Advertisement

ಬಂಟ್ವಾಳ: ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣ; ನಾಲ್ವರು ಆರೋಪಿಗಳಿಗೆ ನ್ಯಾಯಾಂಗ ಬಂಧನ 

04:42 PM Oct 10, 2021 | Team Udayavani |

ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶವೊಂದರ 16ರ ಹರೆಯದ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದ ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನವಣೆ ತಿಳಿಸಿದ್ದಾರೆ.

Advertisement

ಪ್ರಕರಣಕ್ಕೆ ಸಂಬಂಧಿಸಿ ರವಿವಾರ ಬಂಟ್ವಾಳ ಎಎಸ್ಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶುಕ್ರವಾರ ಬೆಳಗ್ಗೆ ತಾನು ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಿಳಿ ಕಾರಿನಲ್ಲಿ ಬಂದ ತಂಡವೊಂದು ನನ್ನನ್ನು ಅಪಹರಣ ಮಾಡಿ ಅಜ್ಞಾತ ಸ್ಥಳದಲ್ಲಿ ಅತ್ಯಾಚಾರ ನಡೆಸಿದೆ ಎಂದು ಬಾಲಕಿ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಳು. ಬಾಲಕಿಯ ದೂರಿನಂತೆ ಪ್ರಕರಣ ದಾಖಲಿಸಿದ ಬಂಟ್ವಾಳ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ ಎಂದು ಹೇಳಿದರು.

ವಶಕ್ಕೆ ಪಡೆದ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಆರೋಪಿ ಶರತ್ ಶೆಟ್ಟಿ ಎಂಬಾತ ಬಾಲಕಿಯನ್ನು ಫೇಸ್ ಬುಕ್ ನಲ್ಲಿ ಪರಿಚಯ ಮಾಡಿ ಬಳಿಕ ಮೊಬೈಲ್ ನಲ್ಲಿ ಇಬ್ಬರೂ ಮಾತನಾಡುತ್ತಾ ಇದ್ದರು. ಬಳಿಕ ಶರತ್ ಶೆಟ್ಟಿ ಬಾಲಕಿಯನ್ನು ತನ್ನ ಸಂಬಂಧಿ ಮಾರುತಿ ಮಂಜುನಾಥ್ ಎಂಬಾತನಿಗೆ ಪರಿಚಯ ಮಾಡಿಸಿದ್ದ. ಮಂಜುನಾಥ್ ಕೂಡಾ ಬಾಲಕಿಯೊಂದಿಗೆ ಸಲುಗೆಯಿಂದ ಇದ್ದು ವಾಟ್ಸ್ಆಪ್ ನಲ್ಲಿ ಅಶ್ಲೀಲ ವಿಡಿಯೋ ಚಾಟ್ ಮಾಡಿಕೊಂಡಿರುತ್ತಿದ್ದ ಎಂದು ಅವರು ಮಾಹಿತಿ ನೀಡಿದರು.

ಅ.8ರಂದು ಆರೋಪಿ ಶರತ್ ಶೆಟ್ಟಿ ಬಾಲಕಿಗೆ ಮಂಗಳೂರಿಗೆ ಬರುವಂತೆ ತಿಳಿಸಿದ್ದ. ಅದರಂತೆ ಬಾಲಕಿ ಬಸ್ ನಲ್ಲಿ ಮಂಗಳೂರಿಗೆ ತೆರಳಿ ಸಿಟಿ ಮಹಲ್ ಬಳಿ ಆರೋಪಿ ಶರತ್ ಶೆಟ್ಟಿಯನ್ನು ಭೇಟಿಯಾಗಿದ್ದು ಬಳಿಕ ವಿಶ್ರಾಂತಿ ಮಾಡೋಣ ಎಂದು ಬಾಲಕಿಯನ್ನು ಪುಸಲಾಯಿಸಿ ಮಂಗಳೂರಿನ ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋದ ಶರತ್ ಶೆಟ್ಟಿ ಅಲ್ಲಿ ಬಾಲಕಿಯನ್ನು ಅತ್ಯಾಚಾರ ಎಸಗಿದ್ದಾನೆ ಎಂದು ಎಸ್ಪಿ ತಿಳಿಸಿದರು.

ಬಳಿಕ ಶರತ್ ಶೆಟ್ಟಿ ತನ್ನ ಸ್ನೇಹಿತ ಇದಾಯತ್ತುಲ್ಲ ಎಂಬಾತನಿಗೆ ಕರೆ ಮಾಡಿ ಒಂದು ಹುಡುಗಿ ಇದೆ ಲಾಡ್ಜ್ ಗೆ ಬರುವಂತೆ ತಿಳಿಸಿದ್ದು ಆರೋಪಿ ಇದಾಯತ್ತುಲ್ಲ ಕೂಡಾ ಲಾಡ್ಜ್ ಗೆ ತೆರಳಿ ನೊಂದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಅವರು ವಿವರಿಸಿದರು.

Advertisement

ಆರೋಪಿ ಸತೀಶ್ ಇತರ ಆರೋಪಿಗಳಿಗೆ ಬಾಲಕಿಯನ್ನು ಅತ್ಯಾಚಾರ ಏಸಗಲು ಲಾಡ್ಜ್ ಅವಕಾಶ ಮಾಡಿಕೊಟ್ಟಿದ್ದಲ್ಲದೆ ಬಾಲಕಿ ತಂಗಿದ್ದ ರೂಂಗೆ ತೆರಳಿ ಬಾಲಕಿಗೆ ಲೈಂಗಿಕ ಶೋಷಣೆ ಮಾಡಿದ್ದಾನೆ. ತನಿಖೆ ಸಂಪೂರ್ಣಗೊಂಡಿದ್ದು ಇಡೀ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಇದ್ದು ಅವರನ್ನು ದಸ್ತಗಿರಿ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದರು.

ಕಾಪು ನಿವಾಸಿ ಕೆ.ಎಸ್.ಶರತ್ ಶೆಟ್ಟಿ, ಮಾರುತಿ ಮಂಜುನಾಥ್, ಲಾಡ್ಜ್ ಸತೀಶ್ ಹಾಗೂ ಇದಾಯತ್ತುಲ್ಲ ಬಂಧಿತ ಆರೋಪಿಗಳಾಗಿದ್ದು ಅವರನ್ನು ಇಂದು ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗುವುದು ಎಂದು ಅವರು ತಿಳಿಸಿದರು.

ಬಂಟ್ವಾಳ ಎ.ಎಸ್.ಪಿ.ಶಿವಾಂಶು ರಜಪೂತ್ ಹಾಗೂ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಅವರ ನೇತ್ರತ್ವದ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಹಾಗೂ ಗ್ರಾಮಾಂತರ ಎಸ್.ಐ.ಪ್ರಸನ್ನ ಅವರ ತಂಡದಲ್ಲಿ  ಎ ಎಸ್ ಐ ಗಿರೀಶ್, ಹೆಚ್ ಸಿ ಲೋಕೇಶ್, ಕೃಷ್ಣಾ ಕುಲಾಲ್, ಸುಜು ಹಾಗೂ ಎ ಎಸ್ ಪಿ ವಿಶೇಷ ತಂಡದ ಉದಯ ರೈ, ಪ್ರವೀಣ್ , ಪ್ರಶಾಂತ್, ವಿವೇಕ್, ಕುಮಾರ್ ಹಾಗೂ ಚಾಲಕ ವಿಜಯ್ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಅತ್ಯಂತ ಕ್ಲಿಷ್ಟಕರವಾದ ಪ್ರಕರಣವನ್ನು ಕೇವಲ 24 ಗಂಟೆಯೊಳಗೆ ಭೇದಿಸಿ ಆರೋಪಿಗಳನ್ನು ಬಂಧಿಸಿದ ಪೋಲೀಸರಿಗೆ ಸಾರ್ವಜನಿಕ ವಲಯದಲ್ಲಿ ಬಾರೀ ಪ್ರಶಂಸೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next