Advertisement

ಬೆಳ್ಳಿ ಹಬ್ಬ ವರ್ಷ, ಪುಸ್ತಕ ಭಿಕ್ಷೆ ಯೋಜನೆಗೆ ಚಾಲನೆ

06:26 AM Feb 01, 2019 | Team Udayavani |

ಬಂಟ್ವಾಳ : ಹಿರಿಯರ ಹೆಜ್ಜೆಯ ಮೌಲ್ಯ ಗುರುತಿಸಿ ಮುನ್ನಡೆಯಬೇಕು. ಜೀವನದಲ್ಲಿ ದೊಡ್ಡ ಕನಸುಗಳನ್ನು ಕಂಡು ಅದನ್ನು ಸಾಕ್ಷಾತ್ಕಾರಗೊಳಿಸುವ ಛಲ ಇರಬೇಕು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ ತಿಳಿಸಿದರು.

Advertisement

ಅವರು ಜ. 30ರಂದು ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬೆಳ್ಳಿ ಹಬ್ಬ ವರ್ಷಾಚರಣೆ ಮತ್ತು ಪುಸ್ತಕ ಭಿಕ್ಷೆ ಯೋಜನೆಗೆ ಆರಂಭಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿ, ಸಂಸ್ಕೃತಿ ಗ್ರಾಮ ರಚನೆಗೆ ಅವಶ್ಯವಾದ ಜಮೀನು ಒದಗಿಸಲು ಜಿಲ್ಲಾಧಿಕಾರಿ ಅವರಲ್ಲಿ ಪ್ರೊ| ತುಕಾರಾಮ್‌ ಪೂಜಾರಿ ಸಹಿತ ಮಾತನಾಡಲು ಕ್ರಮ ಕೈಗೊಳ್ಳುತ್ತೇನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ, ತುಳುನಾಡಿನ ಇತಿಹಾಸ ತಿಳಿಸುವ ವಸ್ತುಗಳನ್ನು ಇಲ್ಲಿ ಪ್ರತ್ಯಕ್ಷ ಕಾಣಲು ಸಾಧ್ಯವಾಗಿದೆ. ಮುಂದಿನ ಪೀಳಿಗೆಗೆ ಇದು ಮೌಲ್ಯಯುತ ಕೊಡುಗೆ ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಮಾತನಾಡಿ, ತುಳು ಬದುಕು ವಸ್ತು ಸಂಗ್ರಹಾಲಯ ತುಳುನಾಡಿನ ಚರಿತ್ರೆಯ ಪ್ರತಿಬಿಂಬ. ಅದನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ. ಅಧ್ಯಯನ ಕೇಂದ್ರ ಅಧ್ಯಕ್ಷ ಪ್ರೊ| ತುಕಾರಾಮ್‌ ಪೂಜಾರಿ ಅಪೇಕ್ಷೆಯಂತೆ ಸಂಸ್ಕೃತಿ ಗ್ರಾಮದ ಅಪೇಕ್ಷೆ ಈಡೇರುವುದಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಸಾಹಿತಿ ಆಗುಂಬೆ ನಟರಾಜ್‌ ಮಾತನಾಡಿ, ಇತಿಹಾಸದ ದೃಷ್ಟಿ ಯಲ್ಲಿ ರಾಣಿ ಅಬ್ಬಕ್ಕನಿಗೆ ಸಾಕಷ್ಟು ಪ್ರಾಧಾನ್ಯ ನೀಡಿಲ್ಲ. ನೈಜ ಇತಿಹಾಸ ಅರಿತುಕೊಂಡು ಸ್ವಾಭಿಮಾನಿ ಜ್ಞಾನವಂತ ಶೀಲವಂತರಾಗಿ ಬದುಕಬೇಕು ಎಂದು ಕರೆ ನೀಡಿದರು.ಪುತ್ತೂರು ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ| ಕ್ಸೇವಿಯರ್‌ ಡಿ’ಸೋಜಾ ಅವರು ಅಧ್ಯಯನ ಕೇಂದ್ರದ ಅಧ್ಯಕ್ಷರ ಸಾಧನೆಯನ್ನು ಅಭಿನಂದಿಸಿದರು.

Advertisement

ಮೊಡಂಕಾಪು ದೀಪಿಕಾ ಪ್ರೌಢಶಾಲೆಯ ವಿಶ್ರಾಂತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಹೆಬ್ಟಾರ್‌ ತುಳು ಬದುಕು ವಸ್ತುಸಂಗ್ರಹಾಲಯ ಬೆಳೆದು ಬಂದ ದಾರಿಯನ್ನು ತಿಳಿಸಿದರು.ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ಪ್ರೊ| ತುಕಾರಾಮ್‌ ಪೂಜಾರಿ ಸ್ವಾಗತಿಸಿ, ಪ್ರಸ್ತಾವಿಸಿದರು. ಕೇಂದ್ರ ಕಾರ್ಯದರ್ಶಿ ಡಾ| ಆಶಾಲತಾ ಸುವರ್ಣ ವಂದಿಸಿದರು. ನ್ಯಾಯವಾದಿ ನವನೀತ ಹಿಂಗಾಣಿ ನಿರೂಪಿಸಿದರು.

ಸಂಸ್ಕೃತಿ ಗ್ರಾಮದ ಕನಸು
ತುಳುನಾಡಿನಲ್ಲಿ ಸಾಂಸ್ಕೃತಿಕ ಇತಿಹಾಸವನ್ನು ಭೌತಿಕ ವಸ್ತುವಿನ ಆಧಾರದಲ್ಲಿ ಕಟ್ಟುವ ಕೆಲಸ ಆಗಬೇಕಾಗಿದೆ. ನಮ್ಮಲ್ಲಿ ಮೌಕಿಕ ಇತಿಹಾಸ ಸಮೃದ್ಧ್ದವಾಗಿದ್ದು, ಅದರ ಅಧ್ಯಯನ ಕಾರ್ಯ ನಡೆಯಬೇಕು. ತುಳುನಾಡಿಗೆ ಒಂದು ಸಂಸ್ಕೃತಿ ಗ್ರಾಮದ ಕನಸಿದ್ದು, ಅದನ್ನು ಸಾಕಾರಗೊಳಿಸಲು ಎಲ್ಲರ ಸಹಕಾರ ಬೇಕಾಗಿದೆ. ಎಸ್‌.ಯು. ಫಣಿಯಾಡಿ ಗ್ರಂಥಾಲಯಕ್ಕೆ ಹತ್ತು ಸಾವಿರ ಪುಸ್ತಕ ಸಂಗ್ರಹಿಸುವ ಪುಸ್ತಕ ಭಿಕ್ಷೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
– ಪ್ರೊ| ತುಕಾರಾಮ ಪೂಜಾರಿ,
ಅಧ್ಯಕ್ಷರು, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next