ಬಂಟ್ವಾಳ: ನೀರಿನ ಅಭಾವವನ್ನು ನೀಗಿಸುವುದಕ್ಕೆ ಮಳೆಗಾಲದಲ್ಲಿ ಹರಿದು ಹೋಗುವ ನೀರನ್ನು ಇಂಗಿಸಿ ಅಂತರ್ಜಲ ವೃದ್ಧಿಸುವುದೇ ಪರಿಹಾರ ಎಂಬ ಆಲೋಚನೆಯೊಂದಿಗೆ ಮೊಡಂಕಾಪು ಕಾರ್ಮೆಲ್ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾವೇ ಮನೆಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸುತ್ತಿದ್ದಾರೆ. ಈ ಸಾಲಿನಲ್ಲಿ ಶಾಲೆಯ 76 ವಿದ್ಯಾರ್ಥಿಗಳು 162 ಇಂಗು ಗುಂಡಿಗಳು ನಿರ್ಮಿಸಿದ್ದು, ಗುಂಡಿಗಳು ಒಟ್ಟು 54,971 ಲೀ. ನೀರು ಇಂಗಿಸುವ ಸಾಮರ್ಥ್ಯ ಹೊಂದಿದೆ.
ಹಸಿರು ಭವಿಷ್ಯ ಪರಿಸರ ಸಂಘ
ಶಾಲೆಯ ಹಸಿರು ಭವಿಷ್ಯ ಪರಿಸರ ಸಂಘದ ವತಿಯಿಂದ ಮಳೆ ನೀರನ್ನು ಇಂಗಿಸೋಣ, ಜೀವನ ಹಸನುಗೊಳಿಸೋಣ ಎಂಬ ಧ್ಯೇಯದಡಿ ವಿದ್ಯಾರ್ಥಿಗಳಿಗೆ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಇಂಗು ಗುಂಡಿ ನಿರ್ಮಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಹೆತ್ತವರು, ನೆರೆಕರೆಯವರ ಸಹಾಯ ಪಡೆದು ಮನೆಯ ಸುತ್ತಮುತ್ತ ಗುಡ್ಡ ಹಾಗೂ ಅರಣ್ಯ ಪ್ರದೇಶಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿ ಮಾರ್ಗದರ್ಶಿ ಶಿಕ್ಷಕರಿಗೆ ಅದರ ಫೋಟೋಗಳನ್ನು ಕಳುಹಿಸಿದ್ದಾರೆ. ವಿಜ್ಞಾನ ಪಾಠದ ಒಂದು ಕಾರ್ಯ ಯೋಜನೆಯಾಗಿ ಈ ಸ್ಪರ್ಧೆಯಲ್ಲಿ ಭಾಗವಹಿಸಲಾಗುತ್ತಿದೆ.
ಇಂಗು ಗುಂಡಿ ನಿರ್ಮಿಸಿದ ಎಲ್ಲವಿದ್ಯಾರ್ಥಿ ಗಳಿಗೆ ಬಹುಮಾನ ನೀಡುವುದರ ಜತೆಗೆ ಅತ್ಯಧಿಕ ಗುಂಡಿಗಳನ್ನು ನಿರ್ಮಿಸಿದ ವಿದ್ಯಾರ್ಥಿಗಳಾದ ಮಿಶಲ್ ಲೋಬೊ, ಜೀವನ್, ರಿಯೋನ ಪಿಂಟೊ, ರೋಯ್ಸನ್ ಲೋಬೊ, ರಶ್ವಿತ ಅವರಿಗೆ ಮುಖ್ಯಶಿಕ್ಷಕಿ ಸಿ| ನವೀನ ಅವರು ಬಹುಮಾನ ನೀಡಿ ಗೌರವಿಸಿದರು. ಮಿಶಲ್ ಲೋಬೋ ಅವರು 40 ಇಂಗು ಗುಂಡಿಗಳನ್ನು ನಿರ್ಮಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಜಲ ಜಾಗೃತಿಯಲ್ಲಿ ವಿದ್ಯಾರ್ಥಿಗಳು ಕಳೆದ 5 ವರ್ಷಗಳಿಂದ ವಿಜ್ಞಾನ ಶಿಕ್ಷಕ ರೋಷನ್ ಪಿಂಟೊ ಅವರ ಮಾರ್ಗದರ್ಶನದಲ್ಲಿ ಒಟ್ಟು 631 ಇಂಗು ಗುಂಡಿಗಳನ್ನು ನಿರ್ಮಿಸಿದ್ದಾರೆ.
631 ಇಂಗು ಗುಂಡಿಗಳ ನಿರ್ಮಾಣ
5 ವರ್ಷಗಳಿಂದ ವಿಜ್ಞಾನ ಶಿಕ್ಷಕ ರೋಷನ್ ಪಿಂಟೊ ಅವರ ಮಾರ್ಗದರ್ಶನದಲ್ಲಿ ಒಟ್ಟು 631 ಇಂಗು ಗುಂಡಿಗಳ ನಿರ್ಮಾಣ ಮಾಡಲಾಗಿದೆ. ಮಿಶಲ್ ಲೋಬೋ ಅವರು ಗರಿಷ್ಠ 40 ಇಂಗು ಗುಂಡಿ ನಿರ್ಮಿಸಿದ್ದಾರೆ.
ನೀರು ಪವಿತ್ರ, ನೈಸರ್ಗಿಕ ಮತ್ತು ಸುಲಭವಾಗಿ ಲಭ್ಯವಿರುವ ಸಂಪನ್ಮೂಲವಾಗಿದ್ದು, ನೀರಿನ ಕುರಿತು ಮಾತನಾಡುವುದಕ್ಕಿಂತ ಕೃತಿಯಲ್ಲಿ ಮಾಡಿ ತೋರಿಸುವುದು ಬಹಳ ಮುಖ್ಯ. ನೀರಿಗಾಗಿ ನಾವು ಏನು ಮಾಡಿದ್ದೇವೆ ಅನ್ನೋದು ಬಹಳ ಅಗತ್ಯವಾಗಿದೆ. ನೀರಿನ ರಕ್ಷಣೆಯ ಕುರಿತು ಹೆಜ್ಜೆ ಹಾಕಿದಾಗ ಮಾತ್ರ ನೀರು ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿನಿಯರು ಪ್ರತೀ ವರ್ಷ ಇಂಗುಗುಂಡಿಗಳನ್ನು ನಿರ್ಮಿಸಿ ಸಮಾಜಕ್ಕೆ ಮಾದರಿಯಾಗುತ್ತಿದ್ದು, ಶಾಲಾ ಮುಖ್ಯಶಿಕ್ಷಕಿ ಸಿ| ನವೀನಾ ಹಾಗೂ ಎಲ್ಲ ಶಿಕ್ಷಕರು ಉತ್ತಮ ರೀತಿಯಲ್ಲಿ ಸಹಕರಿಸುತ್ತಿದ್ದಾರೆ. – ರೋಷನ್ ಪಿಂಟೋ, ಮಾರ್ಗದರ್ಶಿ ಶಿಕ್ಷಕರು