ಬಂಟ್ವಾಳ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಶವಯಾತ್ರೆಯ ಸಂದರ್ಭ ಶನಿವಾರ ಪ್ರಕ್ಷುಬ್ಧ ಪರಿಸ್ಥಿತಿ ಎದುರಿಸಿದ್ದ ಬಂಟ್ವಾಳದಲ್ಲಿ ರವಿವಾರ ಶಾಂತ ವಾತಾವರಣವಿದೆ. ಆದರೂ ಬಿ.ಸಿ.ರೋಡ್ ನಗರ ಕೇಂದ್ರದಲ್ಲಿ ಅಂಗಡಿಮುಂಗಟ್ಟುಗಳು ಬಾಗಿಲು ಮುಚ್ಚಿಕೊಂಡಿದ್ದವು. ವಿರಳ ಜನಸಂಚಾರ, ಮಿತವಾದ ವಾಹನ ಸಂಚಾರದಿಂದಾಗಿ ನಗರ ಬಿಕೋ ಎನ್ನುತ್ತಿತ್ತು.
ಯಾವುದೇ ಅಹಿತಕರ ಘಟನೆಗೆ ಅವಕಾಶ ಆಗದಂತೆ ಸುಮಾರು ಒಂದು ಸಾವಿರಕ್ಕೂ ಅಧಿಕ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ವಾಹನ ಸಹಿತ ಸಿಬಂದಿ ಪಹರೆ ಹಾಕಲಾಗಿದೆ.
ಕಲ್ಲೆಸೆತ: 13 ಬಂಧನ ಕೈಕಂಬದ ಮತ್ತು ಇತರ ಕಡೆಗಳಲ್ಲಿ ಕಲ್ಲೆಸೆತಕ್ಕೆ ಸಂಬಂಧಪಟ್ಟು ಒಟ್ಟು 13 ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಿ.ಸಿ.ರೋಡ್, ಕೈಕಂಬ, ಮೆಲ್ಕಾರ್‌ನಲ್ಲಿ ರವಿವಾರ ವಾರದ ರಜಾದಿನ ಮತ್ತು ಅಶಾಂತಿಯ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಅಂಗಡಿಮುಂಗಟ್ಟುಗಳು ಬಂದ್ ಆಗಿದ್ದವು. ಹೆದ್ದಾರಿಯಲ್ಲಿ ನಿಮಿಷಕ್ಕೊಂದು ಪೊಲೀಸ್ ವಾಹನದ ಸಂಚಾರ ಕಂಡು ಬರುತ್ತಿತ್ತು.
ವಿರಳ ಜನ ಸಂಚಾರದ ಕಾರಣ ಆಟೋ ರಿಕ್ಷಾ ಮತ್ತು ಸರ್ವಿಸ್ ಕಾರುಗಳ ಸೇವೆ ಇರಲಿಲ್ಲ. ಕೆಲವು ಖಾಸಗಿ ಸರ್ವಿಸ್ ಬಸ್‌ಗಳು ಸಂಚಾರ ನಡೆಸಿದ್ದರೂ ಸಂಜೆ ಬಳಿಕ ನಿಲುಗಡೆಯಾದವು. ಪ್ರಯಾಣಿಕರ ಕೊರತೆಯ ಕಾರಣ ಕೆಲವೊಂದು ಸರ್ವಿಸ್ ಬಸ್‌ಗಳು ರಸ್ತೆಗೆ ಇಳಿಯಲೇ ಇಲ್ಲ ಎಂದು ತಿಳಿದುಬಂದಿದೆ. ಸರಕಾರಿ ಬಸ್‌ಗಳು ಎಂದಿನಂತೆ ಓಡಾಡುತ್ತಿದ್ದರೂ ಹಲವು ಬಸ್‌ಗಳ ಟ್ರಿಪ್ ಕಟ್ ಮಾಡಲಾಗಿದೆ.
ಕೈಯಲ್ಲಿ ಚೂರಿ: ವಶಕ್ಕೆ ರವಿವಾರ ಸಂಜೆ ವೇಳೆಗೆ ಪಾಣೆ ಮಂಗಳೂರಿನಲ್ಲಿ ಆಟೋರಿಕ್ಷಾದಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬನ ಕೈಯಲ್ಲಿ ಚೂರಿ ಇರುವುದನ್ನು ಕಂಡ ಪೊಲೀಸರು ಬೆನ್ನಟ್ಟಿ ರಿಕ್ಷಾವನ್ನು ತಡೆಗಟ್ಟಿ ಚಾಲಕ ಸಹಿತ ಇಬ್ಬರನ್ನು ವಶಕ್ಕೆ ತೆಗದುಕೊಂಡಿದ್ದಾರೆ. ವಿಚಾರಣೆ ನಡೆಯುತ್ತಿದೆ.