ಬಂಟ್ವಾಳ: ತಾಲೂಕಿನಲ್ಲಿ ಜೂ. 14ರಂದು ದಿನವಿಡೀ ಉತ್ತಮ ಮಳೆಯಾಗಿದ್ದು, ಹಲವು ಕಡೆ ಮನೆಗಳಿಗೆ ಹಾನಿಯಾಗಿರುವ ಜತೆಗೆ ಇತರ ಸಣ್ಣಪುಟ್ಟ ಹಾನಿ ಸಂಭವಿಸಿದೆ.
ಇರಾ ಗ್ರಾಮದ ಮೋಂತಿಮಾರು ಪಡು³ನಲ್ಲಿ ರವಿವಾರ ಹಮೀದ್ ಅವರ ಮನೆ ಬಳಿಯ ತಡೆಗೋಡೆ ರಫೀಕ್ ಅವರ ಮನೆಗೆ ಬಿದ್ದು, ಮನೆಗೆ ಕೊಂಚ ಹಾನಿಯಾಗಿದೆ. ಮೇಲ್ಭಾಗದಲ್ಲಿರುವ ಹಮೀದ್ ಅವರ ಮನೆಯೂ ಅಪಾಯದ ಸ್ಥಿತಿಯಲ್ಲಿದೆ.
ಪುದು ಗ್ರಾಮದ ಕುಂಜರ್ಕಳದಲ್ಲಿ ರವಿವಾರ ವಿದ್ಯುತ್ ಕಂಬ ವೊಂದು ಮಳೆಗೆ ಬಿದ್ದಿದೆ. ಸ್ಥಳೀಯರು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರಿಗೆ ಮಾಹಿತಿ ನೀಡಿದ್ದು, ಅವರು ಮೆಸ್ಕಾಂ ಅಧಿಕಾರಿ ಗಳನ್ನು ಸಂಪರ್ಕಿಸಿ ತತ್‌ಕ್ಷಣ ವಿದ್ಯುತ್ ಕಂಬ ಬದಲಿಸಿ ವಿದ್ಯುತ್ ಮರುಸಂಪರ್ಕಕ್ಕೆ ಕ್ರಮ ಕೈಕೊಂಡಿದ್ದಾರೆ.
ಸಜೀಪನಡು ಗ್ರಾಮದ ಗೋಳಿಪಡ್ಪು ಬಳಿ ಐಸಮ್ಮ ಹುಸೈನಾರ್ ಅವರ ಮನೆಯ ಮೇಲ್ಛಾವಣಿಗೆ ಹಾನಿಯಾಗಿದ್ದು, ಸುಮಾರು 30 ಸಾವಿರ ರೂ. ಹಾನಿ ಸಂಭವಿಸಿದೆ. ವಿಟ್ಲ ಕಸ್ಬಾ ಗ್ರಾಮದಲ್ಲಿ ಸತೀಶ್ ಅವರ ಮನೆಯ ಬಳಿಯ ಆವರಣಗೋಡೆ ಕುಸಿದು ಬಿದ್ದಿದೆ. ಸಜೀಪನಡು ಗ್ರಾಮದ ಕರುಣಾಕರ ಅವರ ಮನೆಗೆ ರವಿವಾರ ರಾತ್ರಿ ಮಳೆಯಿಂದ ಹಾನಿಯಾಗಿದ್ದು, ಸುಮಾರು 1 ಲಕ್ಷ ರೂ. ನಷ್ಟ ಸಂಭವಿಸಿರುವ ಕುರಿತು ಅಂದಾಜಿಸಲಾಗಿದೆ.