ಬಂಟ್ವಾಳ: ಕಾನೂನು ಬಾಹಿರವಾಗಿ ಆಟೋ ರಿಕ್ಷಾ ಓಡಿಸುತ್ತಿದ್ದ ವ್ಯಕ್ತಿಯೋರ್ವನನ್ನು ಟ್ರಾಫಿಕ್ ಪೊಲೀಸರು ತಡೆದು ದಂಡ ಹಾಕಿದರು ಎಂಬ ಕಾರಣಕ್ಕೆ ಆವೇಶಕ್ಕೊಳಗಾದ ಚಾಲಕ ಟ್ರಾಫಿಕ್ ಎಸ್.ಐ.ಹಾಗೂ ಸರಕಾರಿ ವಾಹನಕ್ಕೆ ಮತ್ತು ಅಟೋ ರಿಕ್ಷಾಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾದ ಘಟನೆ ಬಿಸಿರೋಡಿನ ಕೈಕಂಬ ಎಂಬಲ್ಲಿ ಸೋಮವಾರ( ಮಾ.11 ರಂದು)ಬೆಳಿಗ್ಗೆ ನಡೆದಿದ್ದು , ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಸಾರ್ವಜನಿಕವಾಗಿ ಪೆಟ್ರೋಲ್ ಸುರಿದು ಬೆಂಕಿ ಹಾಕಿ ಅನಾಹುತಕ್ಕೆ ಕಾರಣನಾದ ಚಾಲಕನನ್ನು ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗೂಡಿನಬಳಿ ನಿವಾಸಿ ಮಹಮ್ಮದ್ ಅನ್ಸಾರ್ ಪ್ರಕರಣದ ಆರೋಪಿಯಾಗಿದ್ದು,ಸದ್ಯ ತಲೆಮರೆಸಿಕೊಂಡಿದ್ದಾನೆ.
ಟ್ರಾಫಿಕ್ ಎಸ್‌ಐ.ಸುತೇಶ್ ಅವರು ಕೈಕಂಬದಲ್ಲಿ ವಾಹನಗಳ ತಪಾಸಣಾ ಕಾರ್ಯದಲ್ಲಿ ತೊಡಗಿದ್ದ ವೇಳೆ, ಯೂನಿಫಾರ್ಮ್ ( ಡ್ರೆಸ್ ಕೋಡ್) ಹಾಕದೆ ಮೊಬೈಲ್ ನಲ್ಲಿ ಮಾತನಾಡಿಕೊಂಡು ರಿಕ್ಷಾ ಓಡಿಸುತ್ತಿದ್ದ ಚಾಲಕನನ್ನು ನಿಲ್ಲಿಸಿ ,ಆತನ ಮೇಲೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಕಾರಣಕ್ಕಾಗಿ 2 ಸಾವಿರ ದಂಡ ಹಾಕಿ ನೋಟೀಸ್ ನೀಡಿದರು.
ಇದೇ ಕಾರಣದಿಂದ ಸಾರ್ವಜನಿಕವಾಗಿ ಬೀದಿ ರಂಪಾಟ ಮಾಡಿ, ಪೋಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಅನ್ಸಾರ್ ಬಳಿಕ ರಿಕ್ಷಾವನ್ನು ಪೊಲೀಸರ ಎದುರಿನಲ್ಲಿಯೇ ಸುಟ್ಟುಹಾಕುವುದಾಗಿ ಬೆದರಿಸಿದ. ಬಳಿಕ ಎಸ್ ಐ ಹಾಗೂ ಜೀಪ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ನೀಡಲು ಮುಂದಾದ. ಎಸ್.ಐ. ಅವರು ಆತನ ಮೇಲೆ ದೂರು ನೀಡಿದ್ದಾರೆ. ಇದೀಗ ಈತನ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ