ಫ್ಲೈ ಓವರ್ ಇಡೀ ಕಲ್ಲಡ್ಕ ಪೇಟೆಯನ್ನು ಅಕ್ಷರಶಃ ನುಂಗಿ ಹಾಕಿದೆ. ಅದೆಷ್ಟೋ ಜನ ಇಲ್ಲಿಗೆ ಇಷ್ಟೊಂದು ದೊಡ್ಡ ಫ್ಲೈ ಓವರ್ ಬೇಕಿತ್ತಾ ಎಂಬ ಪ್ರಶ್ನೆ ಇಡುತ್ತಾರೆ.
ಹೆದ್ದಾರಿ ಕಾಮಗಾರಿ ಪೇಟೆಯನ್ನು ಎಲ್ಲ ರೀತಿಯಿಂದಲೂ ಹಿಂಡಿ ಹಿಪ್ಪೆ ಮಾಡಿದ್ದು, ಹತ್ತಾರು ಸಮಸ್ಯೆಗಳ ಮೂಲಕ ಕಲ್ಲಡ್ಕಕ್ಕೆ ನೆಗೆಟಿವ್ ಇಮೇಜ್ ತಂದುಕೊಟ್ಟಿದೆ. ಈಗಾಗಲೇ ಹಲವಾರು ಟ್ರೋಲ್‌ಗಳ ಮೂಲಕ ಕಲ್ಲಡ್ಕ ಸುದ್ದಿಯಾಗುತ್ತಿದ್ದು, ಮಳೆಯಾದರೆ ಕೆಸರು, ಬಿಸಿಲಾದರೆ ಧೂಳು ಎಂಬ ಸ್ಥಿತಿ ನಿರ್ಮಾಣಗೊಂಡಿದೆ.
Related Articles
Advertisement
ಕಲ್ಲಡ್ಕ ಪೇಟೆಯಲ್ಲಿ ಕೆಸರು ಹಾಗೂ ಹೊಂಡಮಯ ಹೆದ್ದಾರಿ.- ಇಲ್ಲಿನ ಹೆದ್ದಾರಿ ತುಂಬಾ ಕೆಸರು ತುಂಬಿ ನಡೆದಾಡುವುದೇ ಕಷ್ಟವಾಗಿದೆ. ಬಿಸಿಲಿದಾದರೆ ಧೂಳು.
- ಚರಂಡಿಗಳನ್ನು ಅಗೆದು ಮಣ್ಣು ತುಂಬಿರುವುದರಿಂದ ಮಳೆ ಬಂದರೆ ಕೃತಕ ನೆರೆ ಸೃಷ್ಟಿಯಾಗುತ್ತಿದೆ.
- ಹೆದ್ದಾರಿ ಅಂಚಿನಲ್ಲಿದ್ದ ಮನೆಯಂಗಳ, ಕೃಷಿ ಭೂಮಿಗಳಲ್ಲಿ ಮಣ್ಣು ತುಂಬಿಕೊಂಡಿದೆ.
- ಹಿಂದೆ ಇದ್ದ ಒಳರಸ್ತೆಗಳನ್ನು ಅಗೆದು ಹಾಕಿ ಈಗ ಕೆಸರಿನಿಂದ ತುಂಬಿ ವಾಹನಗಳು ಹೂತುಹೋಗುವ ಅಪಾಯ ಎದುರಾಗಿದೆ.
- ಕೆಲವು ಮನೆಗಳು, ಅಂಗಡಿಗಳಿಗೆ ಹೋಗು ವುದಕ್ಕೆ ದಾರಿಯೂ ಇಲ್ಲದ ಸ್ಥಿತಿ ಇದೆ.
- ವಾಹನಗಳನ್ನು ಎಲ್ಲೂ ಕೂಡ ನಿಲ್ಲಿಸಲು ಸಾಧ್ಯವಿಲ್ಲ. ಫ್ಲೈಓವರ್ ಅಡಿಯಲ್ಲಿ ನಿಲ್ಲಿಸಿದರೆ ಸಂಜೆ ಹೊತ್ತಿಗೆ ಒಂದೋ ಕೆಸರುಮಯ, ಇಲ್ಲವೇ ಧೂಳುಮಯ!
- ದ್ವಿಚಕ್ರ ವಾಹನದಲ್ಲಿ ಹೋದರೆ ಇತರ ವಾಹನಗಳಿಂದ ಕೆಸರು ನೇರವಾಗಿ ಸವಾರರ ಮೇಲೆ ಬೀಳುತ್ತದೆ.
- ಪ್ರಯಾಣಿಕರಿಗೆ ಬಸ್ಸಿಗೆ ಕಾಯಲು ಸರಿಯಾದ ವ್ಯವಸ್ಥೆಗಳೇ ಇಲ್ಲವಾಗಿದೆ.
- ಆಟೋ ರಿಕ್ಷಾಗಳು ಕೆಸರಿನಲ್ಲೇ ನಿಲ್ಲಬೇಕಾದ ಸ್ಥಿತಿ ಇದೆ.
ಕಲ್ಲಡ್ಕದಲ್ಲಿ ಹಲವು ವಿದ್ಯಾಸಂಸ್ಥೆ ಗಳಿದ್ದು, ಬೆಳಗ್ಗೆ ಹಾಗೂ ಸಂಜೆ ಮಕ್ಕಳು ಕೆಸರಿನಲ್ಲಿ ಹೆದ್ದಾರಿ ದಾಟುವುದನ್ನು ಕಂಡರೆ ಎಂತವರ ಮನಸ್ಸು ಕೂಡ ಕರಗಲೇಬೇಕು. ಕೆಸರನ್ನು ತಪ್ಪಿಸಲೆಂದು ಒದ್ದಾಡುವ ಸ್ಥಿತಿ, ಕೊನೆಗೆ ಆಯತಪ್ಪಿ ಕಾಲು ತುಂಬಾ ಕೆಸರು ತುಂಬಿಕೊಂಡು ಹೋಗಬೇಕಾದ ಸ್ಥಿತಿ ಇದೆ. ಹೀಗಾಗಿ ಕನಿಷ್ಠ ಪಕ್ಷ ಈ ವಿದ್ಯಾರ್ಥಿಗಳ ಮೇಲಾದರೂ ಸಂಬಂಧಪಟ್ಟ ಗುತ್ತಿಗೆ ಸಂಸ್ಥೆ ಕನಿಕರ ತೋರಬೇಕಿದೆ. ಪೊಲೀಸರ ಸ್ಥಿತಿ ಇನ್ನೂ ಭಿನ್ನ!
ಸದ್ಯದ ಪರಿಸ್ಥಿತಿಯಲ್ಲಿ ಕಲ್ಲಡ್ಕದಲ್ಲಿ ವಾಹನಗಳು ನಿಧಾನವಾಗಿ ಸಾಗುವುದರಿಂದ ಪದೇ ಪದೇ ಟ್ರಾಫಿಕ್ ಜಾಮ್ ಉಂಟಾಗುವ ಸ್ಥಿತಿ ಇದೆ. ಹೀಗಿರುವಾಗ ಬೆಳಗ್ಗಿನಿಂದ ಕತ್ತಲಾಗುವವರೆಗೂ ಟ್ರಾಫಿಕ್ ಪೊಲೀಸರ ನಿಯೋಜನೆ ಅನಿವಾರ್ಯವಾಗಿದೆ. ಹೀಗಾಗಿ ಅದೇ ಕೆಸರು ತುಂಬಿದ ರಸ್ತೆ ಬದಿ ದಿನವಿಡೀ ನಿಲ್ಲಬೇಕಾದ ಸ್ಥಿತಿ ಪೊಲೀಸರದ್ದಾಗಿದೆ. ರಸ್ತೆ ನಾಳೆ ಸರಿಹೋಗಬಹುದು, ಬದುಕು?
ಫ್ಲೈ ಓವರ್‌ಗಾಗಿ ಕಲ್ಲಡ್ಕದ ಜನರು ಮಾಡಿದಷ್ಟು ತ್ಯಾಗವನ್ನು ಯಾರೂ ಮಾಡಿದಂತಿಲ್ಲ. ಜಾಗ, ಅಂಗಡಿ, ವ್ಯಾಪಾರ ಎಲ್ಲವನ್ನೂ ಅವರು ಕಳೆದುಕೊಂಡಿದ್ದಾರೆ. ನಾಳೆ ಫ್ಲೈ ಓವರ್ ಕಾಮಗಾರಿ ಮುಗಿದ ಮೇಲಾದರೂ ಅವರ ಹಳೆ ಜೀವನ ಮರಳಿ ಬರುತ್ತದಾ ಎಂದು ಕೇಳಿದರೆ, ಖಂಡಿತಾ ಇಲ್ಲ. ಯಾಕೆಂದರೆ, ಇಲ್ಲಿನ ಫ್ಲೈ ಓವರ್ 2.1 ಕಿ.ಮೀ. ಇದೆ. ಅಂದರೆ ಕಲ್ಲಡ್ಕದ ಎರಡೂ ಪೇಟೆಗಳ ನೆಲವನ್ನು ಸ್ಪರ್ಶಿಸದೆಯೇ ಅದು ಮೇಲಿನಿಂದ ಹಾದು ಹೋಗುತ್ತದೆ. ಹಿಂದೆ ಕಲ್ಲಡ್ಕ ಪೇಟೆಯಲ್ಲಿ ನೂರಾರು ಪ್ರವಾಸಿಗರು ವಿರಾಮ ತೆಗೆದುಕೊಳ್ಳುತ್ತಿದ್ದರು. ಆಗ ಅಲ್ಲಿನ ಹಲವು ಅಂಗಡಿಗಳಿಗೆ ವ್ಯಾಪಾರ ಆಗುತ್ತಿತ್ತು. ಆದರೆ, ಮುಂದೆ ಅಲ್ಲಿ ಸ್ಟಾಪೇ ಇಲ್ಲ. ಈಗಿರುವ ಅಂಗಡಿಗಳಿಗೆ ಹೋಗಲು ಸರಿಯಾದ ಮಾರ್ಗವಿಲ್ಲ. ಕೆಲವು ಮನೆಗಳ ಅಂಗಳಕ್ಕೇ ಹೆದ್ದಾರಿ ಬಂದಿದೆ. ಜಾಗ ಕಳೆದುಹೋಗಿದೆ. ಅದ್ಯಾವುದೂ ಮರಳಿಬರುವುದಿಲ್ಲ! ವರದಿ: ಕಿರಣ್ ಸರಪಾಡಿ
ಚಿತ್ರ: ಸತೀಶ್ ಇರಾ