ಕ್ಷೇತ್ರ ಸಂಚಾರ ಸಮಾಚಾರದ ಮೂರನೇ ದಿನ ಉದಯವಾಣಿ ತಂಡ ಬಂಟ್ವಾಳ ಕ್ಷೇತ್ರದ ಸಜಿಪಮೂಡ, ಮಂಚಿ, ಕೊಳ್ನಾಡು, ಸಾಲೆತ್ತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂಚರಿಸಿತು, ಆಯ್ದ ಮತದಾರರನ್ನು ಭೇಟಿ ಮಾಡಿತು. ಈ ಭಾಗದಲ್ಲಿ ಅಭಿವೃದ್ಧಿಯ ಕುರಿತು ಪರ- ವಿರೋಧದ ಚರ್ಚೆಗಳು ನಡೆದಿವೆ, ಎಲ್ಲೂ ಮತದಾನದ ಕುರಿತು ತಾತ್ಸಾರ ಭಾವನೆ ಇಲ್ಲ. ಚುನಾವಣೆಯ ಕುರಿತು ಮತದಾರರು ಗೌರವದ ಜತೆಗೆ ನಿರೀಕ್ಷೆಯನ್ನೂ ಇರಿಸಿಕೊಂಡಿರುವುದು ಮನದಟ್ಟಾಯಿತು.ಪ್ರತೀದಿನ ಸಂಜೆಯ ವೇಳೆ ಅಂಗಡಿ-ಮುಂಗಟ್ಟುಗಳ ಮುಂದೆ, ಬಸ್ಸು ತಂಗುದಾಣಗಳಲ್ಲಿ ರಾಜ್ಯ-ದೇಶ ಮಟ್ಟದ ರಾಜಕಾರಣದ ಕುರಿತು ಚರ್ಚೆ ನಡೆಯುತ್ತದೆ. ಮೋದಿ ಹಾಗೆ ಹೇಳಿದರು, ರಾಹುಲ್ ಹೀಗೆ ಹೇಳಿದರು, ಸಿದ್ದರಾಮಯ್ಯ ಆ ಕೆಲಸ ಮಾಡಿದರು, ಯಡಿಯೂರಪ್ಪ ಈ ಕೆಲಸ ಮಾಡಿದರು ಎಂಬ ಮಾತುಕತೆ ಜೋರಾಗಿಯೇ ನಡೆಯುತ್ತಿದೆ.
Advertisement
ದೊಡ್ಡ ಸಭೆ ನಡೆದಿಲ್ಲಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಪ್ರಚಾರ ಕಾರ್ಯ, ಸಣ್ಣಮಟ್ಟಿನ ಸಭೆಗಳು ನಡೆದಿವೆಯೇ ವಿನಾ ಈ ತನಕ ಬಹಿರಂಗ ಸಭೆಗಳು ನಡೆದೇ ಇಲ್ಲ. ದೊಡ್ಡ ಮಟ್ಟದ ನಾಯಕರೂ ಇತ್ತ ಕಡೆ ಬಂದಿಲ್ಲ. ಸ್ಥಳೀಯ ನಾಯಕರೇ ಇಲ್ಲಿನ ಸ್ಟಾರ್ ಪ್ರಚಾರಕರೆನಿಸಿದ್ದಾರೆ. ಕೆಲವು ಭಾಗಗಳಿಗೆ ಅಭ್ಯರ್ಥಿಗಳೇ ಬಂದಿರುವ ಕುರಿತು ನಮಗೆ ಮಾಹಿತಿ ಇಲ್ಲ ಎನ್ನುತ್ತಾರೆ ಮತದಾರರು.
ಸಜಿಪಮೂಡ ಬೊಳ್ಳಾಯಿ ಭಾಗದಲ್ಲಿ ಚರಂಡಿ ವ್ಯವಸ್ಥೆ, ಮಂಚಿಯ ಕುಕ್ಕಾಜೆ ಭಾಗದಲ್ಲಿ ಸ್ವತ್ಛತೆಗೆ ಆದ್ಯತೆಯ ಕೂಗು ಕೇಳಿಬಂತು. ಉಳಿದಂತೆ ಭೇಟಿ ನೀಡಿದ ಯಾವುದೇ ಭಾಗದಲ್ಲಿ ಜನರು ಗಂಭೀರ ಸಮಸ್ಯೆಯನ್ನು ಹೇಳಿಕೊಂಡಿಲ್ಲ. ಆದರೆ ಒಂದಷ್ಟು ಬೇಡಿಕೆ ಪಟ್ಟಿಯನ್ನೂ ಮುಂದಿಟ್ಟಿದ್ದಾರೆ. ರಾಜಕೀಯವಾಗಿ ಈ ಭಾಗದ ಜನತೆ ಹೆಚ್ಚು ಪ್ರೌಢ ನಿಲುವಿನ ಮಾತುಗಳನ್ನಾಡುತ್ತಾರೆ. ರಾಜಕೀಯವಾಗಿ ಸಾಕಷ್ಟು ಪ್ರಜ್ಞಾವಂತಿಕೆ ಬೆಳೆಸಿಕೊಂಡಿರುವ ನಾಗರಿಕರು ಒಳ್ಳೆಯ ರಾಜಕೀಯ ವಿಶ್ಲೇಷಣೆಯನ್ನೇ ನಡೆಸಿದ್ದಾರೆ. ಕಳೆದ 5 ವರ್ಷಗಳಲ್ಲಿ ನಡೆದ ಕೆಲವು ಘಟನೆಗಳನ್ನು ಮುಂದಿರಿಸಿ, ಯಾರು ಗೆಲ್ಲುತ್ತಾರೆ- ಯಾರು ಸೋಲುತ್ತಾರೆ ಎಂಬ ಖಚಿತ ಲೆಕ್ಕಾಚಾರವೂ ಮತದಾರರಲ್ಲಿದೆ.
Related Articles
ಬೊಳ್ಳಾಯಿ ಪ್ರದೇಶದಲ್ಲಿ ಚುನಾವಣೆಯ ಕಾವು ಕಂಡುಬರುತ್ತಿದೆ. ಇಲ್ಲಿ ಸುಮಾರು ಶೇ. 80ರಷ್ಟು ಮತದಾನವಾಗುವುದು ಜನರ ಆಸಕ್ತಿಯನ್ನು ತೋರಿಸುತ್ತದೆ. ಇಲ್ಲಿನ ಚರಂಡಿ ವ್ಯವಸ್ಥೆ ಸರಿಯಾಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎನ್ನುತ್ತಾರೆ ವಿನಯ್ ಬೊಳ್ಳಾಯಿ.
Advertisement
ಸ್ವತ್ಛತೆಗೆ ಆದ್ಯತೆಚುನಾವಣೆಯ ವಾತಾವರಣ ಇದೆ. ಜನರು ಚುನಾವಣೆಯ ಕುರಿತು ಮಾತನಾಡುತ್ತಾರೆ. ಮಂಚಿಯಲ್ಲಿ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಬೇಡಿಕೆ ಇದೆ. ಪ್ರಚಾರವೂ ಜೋರಾಗಿಯೇ ನಡೆಯುತ್ತಿದೆ ಎನ್ನುತ್ತಾರೆ ಕೃಷ್ಣಪ್ರಸಾದ್ ಕುಕ್ಕಾಜೆ. ಸಣ್ಣಪುಟ್ಟ ಸಭೆಗಳು
ಎರಡೂ ಪಕ್ಷಗಳಿಂದ ಪ್ರಚಾರ ನಡೆಯುತ್ತಿದೆ. ಸಣ್ಣ ಪುಟ್ಟವು ಬಿಟ್ಟರೆ ದೊಡ್ಡ ಸಭೆಗಳು ನಡೆದಿಲ್ಲ ಎನ್ನುತ್ತಾರೆ ಮಾಧವ ಮಂಚಿ. ಜೋರಾಗಿ ಕಂಡುಬಂದಿಲ್ಲ
ನಮ್ಮ ಭಾಗದಲ್ಲಿ ದೊಡ್ಡ ಮಟ್ಟದ ಪ್ರಚಾರ ನಡೆದಿರುವುದು ಗಮನಕ್ಕೆ ಬಂದಿಲ್ಲ. ಸಾಲೆತ್ತೂರು ಭಾಗದಲ್ಲಿ ಚುನಾವಣೆಯ ಕಾವು ಬಲವಾಗಿ ಕಂಡುಬಂದಿಲ್ಲ. ಆದರೂ ಜನರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುತ್ತಾರೆ ರಫೀಕ್ ಸಾಲೆತ್ತೂರು.
– ಕಿರಣ್ ಸರಪಾಡಿ