ಬಂಟ್ವಾಳ: ಕೋವಿಡ್ 19 ಸೋಂಕು ದೃಢಪಟ್ಟ ಬಂಟ್ವಾಳ ಕಸ್ಬಾ ಗ್ರಾಮದ ನಿಯಂತ್ರಿತ ಪ್ರದೇಶ ಸಹಿತ ಬಂಟ್ವಾಳ ಪೇಟೆ ಪ್ರದೇಶದಲ್ಲಿ ತಾಲೂಕು ಆಡಳಿತ ಹಾಗೂ ಪುರಸಭೆಯ ಸೂಚನೆಯಂತೆ ಬಂಟ್ವಾಳ ಅಗ್ನಿಶಾಮಕ ದಳದವರಿಂದ ವೈರಸ್ ನಾಶದ ಹಿನ್ನೆಲೆಯಲ್ಲಿ ರಾಸಾಯನಿಕ ಸಿಂಪಡಣೆ ಕಾರ್ಯ ಕಳೆದ ಕೆಲವು ದಿನಗಳಿಂದ ನಡೆಯುತ್ತಿದೆ.
ಬಂಟ್ವಾಳ ಅಗ್ನಿಶಾಮಕ ದಳದ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರಾಜೀವ್ ಹಾಗೂ ಅಗ್ನಿಶಾಮಕ ಪ್ರಮುಖ್ ಮೀರ್ ಮಹಮ್ಮದ್ ಗೌಸ್ ಅವರ ನೇತೃತ್ವದಲ್ಲಿ ಈ ಕಾರ್ಯ ನಡೆಯುತ್ತಿದ್ದು, ಶುಕ್ರವಾರ ಬಂಟ್ವಾಳ ಪೇಟೆ, ಕೆಳಗಿನ ಪೇಟೆ ಪರಿಸರದಲ್ಲಿ ರಾಸಾಯನಿಕ ಸಿಂಪಡಿಸಡಿಲಾಗಿದೆ.
ಕಸ್ಬಾ ಗ್ರಾಮದ ನಿಯಂತ್ರಿತ ಪ್ರದೇಶಕ್ಕೆ ಅಗ್ನಿಶಾಮಕ ವಾಹನ ತೆರಳುವುದು ಅಸಾಧ್ಯವಾಗಿದ್ದು, ಹೀಗಾಗಿ ಸುಮಾರು 20 ಪೈಪ್‌ಗ್ಳನ್ನು ಬಳಸಿ ಸಿಂಪಡಿಸಲಾಗಿದೆ. ಈ ರಾಸಾಯನಿಕವು ಕ್ಲೋರಿನ್, ಫಿನಾಯಿಲ್, ಬ್ಲಿಚಿಂಗ್ ಪೌಡರ್ ಒಳಗೊಂಡಿರುತ್ತದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ತಹಶೀಲ್ದಾರ್ ರಶ್ಮೀ ಎಸ್.ಆರ್., ಪುರಸಭಾ ಮುಖ್ಯಾಧಿಕಾರಿ ಲೀಲಾ ಬ್ರಿಟ್ಟೊ ಸೂಚನೆಯಂತೆ, ಚೀಫ್ ಫೈರ್ ಆಫೀಸರ್ ನಿರ್ದೇಶನದಂತೆ ಅಗ್ನಿಶಾಮಕ ದಳದ ಸಿಬಂದಿ ಈ ಕಾರ್ಯ ನಡೆಸಿದ್ದಾರೆ. ಬಂಟ್ವಾಳ ಕಸ್ಬಾ ಗ್ರಾಮದಲ್ಲಿ ಕೋವಿಡ್ 19 ಸೋಂಕು ದೃಢಪಡುವ ಮುಂಚೆ 2 ಬಾರಿ, ದೃಢಪಟ್ಟ ಬಳಿಕ 6 ಬಾರಿ ಸೇರಿ 8 ಬಾರಿ ರಾಸಾಯನಿಕ ಸಿಂಪಡಿಸಲಾಗಿದೆ.