Advertisement

ಬಂಟ್ವಾಳ : ಜನತಾ ಕರ್ಫ್ಯೂಗೆ ವ್ಯಾಪಕ ಬೆಂಬಲ

11:54 PM Mar 22, 2020 | Sriram |

ಬಂಟ್ವಾಳ : ಕೋವಿಡ್‌ 19 ವೈರಸ್‌ ಮಣಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಬಂಟ್ವಾಳ ತಾಲೂಕು ಸಂಪೂರ್ಣ ಸ್ತಬ್ದವಾಗಿತ್ತು.

Advertisement

ಬಿ.ಸಿ. ರೋಡ್‌, ಕೈಕಂಬ, ಫರಂಗಿಪೇಟೆ, ಬಂಟ್ವಾಳ ಪೇಟೆ, ಮೆಲ್ಕಾರ್‌, ಕಲ್ಲಡ್ಕ ಹೀಗೆ ಎಲ್ಲೆಡೆಯೂ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್‌ ಆಗಿದ್ದವು. ಬಸ್‌ಗಳು, ಆಟೋಗಳು, ಟ್ಯಾಕ್ಸಿಗಳು ಸಂಚರಿಸದೆ ರಸ್ತೆಗಳು ಖಾಲಿ ಖಾಲಿಯಾಗಿದ್ದವು. ಜನತೆ ಒಗ್ಗಟ್ಟಿನಿಂದ ಮನೆಯಲ್ಲೇ ಕುಳಿತು ಜನತಾ ಕರ್ಫ್ಯೂವನ್ನು ಯಶಸ್ವಿ ಗೊಳಿಸಿದರು. ತಾಲೂಕಿನಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಎಂದಿನಂತೆ ಕಾರ್ಯಾಚರಿಸಿದ್ದವು.

ಸದಾ ಬಸ್‌ಗಳು ಹಾಗೂ ಪ್ರಯಾಣಿಕರಿಂದ ತುಂಬಿರು ತ್ತಿದ್ದ, ಬಿ.ಸಿ. ರೋಡ್‌ ಖಾಸಗಿ ಬಸ್‌ ನಿಲ್ದಾಣ ಸಂಪೂರ್ಣ ಖಾಲಿಯಾಗಿತ್ತು. ವಾಹನಗಳಿಂದ ತುಂಬಿರುತ್ತಿದ್ದ ರಾ.ಹೆ. 75 ವಾಹನಗಳಿಲ್ಲದೆ ಬಿಕೋ ಎನ್ನುತ್ತಿತ್ತು. ಹೆದ್ದಾರಿಗಳಲ್ಲಿ ಬೆರಳೆಣಿಕೆಯ ವಾಹನಗಳಷ್ಟೇ ಸಂಚರಿಸಿದ್ದವು.

ಬೆಳಗ್ಗಿನ ಹೊತ್ತು ಹಾಲು, ಪೇಪರ್‌ ವ್ಯವಹಾರ ಬಿಟ್ಟರೆ ಉಳಿದಂತೆ ಯಾವುದೇ ವ್ಯವಹಾರ ನಡೆಯಲಿಲ್ಲ. ಸರಕಾರಿ ಹಾಗೂ ಖಾಸಗಿ ಆಸ್ಪತ್ರೆ ಬಿಟ್ಟರೆ ಕ್ಲಿನಿಕ್‌ಗಳು ಕೂಡ ಬಂದ್‌ ಆಗಿದ್ದವು. ಆಸ್ಪತ್ರೆಗಳಲ್ಲೂ ಹೊರರೋಗಿಗಳ ಸಂಖ್ಯೆ ತೀರಾ ವಿರಳವಾಗಿತ್ತು.

ಕೆಎಸ್‌ಆರ್‌ಟಿಸಿ ಬಸ್‌ಗಳೂ ರಸ್ತೆಗಿಳಿದಿರಲಿಲ್ಲ. ಎಲ್ಲ ಬಸ್‌ಗಳನ್ನೂ ಡಿಪೋದಲ್ಲಿ ನಿಲ್ಲಿಸಲಾಗಿತ್ತು. ಸಿಬಂದಿ ಕೂಡ ರಜೆಯಲ್ಲಿದ್ದರು.

Advertisement

ಗ್ರಾಮೀಣ ಪ್ರದೇಶಗಳಲ್ಲೂ ಬೆಂಬಲ
ಜನತಾ ಕರ್ಫ್ಯೂಗೆ ನಗರ ಸಹಿತ ಗ್ರಾಮೀಣ ಭಾಗ ದಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಈವರೆಗೂ ಮುಚ್ಚದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

ಪೆಟ್ರೋಲ್‌ ಬಂಕ್‌: ತುರ್ತು ಸ್ಪಂದನೆ
ಪೆಟ್ರೋಲ್‌ ಬಂಕ್‌ಗಳಲ್ಲೂ ಬೆಂಬಲ ವ್ಯಕ್ತವಾಗಿದ್ದು, ತುರ್ತು ಅಗತ್ಯಗಳಿಗೆ ಸ್ಪಂದಿಸಬೇಕೆಂಬ ದೃಷ್ಟಿಯಿಂದ ಒಂದೆರಡು ಸಿಬಂದಿ ಕರ್ತವ್ಯದಲ್ಲಿದ್ದರು. ಆದರೆ ವಾಹನಗಳ ಸಂಖ್ಯೆ ತೀರಾ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಅವರೂ ಸುಮ್ಮನೆ ಕುಳಿತುಕೊಳ್ಳಬೇಕಿತ್ತು.

ರೋಗಿಗಳ ಸಂಖ್ಯೆ ಕಡಿಮೆ; ತುರ್ತು ಅಗತ್ಯಗಳಿಗೆ ಸ್ಪಂದನೆ
ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಅನಗತ್ಯವಾಗಿ ಆಸ್ಪತ್ರೆಗಳಿಗೂ ಭೇಟಿ ನೀಡಬೇಡಿ ಎಂದು ಕರೆ ನೀಡಲಾಗಿದ್ದು, ಆದರೆ ತುರ್ತು ಅಗತ್ಯಗಳ ದೃಷ್ಟಿಯಿಂದ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಲಭ್ಯವಾಗಿತ್ತು. ಖಾಸಗಿ ಕ್ಲಿನಿಕ್‌ಗಳು ಬಂದ್‌ ಆಗಿದ್ದರೂ ಆಸ್ಪತ್ರೆಗಳಲ್ಲಿ ಒಳ ಹಾಗೂ ಹೊರ ರೋಗಿಗಳಿಗೆ ಆರೋಗ್ಯ ಸೇವೆಯನ್ನು ನೀಡಲಾಗಿತ್ತು. ಜತೆಗೆ ವೈದ್ಯರೂ ಸಹಿತ ನರ್ಸ್‌ಗಳು, ಇತರ ಸಿಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು.

 ಶಾಂತಿಯುತ ಬೆಂಬಲ
ಜನತಾ ಕರ್ಫ್ಯೂಗೆ ಶಾಂತಿಯುತ ಬೆಂಬಲ ವ್ಯಕ್ತವಾಗಿದೆ. ತಾ|ನ ಕೇರಳ ಗಡಿ ಭಾಗದಲ್ಲಿ ಶನಿವಾರ ಕೊಂಚ ಪ್ರತಿರೋಧ ಕಂಡು ಬಂದಿದ್ದು, ಜನತೆಗೆ ಮನವರಿಕೆ ಮಾಡುವ ಕೆಲಸ ಮಾಲಾಗಿದೆ. ಅಲ್ಲಿ ರವಿವಾರ ಪರಿಸ್ಥಿತಿ ಶಾಂತಿಯುತವಾಗಿದ್ದು, ಸಂಬಂಧಪಟ್ಟವ ರಿಂದ ಮಾಹಿತಿ ಪಡೆದುಕೊಂಡಿದ್ದೇನೆ.
– ರಶ್ಮಿ ಎಸ್‌.ಆರ್‌.,ತಹಶೀಲ್ದಾರ್‌

ಬೆಳ್ತಂಗಡಿ: ಜನತಾ ಕರ್ಫ್ಯೂ ಬೆಂಬಲಿಸಿ ರವಿವಾರ ಸ್ವಯಂ ಜಾಗೃತಿಯಿಂದ ತಾಲೂಕಿನ ಪೇಟೆ, ಗ್ರಾಮೀಣ ಭಾಗ ಸಂಪೂರ್ಣ ಬಂದ್‌ ಆಗಿತ್ತು.ಮುಂಜಾನೆ ಪತ್ರಿಕೆ ವಿತರಣೆ ಹೊರತುಪಡಿಸಿ ಅಂಗಡಿ ಮುಂಗಟ್ಟು, ಹೊಟೇಲ್‌, ಬಸ್‌ ಸಹಿತ ಇತರ ವಾಹನ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿತ್ತು.

ಕೆ.ಎಸ್‌.ಆರ್‌.ಟಿ.ಸಿ. ಬಂದ್‌
ಬೆಳ್ತಂಗಡಿ, ಧರ್ಮಸ್ಥಳ ಕೆ.ಎಸ್‌.ಆರ್‌.ಟಿ.ಸಿ. ಯಾವುದೇ ವ್ಯಾಪ್ತಿಗೆ ಸಂಚಾರ ನಡೆಸಿಲ್ಲ. ಧರ್ಮಸ್ಥಳ ಡಿಪೋದಿಂದ ಹೊರಡುವ ಒಟ್ಟು 130ಕ್ಕೂ ಹೆಚ್ಚು ಟ್ರಿಪ್‌ ಸ್ಥಗಿತಗೊಳಿಸಲಾಗಿತ್ತು.

ಖಾಸಗಿ ಬಸ್‌ ಸಂಚಾರ, ಟ್ಯಾಕ್ಸಿ, ಆಟೋ, ಜೀಪುಗಳು ನಿಲ್ದಾಣವನ್ನೇ ಪ್ರವೇಶಿಸಿಲ್ಲ. ಅಪರೂಪಕ್ಕೊಂದು ಖಾಸಗಿ ವಾಹನ ಹೊರತುಪಡಿಸಿ ಪೇಟೆ ಪಟ್ಟಣ ನಿಶಬ್ಧವಾತಾವರಣದಿಂದ ಕೂಡಿತ್ತು.

ಪ್ರಯಾಣಿಕರ ಪರದಾಟವಿಲ್ಲ
ಜನತಾ ಕರ್ಫ್ಯೂ ಬಗ್ಗೆ ಸಾಮಾಜಿಕ ಜಾಲತಾಣ, ಟಿವಿ, ಪತ್ರಿಕೆಗಳಲ್ಲಿ ಜಾಗೃತಿ ಮೂಡಿಸಿದ್ದರಿಂದ ಪ್ರಯಾಣಿಕರು ಯಾರೊಬ್ಬರೂ ರಸ್ತೆಗಿಳಿಯಲಿಲ್ಲ. ಮುಂಬಯಿಯಿಂದ ಚಿಕ್ಕಮಗಳೂರಿಗೆ ಬಂದ ವ್ಯಕ್ತಿಗಳಿಬ್ಬರು ವಾಹನ ಸಂಚಾರ ವಿಲ್ಲದೆ ಮಂಗಳೂರಿಂದ ಹಾಲು ಸಾಗಾಟದ ಟ್ಯಾಂಕರ್‌ನಲ್ಲಿ ಡ್ರಾಪ್‌ ಪಡೆದರು. ಪೇಟೆಗಳಲ್ಲಿ ಜನಸಂದ‌ಣಿ ಇಲ್ಲವಾದ್ದರಿಂದ ಪೊಲೀಸ್‌ ಅಲ್ಲಲ್ಲಿ ಬಂದೋಬಸ್ತ್ ಕೈಗೊಂಡಿದ್ದರು.

ಆರೋಗ್ಯ ಕೇಂದ್ರಗಳ ಸೇವೆ
ತಾಲೂಕು ಸರಕಾರಿ ಆಸ್ಪತ್ರೆ ಹೊರತುಪಡಿಸಿ ಬೇರಾವುದೇ ಕ್ಲಿನಿಕ್‌ಗಳು ತೆರೆದಿರಲಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಚಿಕಿತ್ಸೆ ಇರಲಿಲ್ಲ. ತುರ್ತು ಸೇವೆಗಳಷ್ಟೇ ನೀಡಲಾಗಿತ್ತು.

 ಜಾಗೃತಿ ಕಾರ್ಯ
ಜಾಗೃತಿ ಕಾರ್ಯ ಮಾಡಲಾಗುತ್ತಿದೆ. ಕೆಮ್ಮು, ಜ್ವರ, ನೆಗಡಿ ಇರುವವರಿಂದ ದೂರ ಉಳಿಯಬೇಕು. ರೋಗ ಲಕ್ಷಣ ಕಂಡು ಬಂದರೆ ಸರಕಾರಿ ಆಸ್ಪತ್ರೆಯಲ್ಲಿ ತತ್‌ಕ್ಷಣ ಚಿಕಿತ್ಸೆ ಪಡೆಯಬೇಕು. ಇನ್ನು 10 ದಿನ ಯಾವುದೇ ವಾಣಿಜ್ಯ ಮಳಿಗೆಗಳು ತೆರೆಯುವಂತಿಲ್ಲ. ಪ್ರತಿಯೊಬ್ಬರು ಸಹಕರಿಸಬೇಕು.
 - ಗಣಪತಿ ಶಾಸ್ತ್ರಿ,ತಹಶೀಲ್ದಾರ್‌

ರೈಲು ಸಂಚಾರವೂ ಬಂದ್‌, ಪ್ರಯಾಣಿಕರೂ ಆಗಮಿಸಿಲ್ಲ
ಬಂಟ್ವಾಳ: ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ರೈಲ್ವೇ ಸಂಚಾರವೂ ಸ್ಥಗಿತಗೊಂಡಿತ್ತು. ಬಿ.ಸಿ. ರೋಡ್‌ನ‌ಲ್ಲಿರುವ ಬಂಟ್ವಾಳ ರೈಲು ನಿಲ್ದಾಣಕ್ಕೆ ಪ್ರಯಾಣಿಕರು ಆಗಮಿಸಿರಲಿಲ್ಲ. ಗೂಡ್ಸ್‌ ರೈಲುಗಳು ಮಾತ್ರ ಸಂಚರಿಸಿವೆ ಎಂದು ರೈಲ್ವೇ ನಿಲ್ದಾಣದ ಸಿಬಂದಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next