ಬಂಟ್ವಾಳ : ‘ನನ್ನನ್ನು ನಂಬಿ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರ ದಲ್ಲಿ ಹಗಲಿರುಳು ಕೆಲಸ ಮಾಡಿದ ಕಾರ್ಯಕರ್ತರಿಗೆ ಹೃದಯಸ್ಪರ್ಶಿ ಕೃತಜ್ಞತೆ ಗಳು. ನನ್ನ ಮೇಲೆ ವಿಶ್ವಾಸವಿಟ್ಟು ಕೆಲಸ ಮಾಡಿದ ನಿಮ್ಮ ಜತೆ ಯಾವತ್ತೂ ಇರುತ್ತೇನೆ. ಅಧಿಕಾರ ಇದ್ದರೂ ಇಲ್ಲದಿದ್ದರೂ ನಾನೆಂದೂ ಸುಮ್ಮನೆ ಕೂರುವುದಿಲ್ಲ. ಜನರ ಜತೆಗೆ ಇರುತ್ತೇನೆ. ನಿಮ್ಮ ಪ್ರೀತಿಯ ಋಣದಿಂದ ಮುಕ್ತನಾಗಲು ಸಾಧ್ಯವಿಲ್ಲ’ ಎಂದು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ರವಿವಾರ ಬಿ.ಸಿ.ರೋಡ್ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆದ ಪಾಣೆ ಮಂಗಳೂರು, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದರು. ಚುನಾವಣೆಯ ಸಂದರ್ಭದಲ್ಲಿ ನನ್ನ ಸಹೋದರ ಸ್ವರ್ಗಸ್ಥರಾದ ದುಃಖ, ಅಪಪ್ರಚಾರದ ಕಿರುಕುಳ ಎದುರಿಸಬೇಕಾಗಿತ್ತು. ಬಿಳಿಯಾಗಿರು ವುದೆಲ್ಲಾ ಹಾಲಲ್ಲ; ವಿಷವೂ ಇರಬಹುದು ಎಂಬ ತಿಳುವಳಿಕೆ ಯಿಂದ ಕೆಲಸ ಮಾಡಬೇಕು ಎಂಬ ಎಚ್ಚರ ನಮ್ಮಲ್ಲಿರ ಬೇಕು ಎಂಬ ಮಾರ್ಮಿಕ ಮಾತನ್ನು ಇದೇ ಸಂದರ್ಭದಲ್ಲಿ ಅವರು ಹೇಳಿದರು.
‘ನಾನು ಸಚಿವನಾಗಿ ಹಲವಾರು ಇಲಾಖೆಯಲ್ಲಿ ದುಡಿದಿದ್ದೇನೆ. ಅಬಕಾರಿ ಇಲಾಖೆಯಲ್ಲಿದ್ದಾಗ ಸ್ವೀಟ್ ಪಾಕೆಟ್‌ನಲ್ಲಿ ಹಣವನ್ನು ಇಟ್ಟು ನೀಡಿದ್ದರು. ಅದನ್ನು ತೆರೆದು ನೋಡಿದ ಬಳಿಕ ಹಿಂತಿರುಗಿಸಿದ್ದೇನೆ. ಸಾರಿಗೆ ಇಲಾಖೆಯಲ್ಲಿ ಸೂಟ್‌ಕೇಸ್‌ನಲ್ಲಿ ಹಣದ ಆಮಿಷ ಬಂದಿತ್ತು. ಆ ಸಂದರ್ಭದಲ್ಲಿಯೂ ನಿರಾಕರಿಸಿದ್ದೇನೆ’ ಎಂದು ತನ್ನ ಪ್ರಾಮಾಣೀಕತೆಯ ಬಗ್ಗೆ ಕಾರ್ಯಕರ್ತರಲ್ಲಿ ಹೇಳಿದರು.
ಪಕ್ಷ ಎಂಟು ಸಲ ಸ್ಪರ್ಧಿಸಲು ಅವಕಾಶ ಮಾಡಿ ಕೊಟ್ಟಿದೆ. ಮೂರು ಅವಧಿಯಲ್ಲಿ ಸಚಿವನಾಗಿದ್ದೇನೆ. ನಿಮ್ಮ ನಂಬಿಕೆಗೆ ಚ್ಯುತಿ ಬಾರದಂತೆ, ಕೆಲಸ ಮಾಡಿದ್ದೇನೆ. ನನ್ನ ಪ್ರಾಮಾಣಿಕತೆಯ ಬಗ್ಗೆ ಯಾರೊಬ್ಬರೂ ಮಾತನಾಡುವುದಿಲ್ಲ. ನಾನು ಅಪ್ರಮಾಣಿಕ ಎಂದು ಯಾರಾದರೂ ಹೇಳಿದರೆ ರಾಜಕೀಯದಿಂದಲೇ ಹಿಂದುಳಿಯುವೆ ಎಂದು ಹೇಳಿದರು.
ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್.ಖಾದರ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಟಾಸ್ ಅಲಿ ಸ್ವಾಗತಿಸಿ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ ವಂದಿಸಿ, ರಾಜೀವ ಕಕ್ಕೆಪದವು ನಿರ್ವಹಿಸಿದರು.