ಬಂಟ್ವಾಳ: ತಾಲೂಕಿನಲ್ಲಿ ಅ. 12ರಂದು ಮಳೆ ತನ್ನ ತೀವ್ರತೆಯನ್ನು ಮತ್ತೆ ತೋರಿಸಿದ್ದು, ತಾಲೂಕಿನ ಹಲವು ಕಡೆಗಳಲ್ಲಿ ಹಾನಿಯಾಗಿದೆ. ಬುಧವಾರವೂ ಮಳೆ ಮುಂದುವರಿದಿದ್ದು, ತೀವ್ರತೆ ಕಡಿಮೆಯಾಗಿ ಸಂಜೆಯವರೆಗೂ ಹನಿ ಮಳೆಯಾಗಿತ್ತು.
ಕೊಳ್ನಾಡು ಗ್ರಾಮದ ಕಾಡುಮಠದಲ್ಲಿ ಮೇಲಿನ ಮನೆಯವರ ಆವರಣ ಗೋಡೆ ಕುಸಿದು ಚಿತ್ರಾವತಿ ಅವರ ಕಚ್ಚಾ ಮನೆಯ ಮೇಲೆ ಬಿದ್ದು ತೀವ್ರ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯ ಸದಸ್ಯರಿಗೆ ಯಾವುದೇ ಹಾನಿಯಾಗಿಲ್ಲ. ಮನೆಯ ಸದಸ್ಯರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಅರಳ ಗುಡ್ಡೆಯಂಗಡಿಯಲ್ಲಿರುವ ಖಾಸಗಿ ವಿದ್ಯಾಸಂಸ್ಥೆಯ ಬಳಿ ತಡೆಗೋಡೆ ಕುಸಿದು ಶಾಲಾ ವಾಹನಗಳಿಗೆ ಹಾನಿಯಾಗಿದೆ.
ಕರಿಯಂಗಳ ಗ್ರಾಮದ ರಂಜಿತ್ ಶೆಟ್ಟಿ ಅವರ ನಿರ್ಮಾಣ ಹಂತದ ಮನೆ ಕುಸಿದು ಸಂಪೂರ್ಣ ಹಾನಿಯಾಗಿದೆ. ಸರಪಾಡಿ ಗ್ರಾಮದ ಉಜಿರಾಡಿಯಲ್ಲಿ ಐತಪ್ಪ ಪೂಜಾರಿ ಅವರ ಮನೆಯ ಬದಿಯ ತಡೆಗೋಡೆಯು ಕುಸಿದು ಬಿದ್ದಿದೆ.
ಇದನ್ನೂ ಓದಿ:ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ ರೈತ ಮಹಿಳೆ ಸಾವು
ಅನಂತಾಡಿ ಗ್ರಾಮದ ಬಾಕಿಲದಲ್ಲಿ ವಾಣಿ ಅವರ ಮನೆಯಂಗಳದ ಕಾಂಕ್ರೀಟ್‌ನ ತಡೆಗೋಡೆಯು ಕುಸಿದು ಬಾಳೆ ಕೃಷಿಗೆ ಹಾನಿಯಾಗಿದೆ. ಅರಳ ಗ್ರಾಮದ ಅಲ್ಮುಡೆಯಲ್ಲಿ ಚಂದ್ರಾವತಿ ಉಮೇಶ್ ಅವರ ಮನೆಯ ಆವರಣ ಗೋಡೆ ಕುಸಿದಿದೆ. ಬಾಳ್ತಿಲ ಸುಧೆಕಾರುನಲ್ಲಿ ಸೇಸಪ್ಪ ನಾಯ್ಕ ಅವರ ಮನೆಯ ಹಿಂಬದಿ ಗುಡ್ಡ ಕುಸಿದು ಹಾನಿಯಾಗಿದೆ. ಅರಳ ಗ್ರಾಮ ನಿವಾಸಿ ಸುಂದರ ಅವರ ಮನೆಯ ಮೇಲೆ ಆವರಣ ಗೋಡೆ ಕುಸಿದು ಮನೆಗೆ ಹಾನಿಯಾಗಿದೆ. ಸಜೀಪನಡು ಗ್ರಾಮದ ದೇರಾಜೆ ಬರೆ ಮನೆ ಲೀಲಾ ಪೂಜಾರಿ ಅವರ ಮನೆಯ ಸಮೀಪ ಗುಡ್ಡದ ಮಣ್ಣು ಕುಸಿದು ಬಿದ್ದಿದೆ. ಸಜೀಪಮೂಡ ಗುರುಮಂದಿರದ ಬಳಿ ಶಬೀರ್ ಅವರ ತಡೆಗೋಡೆ ಕುಸಿದು ರವಿ ಅವರ ಮನೆಯ ಶೀಟ್‌ಗಳಿಗೆ ಹಾನಿಯಾಗಿದೆ.
ಮುಂಡೆಗುರಿಯಲ್ಲಿ ಜಾನಕಿ ಅವರ ಮನೆಯ ಮುಂಭಾಗಕ್ಕೆ ಆವರಣ ಗೋಡೆ ಕುಸಿದು ಹಾನಿಯಾಗಿದೆ. ಅರಳ ಗ್ರಾಮದ ಶ್ರೀ ಗರುಡ ಮಹಾಕಾಳಿ ದೇವಸ್ಥಾನದ ಸಭಾಂಗಣದ ಹಿಂಭಾಗದಲ್ಲಿ ಆವರಣ ಗೋಡೆ ಕುಸಿದಿದೆ. ಕೊಯಿಲ ಗ್ರಾಮದ ಮೋಹನ್ ಪೂಜಾರಿ ಅವರ ಮನೆಯ ಹಿಂಬದಿ ಹಾನಿಯಾಗಿದೆ.