Advertisement

ಬನ್ನಿಕುಪ್ಪೆ-ಅಂಕನಹಳ್ಳಿ ರಸ್ತೆ ದುರಸ್ತಿಗೆ ಆಗ್ರಹ

12:06 PM Jul 26, 2019 | Team Udayavani |

ರಾಮನಗರ: ತಾಲೂಕಿನ ಕೈಲಾಂಚ ಹೋಬಳಿ ಬನ್ನಿಕುಪ್ಪೆ – ಅಂಕನಹಳ್ಳಿ ರಸ್ತೆ ಹದಗೆಟ್ಟಿದ್ದು, ಶೀಘ್ರ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಆ ಭಾಗದ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

ಕವಣಾಪುರ, ಎಸ್‌.ಆರ್‌.ಎಸ್‌. ಬೆಟ್ಟ, ತೆಂಗಿನಕಲ್ಲು, ದೇವರದೊಡ್ಡಿ ಹೋಬಳಿ ಕೇಂದ್ರ ಮತ್ತು ಕೈಲಾಂಚ ಗ್ರಾಮಗಳಿಗೆ ತಲುಪಲು ಬನ್ನಿಕುಪ್ಪೆ-ಅಂಕನಹಳ್ಳಿ ರಸ್ತೆ ಪ್ರಮುಖ ರಸ್ತೆಯಾಗಿದೆ. ಈ ಭಾಗದ ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು ರಾಮನಗರಕ್ಕೆ ಬಂದು ಹೋಗಲು ಸಹ ಇದೇ ರಸ್ತೆಯನ್ನು ಅವಲಂಭಿಸಿದ್ದಾರೆ. ರೇಷ್ಮೆ ಗೂಡು, ತರಕಾರಿ ಸಾಗಾಟ ಈ ರಸ್ತೆಯಲ್ಲಿ ನಿರಂತರ ನಡೆಯುತ್ತಿರುತ್ತದೆ. ಆ ಭಾಗದಿಂದ ಚನ್ನಪಟ್ಟಣ ನಗರಕ್ಕೆ ಹೋಗಿ ಬರಲು ಸಹ ಇದೇ ರಸ್ತೆ ಸಹಕಾರಿಯಾಗುತ್ತದೆ. ಹೀಗಾಗಿ ಈ ರಸ್ತೆ ಸದಾ ವಾಹನ ಸಂಚಾರದಿಂದ ಕೂಡಿರುತ್ತದೆ. ಪ್ರಮುಖ ರಸ್ತೆಯೊಂದು ಹದಗೆಟ್ಟ ವಿಚಾರ ಗೊತ್ತಿದ್ದರು, ತಾಲೂಕು ಮತ್ತು ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ನಾಗರೀಕರು ಅರೋಪಿಸಿದ್ದಾರೆ.

ನಿರಂತರ ನಿರ್ವಹಣೆಯ ಕೊರತೆ: ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಯನ್ನು ದಶಕದ ಹಿಂದೆ ಡಾಂಬರೀಕರಣ ಮಾಡಿ ಉತ್ತಮ ರಸ್ತೆಯನ್ನಾಗಿ ನಿರ್ಮಿಸಿದ್ದರು. ಆದರೆ, ನಿರಂತರ ನಿರ್ವಹಣೆಯ ಕೊರತೆ ಕಾರಣದಿಂದ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದೆ. ಡಾಂಬರು ಮತ್ತು ಜಲ್ಲಿಕಲ್ಲುಗಳು ರಸ್ತೆಯಿಂದ ಕಿತ್ತು ಬಂದಿವೆ. ಇದೀಗ ಮಳೆಗಾಲ ಆರಂಭವಾಗಿದ್ದು, ರಸ್ತೆಯಲ್ಲಿ ನೀರು ತುಂಬುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ವಿಶೇಷವಾಗಿ ದ್ವಿಚಕ್ರ ವಾಹನ ಚಾಲನೆ ಅತ್ಯಂತ ಕಷ್ಟಕರವಾಗುತ್ತಿದೆ. ರಾತ್ರಿ ವೇಳೆ ಕೂಡ ಇದೇ ಅವಸ್ಥೆ. ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು, ಗಾಯಗೊಂಡ ಉದಾಹರಣೆಗಳು ಇವೆ ಎಂದು ತಿಳಿಸಿದ್ದಾರೆ.

ಅಧಿಕಾರಿಗಳು ಸ್ಪಂದಿಸಿಲ್ಲ: ಈ ಭಾಗದ ನಿವಾಸಿಗಳಾದ ಬಾಬು, ನಗೇಂದ್ರ, ಪ್ರದೀಪ್‌, ರಾಮಯ್ಯ, ಗೋಪಿ, ವೆಂಕಟೇಶ್‌, ರಾಜು ಎಂಬುವರು ಪ್ರತಿಕ್ರಿಯಿಸಿ, ರಸ್ತೆ ದುರಸ್ತಿ ಬಗ್ಗೆ ಹಲವಾರು ಬಾರಿ ಗ್ರಾಮ ಪಂಚಾಯ್ತಿಗಳ ಮೂಲಕ ಮತ್ತು ನೇರವಾಗಿ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಆದರೆ, ತಮ್ಮ ಅಹವಾಲಿಗೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next